ಅರೆಹೊಳೆ ಪ್ರತಿಷ್ಠಾನ ಮಂಗಳೂರು, ನಾಟ್ಯರಂಗ ಪುತ್ತೂರು ಇವರುಗಳ ಪ್ರಸ್ತುತಿ- ರಾಧಾ. ತನ್ನ ಗೆಜ್ಜೆಯನ್ನ ರಾಧಾಳಿಗೆ ತೊಡಿಸಿ ಅವಳ ಹೆಜ್ಜೆ ತನ್ನದಾಗಿಸಿಕೊಳ್ಳುವ ಶಾಮನ ಕಥೆಯನ್ನ ರಾಧೆ ಹೇಳುತ್ತಾಳೆ. ಶ್ರೀಪಾದ ಭಟ್ ನಿರ್ದೇಶನದಲ್ಲಿ ರಾಧೆ, ಕೃಷ್ಣನ ಕಥೆಯ ಭಾಗವಾಗಿಯೂ ತಾನೊಂದು ಕಥೆಯಾಗುತ್ತಾ ಹೋಗುವಲ್ಲಿ ಮಂಜುಳ ಸುಬ್ರಹ್ಮಣ್ಯರ ಭಾವಾಭಿವ್ಯಕ್ತಿ ಚೆನ್ನಾಗಿ ಮೂಡಿಬಂದಿದೆ. ನವಿಲುಗರಿಯ ಪುಳಕದಿಂದಲೇ ಶಾಮನನ್ನು ಅವನ ಒಲವನ್ನು ಅಸ್ವಾದಿಸುವ ರಾಧಾ, ತನ್ನ ಬದುಕಿನಲ್ಲಿ ಕೃಷ್ಣನಿಗಾಗಿ ನಿತ್ಯ ಹಂಬಲಿಸುತ್ತಾ, ಪ್ರೀತಿಯನ್ನು ಹೃದಯದಲ್ಲಿ ಹಸಿಯಾಗಿಯೇ ಉಳಿಸಿಕೊಂಡು, ಎಲ್ಲೋ ಒಂದು ಹಂತದಲ್ಲಿ ಪ್ರತಿ ಹೆಣ್ಣನ್ನು ಚಿರವಿರಹಿಯಾಗಿಯೇ ಉಳಿಸಿಬಿಡುವಂತಹ ಅಂತಃಸತ್ವದ ಭಾವವೇ ಆಗಿಬಿಡುತ್ತಾಳೆ. ಈ ನಾಟಕದಲ್ಲಿ ಎಲ್ಲೆಡೆ ಕಾಣಿಸುವ ರಾಧಾ ಶಾಮರ ಪ್ರೇಮದ ಉತ್ಕಟೆಗಿಂತ ರಾಧೆಯ ವಿರಹ, ರಾಧೆಯ ಉಳಿದು ಹೋಗುವ ಪ್ರೀತಿ ಪ್ರೇಕ್ಷಕರಲ್ಲೂ ಉಳಿಸಿಬಿಡುತ್ತದೆ.
