Advertisement

ರಾಧೇಯ: ಒಂದೆರಡು ಅನಿಸಿಕೆಗಳು

08:04 AM Jul 28, 2017 | |

ಉಡುಪಿಯ ಯಕ್ಷಗಾನ ಕಲಾರಂಗ ಆಯೋಜಿಸಿದ “ರಾಧೇಯ’ ಬಡಗು ತಿಟ್ಟು ಯಕ್ಷಗಾನ ಪ್ರಸ್ತುತಿಯನ್ನು ವೀಕ್ಷಿಸಿದ ಬಳಿಕ ನನಗನಿಸಿದ್ದು ಹೀಗೆ:

Advertisement

ಕುಂತೀಭೋಜನಿಂದ ತೊಡಗಿ ಕುರುಕ್ಷೇತ್ರದಲ್ಲಿ ಕರ್ಣನ ಕಾಯಕ ಆರಂಭಗೊಳ್ಳುವವರೆಗೆ ಸಂಯೋಜಕರು ಕಥಾಭಾಗವನ್ನು ಉತ್ತಮವಾಗಿ ಪೋಣಿಸಿದ್ದಾರೆ. ನಿಗದಿತ ಸಮಯದೊಳಗೆ ಆಖ್ಯಾನವನ್ನು ಮುಗಿಸಬೇಕೆಂದಿದ್ದರೆ ಕೆಲವು ಕಡೆಗಳಲ್ಲಿ “ಕತ್ತರಿ ಪ್ರಯೋಗ’ ಆವಶ್ಯಕ. ಕೆಲವು ಭಾಗಗಳನ್ನು ತ್ಯಜಿಸಬಹುದು ಅಥವಾ ಮೊಟಕುಗೊಳಿಸಬಹುದು. ಅನುಭವವಿರುವ ಹಿರಿಯರ ಸಲಹೆಯಂತೆ ಆ ಕಾರ್ಯವನ್ನು ಮಾಡಬಹುದು.

