“ನನಗೆ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಸರ್‌ಪ್ರೈಸ್ ಗಿಫ್ಟ್ ಇದ್ದಂಗೆ. ನನ್ನ ಸಿನಿ ಜರ್ನಿಯಲ್ಲಿ “ರಂಗಿತರಂಗ’ ಗುರುತಿಸಿಕೊಳ್ಳುವಂತೆ ಮಾಡಿದರೆ, “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ನನಗೊಂದು ಹೊಸ ಇಮೇಜ್ ತಂದು ಕೊಡುತ್ತೆ ಎಂಬ ತೃಪ್ತಿಭಾವ …’
– ಹೀಗೆ ಅದಮ್ಯ ನಂಬಿಕೆಯಿಂದಲೇ ಹೇಳುತ್ತಾ ಹೋದರು ರಾಧಿಕಾ ಚೇತನ್. “ರಂಗಿತರಂಗ’ ಬೆಡಗಿಗೆ “ಹೊಟ್ಟೆ’ ಮೇಲೆ ಸಿಕ್ಕಾಪಟ್ಟೆ ಪ್ರೀತಿ. ಅದಕ್ಕೆ ಕಾರಣ, ನರೇಂದ್ರಬಾಬು (ಕಬ್ಬಡಿ) ನಿರ್ದೇಶನದ ಚಿತ್ರ ಎಂಬುದು. ಅಷ್ಟೇ ಅಲ್ಲ, ಅನಂತ್ ನಾಗ್ ಅವರೊಂದಿಗೆ ನಟಿಸಿದ್ದು “ಭಾಗ್ಯ’ ಅಂತಾನೇ ಭಾವಿಸಿದ್ದಾರೆ ರಾಧಿಕಾ ಚೇತನ್. ಅಷ್ಟಕ್ಕೂ ರಾಧಿಕಾ ಚೇತನ್, “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದ ಕಥೆ ಕೇಳಿದಾಗ, ಇಂಥದ್ದೊಂದು ಪಾತ್ರ ಮುಂದೆ ಸಿಗುತ್ತೋ ಇಲ್ಲವೋ ಎಂಬ ಯೋಚನೆ ಮೂಡಿದ್ದು ಸುಳ್ಳಲ್ಲವಂತೆ. ಆ ಕುರಿತು ಸ್ವತಃ ರಾಧಿಕಾ ಚೇತನ್ ಹೇಳುವುದು ಹೀಗೆ.
“ನಾನು ಯಾವುದೇ ಕಥೆ, ಪಾತ್ರ ಕೇಳಿದಾಗಲೂ ಅಲ್ಲಿ ಏನೆಲ್ಲಾ ವಿಶೇಷತೆ ಇದೆ ಅಂತ ಯೋಚಿಸುತ್ತೇನೆ. ಆ ನಂತರ ಸಮಯ ಪಡೆದು ಆ ಚಿತ್ರ ಮಾಡಬೇಕೋ ಬೇಡವೋ ಎಂಬ ಬಗ್ಗೆ ನಿರ್ಧರಿಸುತ್ತೇನೆ. ಆದರೆ, “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಸ್ಕ್ರಿಪ್ಟ್ ಕೇಳಿದಾಗ, ಬೇರೆ ಯೋಚನೆಯೇ ಬರಲಿಲ್ಲ. ತಕ್ಷಣ ಒಪ್ಪಿಕೊಂಡೆ. ಕಾರಣ, ಆ ಕಥೆ ಮತ್ತು ಪಾತ್ರ. ಆ ಪಾತ್ರದಲ್ಲೇನೋ ವಿಶೇಷತೆ ತುಂಬಿತ್ತು. ಅದೊಂದು ಆಧುನಿಕ ನಾರಿ ಪಾತ್ರವೆಂದರೂ ತಪ್ಪಲ್ಲ. ತುಂಬಾನೇ ಮೌಲ್ಯಗಳಿರುವ ಕಥೆ ಅದು. ಸಂಬಂಧಗಳ ಬಗೆಗಿನ ಅಭಿಪ್ರಾಯಗಳು ತುಂಬಿಕೊಂಡಿವೆ. ಒಂದು ಕಾರ್ಪೋರೇಟ್ ಲೆವೆಲ್‌ನಲ್ಲಿ ಮಹಿಳೆ ಹೇಗಿರಬೇಕೆಂಬ ಬಗೆಗಿನ ಚಿತ್ರಣ ಅಲ್ಲಿದೆ. ಅದೊಂದು ಚಾಲೆಂಜಿಂಗ್ ಪಾತ್ರ. ಅದು ಹೇಗೆ ಎಮೋಷನಲ್ ಗ್ರಾಫ್ಗೆ ಕೊಂಡೊಯ್ಯುತ್ತೆ ಅನ್ನೋದೇ ಕುತೂಹಲಕಾರಿ. ಚಿತ್ರದ ಇನ್ನೊಂದು ಆಕರ್ಷಣೆ ಅಂದರೆ, ಅದು ಅನಂತ್‌ನಾಗ್. ಅಂತಹ ಹಿರಿಯ ಕಲಾವಿದರೊಂದಿಗೆ ನಟಿಸಿದ್ದೇ ನನ್ನ ಭಾಗ್ಯ’ ಎಂಬುದು ರಾಧಿಕಾ ಚೇತನ್ ಮಾತು.