ಸುಧಾ ಅಡುಕೂಲ ಅವರ ಬರಹದಲ್ಲಿ ರಾಧೆ ಇಲ್ಲಿ ಶಕ್ತಿ, ಶಾಮನಿಗಾಗಿ ಹುಟ್ಟಿದ ಪ್ರೀತಿಯಲ್ಲ. ಶಾಮನನ್ನು ಮರೆತು ಬಿಡು ಅಂದ ಅಕ್ರೂರನ ಮಾತಿಗೆ ತಲೆಬಾಗಿ ಬೃಂದಾವನದಲ್ಲಿ ಶಾಮನನ್ನು ಪ್ರಕೃತಿಯಲ್ಲಿ ಹುಡುಕುತ್ತಾ ನಾನು ಹೊರಡಬೇಕು ಬಹಳ ದೂರ ಅನ್ನುತ್ತಾಳೆ ರಾಧೆ. ಮೊದಲ ಬಾರಿಗೆ ಚಿಕ್ಕಮ್ಮನ ಮುಖದಲ್ಲಿ ಕಂಡ ಅಮ್ಮನ ರೂಪ ಅನ್ನುವಲ್ಲಿ ಪ್ರೀತಿ ಶಾಮನ ಸ್ವತ್ತಲ್ಲ ಅವನೊಂದು ಭಾವರೂಪ ಮಾತ್ರ ಅನ್ನುತ್ತದೆ ನಾಟಕ. ಕಟ್ಟುವವರು ಯಾರೆಂಬುದರ ಮೇಲೆ ಕಟ್ಟಿನ ಗಟ್ಟಿತನ ನಿರ್ಧರಿಸಲ್ಪಡುತ್ತದೆ ಎಂಬ ಮಾತುಗಳು ಇಡೀ ನಾಟಕದಲ್ಲಿ ಹಲವು ಬಾರಿ ಎದ್ದು ಬರುತ್ತದೆ. ನಮ್ಮ ಪ್ರಸ್ತುತ ಸಾಮಾಜಿಕ-ಸಾಂಸ್ಕೃತಿಕ ರಾಜಕಾರಣವನ್ನೂ ಈ ಮಾತಿನಲ್ಲಿ ಗ್ರಹಿಸಬಹುದು. ರಾಸಲೀಲೆಗೆ ಹೋಗಿ ಬಂದ ಚಿಕ್ಕಮ್ಮ ರಾಧೆಯನ್ನು ಹುಡುಕುವ ಕೃಷ್ಣನನ್ನು ಕಂಡು, ರಾಸಲೀಲೆಯಲ್ಲಿ ಉಂಟಾಗುವ ಎಲ್ಲೆಲ್ಲೂ ಪ್ರೇಮದ ಭಾವವನ್ನು ಹೊತ್ತು ಬರುವಾಗ ಪೂರ್ಣವಾಗಿ ಒಂದು ಹೆಣ್ಣಾಗುತ್ತಾಳೆ. ಪ್ರತಿ ಹೆಣ್ಣೂ ಹುಡುಕುವ ತನ್ನನ್ನು ಪೂರ್ಣಗೊಳಿಸುವ ಪ್ರೇಮ ಭಾವ ಅಲ್ಲಿ ಮುಖ್ಯವಾಗುತ್ತದೆ. ಸುಧಾ ಮತ್ತು ಶ್ರೀಪಾದ ಭಟ್ಟರ ವ್ಯಕ್ತಿಗಿಂತ ಭಾವವೇ ಎಲ್ಲಾ ಎಂಬ ಅನಿಸಿಕೆ ಎದ್ದು ಕಾಣುತ್ತದೆ. ಪ್ರೇಮ ಪ್ರತಿ ಹೆಣ್ಣಿನಲ್ಲೂ ಹರಿದು ಪ್ರತಿ ಮನೆಗೂ ಬೇಕಾದ ರಾಸಲೀಲೆಯ ಪಾಠವಾಗುತ್ತದೆ ರಾಧಾ. ಮಂಜುಳ ಸುಬ್ರಹ್ಮಣ್ಯ ಅವರು ಇಲ್ಲಿ ರಾಧೆ, ಚಿಕ್ಕಮ್ಮ ಏನೂ ಆಗದೆ ಹೆಣ್ಣಾಗುತ್ತಾರೆ. ನಮ್ಮ ಸುತ್ತಲಿನ ರಾಧೆಯರೆಲ್ಲ ಪ್ರೀತಿಯ ಭಾವಕ್ಕೆ ತುಡಿಯುತ್ತಾ ಇನ್ನೊಬ್ಬ ರಾಧೆಯ ಕಣ್ಣೀರೊರಿಸುವ ಅನುಭವ ಸಿಗುತ್ತದೆ.
ರಾಧೆಗಾಗಿ ಶಾಮ ಅನ್ನುವ ಭಾವ ಅಸತ್ಯವೇನೋ ಅನ್ನಿಸುತ್ತದೆ. ಕೇವಲ ತನ್ನ ಆಟದಲ್ಲಿ ಮುಳುಗಿಹೋಗುವ ಕನ್ಹಯ್ಯ ಯಾರನ್ನೂ ಪ್ರೀತಿಸಲೇ ಇಲ್ಲ ಅನ್ನಿಸುತ್ತದೆ. ತನಗೆ ಬೇಕಾದಾಗ ಆಕಾಶದಿಂದ ಇಳಿದು ರಾಧೆಯನ್ನ ಹೊತ್ತೂಯ್ಯುವ ಕೃಷ್ಣ ಆಕೆ ಅವನಿಗಾಗಿ ಕನವರಿಸುವಾಗ ರಾಸಲೀಲೆಯ ಮಧ್ಯೆ ಮಾತ್ರ ಆಕೆಯನ್ನು ಹುಡುಕುತ್ತಾ, ಸಾಕಾಗಿದೆ ಪ್ರೇಮ ಇನ್ನು ಬೇಕು ಜಗವಾಳುವ ಪಟ್ಟ ಅನ್ನುತ್ತಾನೆನೋ ಅನ್ನಿಸುತ್ತದೆ. ಪ್ರೀತಿಯ ಶಾಮ ದೂರವಾಗುತ್ತಾನೆ.
