Advertisement

ವ್ಯವಹಾರ ಕ್ಷೇತ್ರದಲ್ಲಿ ಟ್ರೇಡ್‌ ಲೈಸೆನ್ಸ್‌ ರದ್ದಾಗಲಿ

07:11 AM Feb 18, 2017 | |

ಬೆಂಗಳೂರು: ವ್ಯವಹಾರ ಕ್ಷೇತ್ರದಲ್ಲಿ ಟ್ರೇಡ್‌ ಲೈಸೆನ್ಸ್‌ ರದ್ದು ಮಾಡಬೇಕು. ರಾಜ್ಯದಲ್ಲಿರುವ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲಿ 
ವಾರದ ಎಲ್ಲಾ ದಿನವೂ ಪ್ರವೇಶ ದರವನ್ನು 150 ರೂ.ಗೆ ಸೀಮಿತಗೊಳಿಸಬೇಕು ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಾಣಿಜ್ಯ ಸಂಸ್ಥೆಗಳ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

Advertisement

ಬಜೆಟ್‌ ಪೂರ್ವಭಾವಿ ಸಮಾಲೋಚನೆಯಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ವಾಣಿಜ್ಯ ಸಂಸ್ಥೆಗಳು ಹಾಗೂ ಸಂಘಟನೆಗಳೊಂದಿಗೆ ಸಭೆ ನಡೆಸಿದರು. ಎಫ್ ಕೆಸಿಸಿಐ, ಕಾಸಿಯಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ವೈನ್‌ ಮರ್ಚೆಂಟ್ಸ್‌ ಸಂಘದ ಪದಾಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ಸಲಹೆ-ಸೂಚನೆ ಪಡೆದರು. 

ಎಫ್ಕೆಸಿಸಿಐ ಬೇಡಿಕೆ: ವ್ಯವಹಾರ ಕ್ಷೇತ್ರದಲ್ಲಿ ಟ್ರೇಡ್‌ ಲೈಸೆನ್ಸ್‌ ರದ್ದಾಗಬೇಕು. ರಾಜ್ಯದ ಉದ್ದಿಮೆ, ವ್ಯವಹಾರ, ಸೇವಾ ನಿರತ
ವ್ಯವಹಾರಗಳಿಗೂ ಟ್ರೇಡ್‌ ಲೈಸೆನ್ಸ್‌ ರದ್ದುಪಡಿಸುವಂತೆ ಸಿಎಂಗೆ ಮನವಿ ಸಲ್ಲಿಸಿದರು. ಬೆಂಗಳೂರಿಗೆ ನಿರಂತರ ವಿದ್ಯುತ್‌ ಪೂರೈಸಲು
ಯಲಹಂಕ ಮತ್ತು ಬಿಡದಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಗ್ಯಾಸ್‌ ಆಧಾರಿತ ಇಂಧನ ಯೋಜನೆಯನ್ನು ಆದಷ್ಟು ಬೇಗ
ಆರಂಭಿಸಬೇಕು. ಕೃಷಿ ಮಾರುಕಟ್ಟೆ ಸೆಸ್‌ನ್ನು ಶೇ.1.5 ರಿಂದ ಶೇ.0.5ಕ್ಕೆ ಇಳಿಸಬೇಕು. ಆರ್‌ಟಿಜಿಎಸ್‌ ನೆಫ್ಟ್ ಮಾದರಿಯಲ್ಲಿ ತೆರಿಗೆ ಪಾವತಿಗೆ ಇ-ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಪ್ರವಾಸೋದ್ಯಮ ಅಭಿವೃದ್ಧಿಗೆ ವಿಲಾಸಿ ಹಾಗೂ ವ್ಯಾಟ್‌ ತೆರಿಗೆಗಳನ್ನು ಕನಿಷ್ಠ ಶೇ.5 ರಷ್ಟು ಕಡಿತಗೊಳಿಸಬೇಕು. ಆಸ್ತಿಗಳ ಮಾರ್ಗಸೂಚಿ ದರವನ್ನು ಶೇ.10 ರಿಂದ 30ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಕೈ ಬಿಡಬೇಕು ಎಂದು ಕೋರಿದರು.

