Advertisement

ಕೊಳಲ ತೊರೆದ ಕೃಷ್ಣ ಮತ್ತು ಕೊಳಲ ಕೊಂಡ ರಾಧೆ

06:24 PM Jun 13, 2019 | mahesh |

ಕೃಷ್ಣನ ಕೊಳಲಿನ ಕರೆಗೆ ಓಡೋಡಿ ಬರುವ ಗೋಪಬಾಲ, ಬಾಲೆಯರ ಅಳಲು ಕೊಳಲಗಾನವಾಗಿ ಮತ್ತೆ ಬೃಂದಾವನವನ್ನು ತುಂಬಿಕೊಳ್ಳುತ್ತದೆ. ಕೃಷ್ಣನಿಂದ ಬೇರ್ಪಟ್ಟ ಕೊಳಲನ್ನು ರಾಧೆ ತನ್ನ ಎದೆಗಪ್ಪಿಕೊಳ್ಳುತ್ತಾಳೆ. ಇಂಥದೊಂದು ದೃಶ್ಯಕಾವ್ಯವನ್ನು ಪು. ತಿ. ನ.ಅವರು ನವಿರಾದ ಕಾವ್ಯಭಾಷೆಯಲ್ಲಿ ನಿರೂಪಿಸಿದ್ದಾರೆ.

