ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸಿನಿಮಾದ ಜೊತೆ ಜೊತೆಗೇ ಬೇರೆ ಬೇರೆ ವಿಷಯ ಗಳಿಗೂ ಸುದ್ದಿಯಾಗಿದ್ದ ನಟಿ ರಾಧಿಕಾ ಉರೂಪ್ ರಾಧಿಕಾ ಕುಮಾರಸ್ವಾಮಿ. ಸುಮಾರು ಐದಾರು ವರ್ಷಗಳಿಂದ ಚಿತ್ರರಂಗದಿಂದ ಕೊಂಚ ಗ್ಯಾಪ್ ಪಡೆದುಕೊಂಡಿದ್ದ ರಾಧಿಕಾ ಕುಮಾರಸ್ವಾಮಿ, ಮತ್ತೆ ಕಳೆದ ಒಂದೆರಡು ವರ್ಷಗಳಿಂದ ಚಿತ್ರ ರಂಗದಲ್ಲಿ ಸಕ್ರಿಯವಾಗುತ್ತಿದ್ದಾರೆ. ಒಂದು ಕಡೆ ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಆರಂಭಿಸಿರುವ ರಾಧಿಕಾ ಚಿತ್ರಗಳ ನಿರ್ಮಾಣವನ್ನು ಶುರು ಮಾಡಿದ್ದಾರೆ. ಮತ್ತೂಂದೆಡೆ ಅಭಿನಯಕ್ಕೂ ಮರಳಿರುವ ರಾಧಿಕಾ, ಅಲ್ಲಿಯೂ ಕೂಡ ಹೊಸ ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.
ಸದ್ಯರಾಧಿಕಾ ಕುಮಾರಸ್ವಾಮಿ ಅಭಿನಯದ ಕಾಂಟ್ರಾಕ್ಟ್, ಭೈರಾದೇವಿ, ದಮಯಂತಿ ಸೇರಿದಂತೆ ಮೂರ್‍ನಾಲ್ಕು ಚಿತ್ರಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಈ ವರ್ಷಾಂತ್ಯಕ್ಕೆ ರಾಧಿಕಾ ಅಭಿನಯಿಸಿರುವ ಚಿತ್ರಗಳು ಒಂದರ ಹಿಂದೊಂದು ತೆರೆಗೆ ಬರಲಿವೆ ಎನ್ನಲಾಗುತ್ತಿದೆ.
ಇನ್ನೊಂದೆಡೆ, ರಾಧಿಕಾ ಕುಮಾರಸ್ವಾಮಿ ಅಭಿನಯಿಸಿರುವ ದಮಯಂತಿ ಚಿತ್ರವನ್ನು ಕನ್ನಡದ ಜೊತೆಗೆ, ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಭಾಷೆಯಲ್ಲೂ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸುತ್ತಿದೆ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ದಮಯಂತಿ ಚಿತ್ರವನ್ನು ನೇರವಾಗಿ ಚಿತ್ರೀಕರಣ ಮಾಡಲಾಗಿದ್ದು, ಉಳಿದಂತೆ ಮಲೆಯಾಳಂ ಮತ್ತು ಹಿಂದಿ ಭಾಷೆಗೆ ಚಿತ್ರವನ್ನು ಡಬ್ ಮಾಡಲಾಗಿದೆ. ಈಗಾಗಲೇ ದಮಯಂತಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿದ್ದು, ಇದೇ ತಿಂಗಳಾಂತ್ಯಕ್ಕೆ ದಮಯಂತಿ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.
ಇನ್ನೊಂದು ವಿಶೇಷವೆಂದರೆ, ಐದು ಭಾಷೆಯಲ್ಲಿ ರಿಲೀಸ್ ಆಗುತ್ತಿರುವ ದಮಯಂತಿ ಟೀಸರ್ ಅನ್ನು, ಆಯಾಯ ಭಾಷೆಯಲ್ಲಿ ಅಲ್ಲಿನ ಸ್ಟಾರ್ ನಟರ ಬಳಿ ಅದ್ದೂರಿಯಾಗಿ ರಿಲೀಸ್ ಮಾಡಿಸುವ ಪ್ಲಾನ್‌ನಲ್ಲಿದೆ ಚಿತ್ರತಂಡ. ಆಗಸ್ಟ್ ವೇಳೆಗೆ ದಮಯಂತಿ ಯ ಆಡಿಯೋ ಹೊರಬರಲಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ, ಸೆಪ್ಟೆಂಬರ್ ವೇಳೆಗೆ ದಮಯಂತಿ ಥಿಯೇಟರ್‌ನಲ್ಲಿ ದರ್ಶನ ಕೊಡಲಿದ್ದಾಳೆ.
ಒಟ್ಟಾರೆ ಹೊಸ ಜೋಶ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲು ತಯಾರಾಗುತ್ತಿರುವ ರಾಧಿಕಾ ಕುಮಾರಸ್ವಾಮಿ ಅವರ ದಮಯಂತಿ ಲುಕ್ ಪಂಚ ಭಾಷಾ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು ಕೆಲ ತಿಂಗಳಲ್ಲೇ ಗೊತ್ತಾಗಲಿದೆ.