ಅನಂತ್‌ನಾಗ್ ಅವರೊಂದಿಗಿನ ಕೆಲಸ ಇದುವರೆಗಿನ ಅತ್ಯುತ್ತಮ ಅನುಭವ ಎನ್ನುವ ರಾಧಿಕಾ ಚೇತನ್, ಅವರು ಕೊಟ್ಟಂತಹ ಸಲಹೆ, ಸೂಚನೆಗಳು ಸಿನಿ ಲೈಫ್ ಗೊಂದು ಚೈತನ್ಯ ಮೂಡಿದಂತೆ ಎಂದು ನಂಬಿದ್ದಾರೆ. “ಅನಂತ್‌ನಾಗ್ ಸರ್, ತಮ್ಮ ಸಿನಿ ಜರ್ನಿಯ ಹಲವು ವಿಷಯಗಳನ್ನು ಹಂಚಿಕೊಂಡಿದ್ದು, ನನ್ನ ಭವಿಷ್ಯದಲ್ಲಿ ಕೆಲವನ್ನು ಅಳವಡಿಸಿಕೊಳ್ಳಬೇಕೆನಿಸಿದ್ದು ಸುಳ್ಳಲ್ಲ. ಅವರಿಂದ ನಾನು ಸಾಕಷ್ಟು ಕಲಿತುಕೊಂಡೆ. ಅಷ್ಟು ದೊಡ್ಡ ನಟರಾದರೂ, ತಮ್ಮ ಪಾತ್ರದಲ್ಲಿ ತೊಡಗಿಕೊಳ್ಳುತ್ತಿದ್ದ ರೀತಿ, ಪ್ರತಿ ದಿನ ಸ್ಕ್ರಿಪ್ಟ್ ಹಿಡಿದೇ ಸೆಟ್‌ಗೆ ಬರುತ್ತಿದ್ದ ಶಿಸ್ತು, ಶ್ರದ್ಧೆ ನೋಡಿ ಅಚ್ಚರಿಪಟ್ಟೆ. ನಾನೆಂದೂ ಸ್ಕ್ರಿಪ್ಟ್ ಹಿಡಿದು ಹೋದವಳಲ್ಲ. ಅವರನ್ನು ನೋಡಿ ನಾನೂ ಮರು ದಿನದಿಂದ ಸ್ಕ್ರಿಪ್ಟ್ ಹಿಡಿದು ಹೋಗುವಂತಾಯ್ತು. ನನ್ನ ಇಡೀ ಪಾತ್ರವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲು ಕಾರಣರಾದರು. ಅವರ ಚಿತ್ರರಂಗದ ಅನುಭವ, ಆಗು, ಹೋಗು ಕುರಿತು ಹೇಳಿದ್ದು, ನಮಗೆ ಇನ್ನಷ್ಟು ಧೈರ್ಯ ತುಂಬಿದಂತಾಯ್ತು. ಅವರ ಮಾತುಗಳು, ಸರಳತನ ಮಾದರಿ ಎನಿಸಿದ್ದೂ ಹೌದು’ ಎನ್ನುವ ರಾಧಿಕಾ ಚೇತನ್, ಸಿನಿಮಾ ಬಗ್ಗೆಯೂ
ಅಷ್ಟೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
“ಇದು ಎರಡು ಜನರೇಷನ್ ಕಥೆ ಹೊಂದಿದೆ. ಒಂದು ಅನಂತ್‌ನಾಗ್ ಅವರ ಕಥೆ ಸಾಗಿದರೆ, ಇನ್ನೊಂದು ನನ್ನ ಜನರೇಷನ್ ಕಥೆ ತೆರೆದುಕೊಳ್ಳುತ್ತೆ. ಮುಖ್ಯವಾಗಿ ಲಿವಿಂಗ್ ರಿಲೇಷನ್‌ಶಿಪ್ ಕುರಿತಾದ ಹೂರಣವಿದೆ. ಈ ಎರಡೂ ಕಥೆಗಳಲ್ಲಿ ಸೂಕ್ಷ್ಮತೆಗಳಿವೆ. ಭದ್ರತೆ, ಅಭದ್ರತೆ ಕುರಿತಾದ ಅಂಶಗಳಿವೆ. ಇಲ್ಲಿ ಇನ್ನೊಂದು ವಿಶೇಷವೆಂದರೆ, ನಿರ್ದೇಶಕರು, ಎಲ್ಲಿಯೂ ನೇರವಾಗಿ ಹೇಳದೆ, ಒಂದೊಂದೇ ಅಂಶವನ್ನು ಮೆಲ್ಲನೆ ಕನೆಕ್ಟ್ ಮಾಡುತ್ತಾ ಹೋಗುತ್ತಾರೆ. ನೋಡುಗರಿಗೆ ಎಲ್ಲವನ್ನೂ ಅಲ್ಲೇ ಕ್ಲಿಯರ್ ಮಾಡುತ್ತಾರೆ. ಆ ಕಾರಣಕ್ಕೆ ಚಿತ್ರ ಎಲ್ಲಾ ವರ್ಗಕ್ಕೂ ಹಿಡಿಸುತ್ತದೆ. “ರಂಗಿತರಂಗ’ ಗುರುತಿಸಿದರೆ, “ಹೊಟ್ಟೆಗಾಗಿ…’ ಚಿತ್ರ ನನಗೊಂದು ಹೊಸ ಇಮೇಜ್ ತಂದುಕೊಡುವ ವಿಶ್ವಾಸವಿದೆ. ಅನಂತ್ ಸರ್ ಇಡೀ ಚಿತ್ರತಂಡಕ್ಕೆ ಮೆಂಟರ್. ಪ್ರತಿ ಹಂತದಲ್ಲೂ ಇದನ್ನು ಹೀಗೆ ಮಾಡಿದರೆ, ಹಾಗಾಗುತ್ತೆ, ಹಾಗೆ ಮಾಡಿದರೆ ಹೀಗಾಗುತ್ತೆ ಅಂತ ಸಲಹೆ ಕೊಟ್ಟು, ಚಿತ್ರವನ್ನು ಹೊಸ ರೀತಿಯಲ್ಲಿ ಮೂಡಿಬರಲು ಕಾರಣರಾಗಿದ್ದಾರೆ. ಅವರಷ್ಟೇ ಅಲ್ಲ, ಗಾಯತ್ರಿ ಮೇಡಮ್ ಸಹ, ಸಾಕಷ್ಟು ಸಲಹೆ ಕೊಟ್ಟಿದ್ದಾರೆ.
ಪಿಕೆಎಚ್ ದಾಸ್ ಅವರ ಕೈಚಳಕದಲ್ಲೂ ಚಿತ್ರ ಅದ್ಧೂರಿಯಾಗಿದೆ. ಒಂದೊಳ್ಳೆಯ ತಂಡದ ಜತೆ ಕೆಲಸ ಮಾಡಿದ ಅನುಭವ ಕೊನೆಯವರೆಗೂ ಮರೆಯುವಂತಿಲ್ಲ. ಹಾಗಾಗಿ ಈ ಚಿತ್ರ ನನಗೊಂದು ಸರ್‌ಪ್ರೈಸ್ ಗಿಫ್ಟ್. “ಹೊಟ್ಟೆ ಮತ್ತು ಬಟ್ಟೆ’ ಎಲ್ಲರಿಗೂ ಎಲ್ಲಾ ಕಾಲಕ್ಕೂ ಮುಖ್ಯ’ ಎನ್ನುವ ರಾಧಿಕಾ ಚೇತನ್, ಮುಂದಿನ ವಾರ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರವನ್ನು ಎದುರು ನೋಡುತ್ತಿದ್ದಾರೆ. “ಹೊಟ್ಟೆಗಾಗಿ’ ನಂತರ ಅವರ ಮಂದಿನ “ಅಸತೋಮ ಸದ್ಗಮಯ’ ಚಿತ್ರ ಕೂಡ ತೆರೆಗೆ ಬರಲು ಸಜ್ಜಾಗಿದೆ. ಅಲ್ಲೂ ಬೇರೆಯದ್ದೇ ಪಾತ್ರ, ಕಥೆ ಇದೆ ಎಂಬುದು ಅವರ ಮಾತು