Advertisement

ಬೃಂದಾವನವೆಂದರೆ ಅದೊಂದು ಆನಂದದ ತಾಣ. ಭವದ ಬಂಧನವ ಹರಿದು, ಬಳಲಿದ ಮನವ ಸಂತೈಸುವ ಸುಂದರ ಬನ. ರಾಸನೃತ್ಯದ ಮೂಲಕ ಶೃಂಗಾರದ ತುರೀಯಾವಸ್ಥೆಯನ್ನು ತಲುಪಲು ಗೋಕುಲದ ಯುವಕ ಯುವತಿಯರು ಧಾವಿಸಿ ಬರುವ ಪ್ರೇಮದೇಗುಲ. ಕೃಷ್ಣ ಮತ್ತು ರಾಧೆ ಎಲ್ಲರಲ್ಲೂ ಚೈತನ್ಯವುಕ್ಕಿಸುವ ಪ್ರೇಮಪ್ರತಿಮೆಗಳು ಅಲ್ಲಿ. ಪ್ರೇಮಜಲವು ತುಂಬಿತುಳುಕುವ ಸುಂದರ ಸರೋವರದಂತಹ ಬೃಂದಾವನದಲ್ಲಿ ಮಥುರೆಯ ಕಂಸನ ರಾಯಭಾರಿ ಅಕ್ರೂರನ ಆಗಮನದಿಂದ ಸಣ್ಣಗೆ ಅಲೆಗಳೇಳಲು ಆರಂಭಗೊಳ್ಳುತ್ತದೆ. ಕೃಷ್ಣ ಎಂದಿದ್ದರೂ ರೀತಿಗೆ ಸೋಲುವವನು ಎಂಬುದನ್ನು ಮನಗಂಡ ಅಕ್ರೂರ ಸರಸ, ರಾಸ, ಲಲನೆಯರಿಂದ ದೂರವಿರುವ ಬಲರಾಮನ ಮೂಲಕ ತನ್ನ ಕೆಲಸವನ್ನು ಸಾಧಿಸಿಕೊಳ್ಳುತ್ತಾನೆ. ಬಲರಾಮ ಗೋಕುಲದ ಎಲ್ಲ ಬಂಧನವನ್ನೂ ತೊರೆದು ಮಥುರೆಯಲ್ಲಿ ನಡೆಯುವ ಬಿಲ್ಲಹಬ್ಬಕ್ಕೆ ಹೋಗಲು ತನ್ನ ಬೆಂಬಲಿಗರನ್ನೆಲ್ಲ ಸಜ್ಜುಗೊಳೊಸಿಕೊಂಡು ಕೃಷ್ಣನೆದುರು ನಿಲ್ಲುತ್ತಾನೆ. ಕೊಳಲ ತೊರೆಯೆನೆಂಬ ತಮ್ಮನ ಹಠವನ್ನು ನಿರ್ಲಕ್ಷಿಸಿ ಅವನ ಕೈಯ್ಯ ಕೊಳಲನ್ನು ತೆಗೆದೆಸೆಯುತ್ತಾನೆ. ತನ್ನಂಗವೊಂದು ತನ್ನಿಂದ ಭಿನ್ನವಾದಂತೆ ಪರಿತಪಿಸುವ ಕೃಷ್ಣನಿಗೆ ಯೋಚಿಸಲು ಸಮಯವನ್ನೇ ನೀಡದೇ ತನ್ನೊಂದಿಗೆ ಮಥುರೆಗೆ ಕರೆದೊಯ್ಯುತ್ತಾನೆ. ಅಲ್ಲಿಗೆ ಗೋಕುಲದಿಂದ ಕೃಷ್ಣನ ನಿರ್ಗಮನವಾಗುತ್ತದೆ. ಕೃಷ್ಣನ ಕೊಳಲಿನ ಕರೆಗೆ ಓಡೋಡಿ ಬರುವ ಗೋಪಬಾಲ, ಬಾಲೆಯರ ಅಳಲು ಕೊಳಲಗಾನವಾಗಿ ಮತ್ತೆ ಬೃಂದಾವನವನ್ನು ತುಂಬಿಕೊಳ್ಳುತ್ತದೆ. ಕೃಷ್ಣನಿಂದ ಬೇರ್ಪಟ್ಟ ಕೊಳಲನ್ನು ರಾಧೆ ತನ್ನ ಎದೆಗಪ್ಪಿಕೊಳ್ಳುತ್ತಾಳೆ. ಇಂಥದೊಂದು ದೃಶ್ಯಕಾವ್ಯವನ್ನು ಪು. ತಿ. ನ.ಅವರು ನವಿರಾದ ಕಾವ್ಯಭಾಷೆಯಲ್ಲಿ ನಿರೂಪಿಸಿದ್ದಾರೆ. ಪು. ತಿ. ನ. ಅವರ ಈ ಕಾವ್ಯವನ್ನು ಇತ್ತೀಚೆಗೆ ಅರೆಹೊಳೆ ಪ್ರತಿಷ್ಠಾನದ ಕಲಾ ತಂಡ, ನಂದಗೋಕುಲ, ಮಂಗಳೂರು ಇವರು ನೃತ್ಯರೂಪಕವಾಗಿ ಪ್ರದರ್ಶಿಸಿದರು. ನೃತ್ಯ ಹಾಗೂ ರಂಗಭೂಮಿ ಸುಂದರವಾಗಿ ಮಿಳಿತಗೊಂಡ ಈ ಪ್ರದರ್ಶನ ಅತ್ತಿತ್ತ ಕಣ್ಣುಮಿಟುಕಿಸದಂತೆ ನೋಡುಗರನ್ನು ಹಿಡಿದಿಟ್ಟಿತು. ಲವಲವಿಕೆಯ ನರ್ತನ, ಚಿಮ್ಮುವ ನಡಿಗೆ, ಬಣ್ಣಬಣ್ಣದ ಪರದೆಗಳು ಮತ್ತು ಬೆಳಕಿನ ವಿನ್ಯಾಸದ ಮೂಲಕ ಕಲಾವಿದೆಯರು ಬೃಂದಾವನದ ರಮ್ಯತೆಯನ್ನು ನೋಡುಗರೆದುರು ತೆರೆದಿಟ್ಟರು. ಭಾವಪೂರ್ಣವಾದ ಅಭಿನಯದ ಮೂಲದ ಕೃಷ್ಣನ ಬರವಿಗೆ ಕಾದಿರುವ ರಾಧೆಯ ಪಾತ್ರ ಅನಾವರಣಗೊಂಡಿತು. ಕೃಷ್ಣನ ಆಗಮನದೊಂದಿಗೆ ಚೆಂದದೊಂದು ರಸಲೋಕ ರಂಗದಲ್ಲಿ ಸೃಷ್ಟಿಗೊಂಡಿತು. ಶೃಂಗಾರವೊಲ್ಲದ ಬಲರಾಮನ ನಡೆಯನ್ನು ಕಲಾವಿದೆ ಗಂಭೀರವಾಗಿ ನಿರೂಪಿಸಿದರು. ಶ್ಯಾಮ ರಾಧೆಯರ ರಾಸನೃತ್ಯವು ಸೊಗಸಾಗಿತ್ತು. ಕೃಷ್ಣ ರಾಧೆಯರ ಏಕಾಂತದ ದೃಶ್ಯದಲ್ಲಿ ರಚಿಸಲ್ಪಟ್ಟ ರಂಗವಿನ್ಯಾಸ ವಿಭಿನ್ನ ಬೆಳಕಿನ ಹಿನ್ನೆಲೆಯಲ್ಲಿ ಒಮ್ಮೆ ಲತಾ ಮಂಟಪದಂತೆಯೂ, ಇನ್ನೊಮ್ಮೆ ಪರ್ಣ ಕುಟೀರದಂತೆಯೂ, ಮತ್ತೂಮ್ಮೆ ಯಮುನಾ ನದಿಯಲ್ಲಿ ತೇಲುವ ನಾವೆಯಂತೆಯೂ ಕಂಡುಬಂದು ರಂಗದ ಚೆಲುವನ್ನು ಇಮ್ಮಡಿಗೊಳಿಸಿತು. ಬಿಲ್ಲಹಬ್ಬಕ್ಕೆ ಹೊರಡುವ ಮಥುರೆಯ ದಂಡು ಪ್ರೇಕ್ಷಕರ ಗ್ಯಾಲರಿಯಿಂದ ರಂಗಕ್ಕೆ ಪ್ರವೇಶವಾದುದು ವಿಶೇಷವಾಗಿತ್ತು. ಕೇವಲ ಯುವಕರು ಮಾತ್ರವಲ್ಲ, ಗೋಕುಲದ ವೃದ್ಧರೂ ಕೃಷ್ಣನ ಕೊಳಲಿನ ಗಾನಕ್ಕೆ ಮರುಳಾಗುವ ದೃಶ್ಯ ಬಿಡುಗಡೆಯನ್ನು ಬಯಸುವ ಮನುಷ್ಯನ ಸಹಜ ಸ್ವಭಾವಕ್ಕೆ ಹಿಡಿದ ಕೈಗನ್ನಡಿಯಂತಿತ್ತು. ಬಿಟ್ಟುಹೋಗದಿರೆಂದು ಅಂಗಾಲಾಚುವ ಗೋಪಿಕೆಯರಿಗೆ ತಾನು ಮರಳಿ ಬರುವೆನೆಂದು ಕೃಷ್ಣ ವಚನ ನೀಡುವ ದೃಶ್ಯದಲ್ಲಿ ಕಣ್ಣಂಚು ಒದ್ದೆಯಾಯಿತು. ಕೊನೆಯ ದೃಶ್ಯದಲ್ಲಿ ರಾಧೆ ಕೃಷ್ಣ ತೊರೆದ ಕೊಳಲನ್ನು ಮತ್ತೆ ಎದೆಗಪ್ಪಿಕೊಂಡು ನುಡಿಸುವ ಮೂಲಕ ಬೃಂದಾವನವೆಂಬ ಆನಂದತಾಣ ಕೃಷ್ಣನ ಅನುಪಸ್ಥಿತಿಯಲ್ಲಿಯೂ ಮತ್ತೆ ಉಳಿಯುವದೆಂಬ ಭರವಸೆಯನ್ನು ಮೂಡಿಸಿತು.

ಶ್ವೇತಾ ಅರೆಹೊಳೆ ಈ ನೃತ್ಯರೂಪಕವನ್ನು ನಿರ್ದೇಶಿರುವುದಲ್ಲದೇ ಕೃಷ್ಣನ ಪಾತ್ರಕ್ಕೂ ನ್ಯಾಯವನ್ನು ಒದಗಿಸಿದ್ದಾರೆ. ರಾಧೆಯಾಗಿ ಧನ್ಯ ಅಡ್ತಲೆ, ಅಕ್ರೂರನಾಗಿ ವಿಮರ್ಶ ಮತ್ತು ಬಲರಾಮನಾಗಿ ಭೂಮಿಕಾ ಗಟ್ಟಿ ಅವರ ಅಭಿನಯ ಸೊಗಸಾಗಿತ್ತು. ಗೀತಾ ಅರೆಹೊಳೆಯವರ ವಸ್ತ್ರವಿನ್ಯಾಸ ನಾಟಕಕ್ಕೆ ಹೊಸದೊಂದು ಕಳೆನೀಡಿತ್ತು. ಬೆಳಕಿನಲ್ಲಿ ಕ್ರಿಸ್ಟಿ ನೀನಾಸಂ ಅವರು ಸಹಕರಿಸಿದ್ದರು.

– ಸುಧಾ ಆಡುಕಳ

Advertisement

Udayavani is now on Telegram. Click here to join our channel and stay updated with the latest news.

Next