ಏಕವ್ಯಕ್ತಿ ನಾಟಕ ಆರಂಭ ಮಧ್ಯದಲ್ಲಿ ಕೃಷ್ಣ ಲೀಲೆಗಳನ್ನ ಎಲ್ಲರಂತೆ ಹೇಳುವ ರಾಧೆಯಲ್ಲಿ ಅನಂತರ ಕಾಣ ಸಿಗುವ ಸ್ವಂತಿಕೆ ಭಾವಾಭಿವ್ಯಕ್ತಿ ಸ್ವಲ್ಪ ಕಳೆದು ಹೋದಂತೆ ಅನ್ನಿಸುತ್ತದೆ. ಕೃಷ್ಣನ ಬಾಲಲೀಲೆಗೇ ಪ್ರಾಮುಖ್ಯತೆ ಸಿಕ್ಕಿ ಪ್ರೇಮಿಯಾಗಿ ಕೃಷ್ಣ ಪೂರ್ಣವಾಗುವುದೇ ಇಲ್ಲ. ಇನ್ನೂ ಬೇಕು, ಕೃಷ್ಣ ರಾಧೆಯರ ಉತ್ಕಟ ಪ್ರೇಮ ನೋಡಬೇಕು ಅನ್ನಿಸುವಷ್ಟರಲ್ಲಿ ವಿರಹಿ ರಾಧೆ ನಮ್ಮೆದುರು ನಿಂತು ಬಿಡುತ್ತಾಳೆ. ರಾಧೆ ಇಷ್ಟಪಟ್ಟಿದ್ದು ಬಾಲ ಕೃಷ್ಣನನ್ನೋ, ಕೃಷ್ಣ ಅನ್ನುವ ಭಾವವನ್ನೋ ಇಲ್ಲ ನವಿಲುಗರಿಯ ಪುಳಕವನ್ನೋ ಕೊನೆಗೂ ಅರಿವಾಗುವುದಿಲ್ಲ. ರಾಧೆ ಕೃಷ್ಣರ ರಾಸಲೀಲೆಯಲ್ಲಿ ಕೃಷ್ಣ ಕಾಣಬೇಕೆನಿಸಿದ ರಾಧೆ ಕಾಣಿಸುತ್ತಾಳೆ. ರಾಧೆಯ ಉತ್ಕಟ ಪ್ರೀತಿ ಇದಕ್ಕಿಂತ ಬೇರೆ ಇರಬಹುದಿತ್ತೋ ಅನ್ನಿಸಿದ್ದು ಸತ್ಯ.
ಆದರೆ ಈ ನಾಟಕದ ಮುಖ್ಯ ಅಂಶ, ರಾಧೆಯ ಕತೆ ಮುಗಿಯುವುದೇ ಇಲ್ಲ. ಪ್ರೀತಿಯುಳಿಯುವಲ್ಲೂ, ಅಳಿಯುವಲ್ಲೂ ರಾಧೆ ಅಲೆಯುತ್ತಿರುತ್ತಾಳೆ. ಪುನಃ ರಾಧೆಯಲ್ಲಿ ರಾಧಾ ಓಡಿಬರುತ್ತಾಳೆ. ಕೌದಿಗೆ ಹೊದ್ದು ಪ್ರೀತಿಯನ್ನ ಉಳಿಸಿಕೊಂಡು ಸುತ್ತೆಲ್ಲಾ ಪ್ರೀತಿ ಹರಿಸುವ ರಾಧೆ ನನ್ನೊಳಗೂ ಮೂಡುತ್ತಾಳೆ.
ಡಾ| ರಶ್ಮಿ ಕುಂದಾಪುರ