ಉಡುಪಿ, ಕುಂದಾಪುರ ತಾಲೂಕುಗಳಲ್ಲಿ ನೆಲೆನಿಂತ ನಡುತಿಟ್ಟಿನ ಪ್ರಾತಿನಿಧಿಕ ಪ್ರಸಂಗ “ಕರ್ಣಾರ್ಜುನ’. ಹಾರಾಡಿ ರಾಮ ಗಾಣಿಗರಿಗೆ ರಾಷ್ಟ್ರ ಪ್ರಶಸ್ತಿ ಸಿಗುವಲ್ಲಿ ಕುರುಕ್ಷೇತ್ರದ ಈ “ಅತುಳಬಲ’ ಕರ್ಣ ಮಹತ್ತರ ಪಾತ್ರ ವಹಿಸಿದ್ದಾನೆ ಎಂಬುದು ಆ ಪಾತ್ರ ಪರಿಚಯವಿರುವ ಕಲಾಭಿಮಾನಿಗಳೆಲ್ಲರೂ ಒಪ್ಪತಕ್ಕ ಮಾತು. ರಾಧೇಯ ಕಥಾನಕ ರಂಜನೀಯವಾಗಬೇಕಾದರೆ ಕುರುಕ್ಷೇತ್ರದ ಪೂರ್ವ ಭಾಗದಲ್ಲಿ , ಮೇಲೆ ಹೇಳಿದಂತೆ ಸಂಸ್ಕರಿಸಿದ ಕಥಾಭಾಗದೊಂದಿಗೆ ಉತ್ತರಾರ್ಧದಲ್ಲಿ ನಮ್ಮ ಬಡಗುತಿಟ್ಟಿನ ಕರ್ಣಾರ್ಜುನ ಪ್ರಸಂಗವನ್ನು ಹಾಗೆಯೇ ಉಳಿಸಬೇಕು. ಈ “ಅತುಳಬಲ ಕರ್ಣ’ನನ್ನು ಮೂರ್ತರೂಪಕ್ಕಿಳಿಸಲು ಆಗಿ ಹೋದ ಕಲಾವಿದರ ಮಟ್ಟಕ್ಕೆ ನಿಲ್ಲತಕ್ಕ ಕಲಾವಿದರು ಇಂದು ನಮ್ಮಲ್ಲಿ ಇಲ್ಲವೆಂಬ ಅಭಿಪ್ರಾಯವಿರಬಹುದು (ಈ ಮಾತು ಎಲ್ಲ ತಿಟ್ಟುಗಳಿಗೂ ಅನ್ವಯಿಸುವಂಥದ್ದು). ಆದರೂ ಅವರ ಪಳೆಯುಳಿಕೆಗಳಂತೆ ಈ ಭಾಗವನ್ನು ಅಭಿನಯಿಸಬಲ್ಲ ಕಲಾವಿದರು ಈಗಲೂ ಇದ್ದಾರೆ. “ಕರ್ಣಾವಸಾನ’ದ ಕರ್ಣನ ಪಾತ್ರವನ್ನು ತಮ್ಮ ವೃತ್ತಿ ಜೀವನದಲ್ಲಿ ಕಡಿಮೆ ಪಕ್ಷ ಹತ್ತು -ಹದಿನೈದು ಬಾರಿ ಅಭಿನಯಿಸಿದವರು ಈಗಲೂ ಇದ್ದಾರೆ. ಈ ಕಥಾಭಾಗದ ಕರ್ಣ, ಶಲ್ಯ, ಅರ್ಜುನ, ಶ್ರೀಕೃಷ್ಣ – ಪಾತ್ರಗಳನ್ನು ನಡುತಿಟ್ಟಿನ ಕಲಾವಿದರಿಂದಲೇ ಮಾಡಿಸಿದರೆ “ರಾಧೇಯ’ ಪ್ರಸಂಗ ಇನ್ನಷ್ಟು ಕಳೆಗಟ್ಟುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಜುಲೈ 10ರಂದು ಕಲಾರಂಗದ ಕಚೇರಿಯಲ್ಲಿ ಜರಗಿದ ತೆಂಕು-ಬಡಗು ಪ್ರದರ್ಶನಗಳ ಅವಲೋಕನ ಕಾರ್ಯಕ್ರಮದಲ್ಲಿ ಅನೇಕ ಯಕ್ಷಗಾನ ಕಲಾಭಿಮಾನಿಗಳು ತಮ್ಮ ಅಭಿಮತವನ್ನು ಮಂಡಿಸಿದ್ದಾರೆ. ಅಂದು ತೀವ್ರ ಚರ್ಚೆಗೆ ಒಳಪಟ್ಟಿದ್ದು ಬಡಗುತಿಟ್ಟಿನ “ರಾಧೇಯ’. ಕಟ್ಟು ಮೀಸೆಯ ವೇಷವನ್ನು ಧರಿಸಿ ತೆಂಕುತಿಟ್ಟಿನ ಕಲಾವಿದರು “ಮಹಾಪ್ರಸ್ಥಾನ’ ಆಖ್ಯಾನದಲ್ಲಿ ವಿಜೃಂಭಿಸಿದ್ದಾರೆ; ಬಡಗುತಿಟ್ಟಿನ ಕಲಾವಿದರು ಈ ವಿಷಯದಲ್ಲಿ ಅಸಡ್ಡೆ ತೋರಿರುವುದು ಏಕೆಂದು ಅರ್ಥವಾಗುವುದಿಲ್ಲ. ಕಟ್ಟುಮೀಸೆಯ ಬಗ್ಗೆ “ಅವಲೋಕನ’ ಕಾರ್ಯಕ್ರಮದಲ್ಲಿ ಸಾಕಷ್ಟು ಅನಿಸಿಕೆಗಳು ಮುಂಬಂದಿವೆ. 

ಎ. ಜೆ. ಡಿ’ಸೋಜಾ, ಉಡುಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next