ರಾಧಿಕಾ ಚೇತನ್ ಎಂದರೆ ಥ್ರಿಲ್ಲರ್ ಚಿತ್ರಗಳು, ಥ್ರಿಲ್ಲರ್ ಚಿತ್ರಗಳೆಂದರೆ ರಾಧಿಕಾ ಚೇತನ್ ಎಂಬಂತೆ ಆಗಿತ್ತು. ಏಕೆಂದರೆ, ರಾಧಿಕಾ ಚೇತನ್ ಅಭಿನಯದ ಇದುವರೆಗಿನ ಮೂರೂ ಚಿತ್ರಗಳು ಸಸ್ಪೆನ್ಸ್ ಥ್ರಿಲ್ಲರ್‌ಗಳಾಗಿದ್ದವು. “ರಂಗಿತರಂಗ’ ತಗೋತೀರಾ? “ಬಿಬಿ 5′ ಮತ್ತು “ಕಾಫಿ ತೋಟ’ ನೋಡ್ತೀರಾ? ಇವೆಲ್ಲವೂ ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ಗೆ ಸೇರಿದ ಚಿತ್ರಗಳಾಗಿದ್ದವು. ಆದರೆ, ಇದೇ ಮೊದಲ ಬಾರಿಗೆ ಅವರು ಥ್ರಿಲ್ಲರ್ ಅಲ್ಲದ ಎರಡು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ರಾಧಿಕಾ ಚೇತನ್ ಅಭಿನಯಿಸುತ್ತಿರುವ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಮತ್ತು “ಅಸತೋಮ ಸದ್ಗಮಯ’ ಚಿತ್ರಗಳೆರಡೂ ಥ್ರಿಲ್ಲರ್ ಚಿತ್ರಗಳಲ್ಲವಂತೆ. ಎರಡೂ ಚಿತ್ರಗಳಲ್ಲಿ ವಿಭಿನ್ನವಷ್ಟೇ ಅಲ್ಲ, ತೂಕದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರಂತೆ. ಈ ಮೂಲಕ ತಮ್ಮ ಇಮೇಜ್‌ನಿಂದ ಹೊರಬಂದಿದ್ದಾರೆ. ರಾಧಿಕಾ ಇದುವರೆಗೂ ಅಭಿನಯಿಸಿರುವ ಚಿತ್ರಗಳಲ್ಲಿ ಬಹುತೇಕ ಹೊಸಬರೇ ಇದ್ದಾರೆ. ಸ್ಟಾರ್‌ಗಳ ಜೊತೆಗೆ ಯಾಕೆ ಅವರು ಅಭಿನಯಿಸುತ್ತಿಲ್ಲ ಎಂಬ ಪ್ರಶ್ನೆ ಬರಬಹುದು.
ಈ ಪ್ರಶ್ನೆಗೆ ಅವರು, ಅನಂತ್‌ನಾಗ್ ಅವರಿಗಿಂತ ಸ್ಟಾರ್ ಬೇಕಾ? ಎನ್ನುತ್ತಾರೆ ಅವರು. “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದಲ್ಲಿ ಅನಂತ್‌ನಾಗ್‌ರಂತಹ ಸ್ಟಾರ್ ಜೊತೆಗೆ ಕೆಲಸ ಮಾಡೋಕೆ ಅವಕಾಶ ಸಿಕ್ಕಿದೆ. ಅದಲ್ಲದೆ ದರ್ಶನ್, ಸುದೀಪ್, ಪುನೀತ್ ಸಾರ್ ಜೊತೆಗೂ ನಟಿಸೋಕೆ ನನಗೆ ಆಸೆ ಇದೆ. ಸದ್ಯಕ್ಕೆ ಅಂತಹ ಯಾವುದೇ ಅವಕಾಶ ಸಿಕ್ಕಿಲ್ಲ. ಇನ್ನೂ ಟೈಮ್ ಇದೆ ನೋಡೋಣ’ ಎನ್ನುತ್ತಾರೆ ಅವರು.
ರಾಧಿಕಾ ಹೇಳುವಂತೆ ಅವರ ಮುಖ್ಯ ಉದ್ದೇಶ ಒಳ್ಳೆಯ ಕಥೆಗಳು ಮತ್ತು ಪಾತ್ರಗಳು ಮಾತ್ರ. “ನನಗೆ ಪಾತ್ರ ಮುಖ್ಯ. ನಾನು “ರಂಗಿತರಂಗ’ ಚಿತ್ರದಲ್ಲಿ ನಟಿಸಿದ ಮೇಲೆ, ಅದೆಷ್ಟೋ ಜನ ಬಂದು, ಮೊದಲ ಚಿತ್ರದಲ್ಲೇ ಪ್ರಗ್ನಂಟ್ ಪಾತ್ರ ಮಾಡಿದ್ರಲ್ಲಾ ಎಂದರು. ನಾನು ಬರೀ ಪಾತ್ರ ನೋಡಿದೆನೇ ಹೊರತು, ಬೇರೇನೂ ಇಲ್ಲ. ನಾನು ಮೊದಲಿಂದ ಯೋಚಿಸಿದ್ದು ಒಂದೇ ಅಂಶ. ಕಲಾವಿದೆಯಾಗಿ ಉಳಿಯಬೇಕು ಅಂತ.
ಒಬ್ಬ ಕಲಾವಿದೆಯಾಗಿ ಗುರುತಿಸಿಕೊಂಡರೆ, ಹೆಚ್ಚು ದಿನ ಉಳಿಯಬಹುದು. ಸೌಂದರ್ಯ ಬೇಗ ಹೊರಟುಹೋಗಬಹುದು. ಆದರೆ, ಅಭಿನಯ ಕೊನೆಯವರೆಗೂ ಉಳಿಯುತ್ತದೆ. ಮುದುಕಿ ಆದರೂ ಒಳ್ಳೆಯ ಪಾತ್ರಗಳು ಸಿಗುತ್ತವೆ. ಹಾಗಾಗಿ ನಾನು ಅಭಿನಯಕ್ಕೆ ಸ್ಕೋಪ್ ಇರುವ ಪಾತ್ರಗಳನ್ನೇ ಹೆಚ್ಚಾಗಿ ಹುಡುಕುತ್ತಿದ್ದೀನಿ. ನಾಳೆ ಜನ ಬಂದು ಯಾಕೆ ಯಾವ್ಯಾವುದೋ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತೀರಿ ಎಂದು ಕೇಳಬಾರದು’ ಎನ್ನುತ್ತಾರೆ ರಾಧಿಕಾ.