ಕಾಸಿಯಾ ಬೇಡಿಕೆ: ಕೈಗಾರಿಕೆ ಸ್ಥಾಪನೆಗೆ ನೀಡುವ ನಿವೇಶನ ಅಥವಾ ಜಮೀನನ್ನು ಹತ್ತು ವರ್ಷ ಗುತ್ತಿಗೆ ನಂತರ ಮಾಲೀಕತ್ವ
ಕೊಡುವ ನೀತಿ ಮರು ಜಾರಿಗೊಳಿಸಬೇಕು. ಕಾಸಿಯಾಗೆ 5 ಕೋಟಿ ರೂ.ವಿಶೇಷ ಅನುದಾನ ನೀಡಬೇಕು. ಕೈಗಾರಿಕಾ ಟೌನ್‌ಶಿಪ್‌ಗ್ಳ ಘೋಷಣೆ ಮಾಡಿ ಕೆಐಎಡಿಬಿ ದರದಲ್ಲಿಯೇ ಭೂಸ್ವಾಧೀನ ಮಾಡಿ ಮಾಲೀಕರಿಗೆ ಹಸ್ತಾಂತರಿಸಬೇಕು. ಮಹಿಳಾ ಉದ್ದಿಮೆದಾರರಿಗೆ ಶೇ.4 ರ ಬಡ್ಡಿದರದಲ್ಲಿ ಸಾಲ ನೀಡಬೇಕು. ಕೈಗಾರಿಕೆಗಳಲ್ಲಿನ ಕಾರ್ಮಿಕರಿಗೆ ವಸತಿ ಯೋಜನೆ ರೂಪಿಸಬೇಕು ಎಂದು ಮನವಿ ಮಾಡಿದರು. 

ಅಬಕಾರಿ ಸಂಸ್ಥೆಗಳ ಬೇಡಿಕೆ: ಸರ್ಕಾರ ಹೊಸದಾಗಿ ಎಂಎಸ್‌ ಐಎಲ್‌ ಲೈಸನ್ಸ್‌ ನೀಡಬಾರದು. ಪರವಾನಗಿ ಹೊಂದಿರುವವರ
ಮೇಲೆ ವಿಧಿಸುವ ಮೌಲ್ಯವರ್ಧಿತ ತೆರಿಗೆಯಲ್ಲಿನ ತಾರತಮ್ಯವನ್ನು ಸರಿಪಡಿಸಬೇಕು. ಲೈಸೆನ್ಸ್‌ ಶುಲ್ಕ ಹೆಚ್ಚಳ ಮಾಡಬಾರದು. ಮದ್ಯ ಮಾರಾಟದಲ್ಲಿ ಬರುವ ಲಾಭಾಂಶದಲ್ಲಿ ಶೇ.25 ರಷ್ಟನ್ನು ಮಾರಾಟಗಾರರಿಗೆ ನೀಡಬೇಕು ಎಂದು ಸಭೆಯಲ್ಲಿ ಮನವಿ ಮಾಡಿದರು. ಎಫ್ಕೆಸಿಸಿ ಅಧ್ಯಕ್ಷ ದಿನೇಶ್‌, ಕಾಸಿಯಾ ಅಧ್ಯಕ್ಷ ಪದ್ಮನಾಭ್‌, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

ಸಿನಿಮಾ ರಂಗದ ಬೇಡಿಕೆ
ರಾಜ್ಯದಲ್ಲಿರುವ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ವಾರದ ಎಲ್ಲಾ ದಿನವೂ ಪ್ರವೇಶ ದರವನ್ನು 150 ರೂ.ಗೆ ಸೀಮಿತಗೊಳಿಸಬೇಕು. ಪೋಸ್ಟರ್‌, ಬ್ಯಾನರ್‌ ಮತ್ತು ಪ್ರದರ್ಶನ ತೆರಿಗೆಯನ್ನು ರದ್ದು ಮಾಡಬೇಕು. ಚಿತ್ರೋದ್ಯಮದ ಕ್ಷೇಮಾಭಿವೃದ್ಧಿಗೆ 5 ಕೋಟಿ ರೂ.
ಮೀಸಲಿಡಬೇಕು. ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ 50 ಎಕರೆ ಜಾಗ ಮೀಸಲಿಡಬೇಕು ಹಾಗೂ ಸಿನೆಮಾ ರಂಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ವಸತಿ ಸೌಕರ್ಯ ಕಲ್ಪಿಸಲು ಸರ್ಕಾರ ಜಮೀನು ನೀಡಬೇಕೆಂದು ಮನವಿ ಮಾಡಿದರು. 

ಬಜೆಟ್‌ ಸಿದ್ದತೆಗಾಗಿ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಗಳ ಸಭೆ ನಡೆಸುತ್ತಿದ್ದು, ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಗಳ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಅವರ ಬೇಡಿಕೆಗಳನ್ನು ಪರಿಶೀಲಿಸಿ, ತೀರ್ಮಾನ ಕೈಗೊಳ್ಳಲಾಗುವುದು.
ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next