ಸಿಡ್ನಿ: ಭಾರತ- ಆಸೀಸ್ ನಡುವಿನ ಸಿಡ್ನಿ ಟೆಸ್ಟ್ ನಲ್ಲಿ ಮತ್ತೆ ಜನಾಂಗೀಯ ನಿಂದನೆ ಆಪಾದನೆ ಕೇಳಿಬಂದಿದೆ. ಶನಿವಾರ ಸಿರಾಜ್ ಗೆ ನಿಂದನೆ ಮಾಡಿದ್ದ ಆಸೀಸ್ ಪ್ರೇಕ್ಷಕರು ಇಂದು ಮತ್ತೆ ನಿಂದನೆ ನಡೆಸಿದ್ದಾರೆ. ಇದರ ಮಧ್ಯೆ ಭಾರತಕ್ಕೆ ಕಠಿಣ ಗುರಿ ನೀಡಿರುವ ಆಸೀಸ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.
ದ್ವಿತೀಯ ಇನ್ನಿಂಗ್ಸ್ ನಲ್ಲಿ ಆರು ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಮೊದಲ ಇನ್ನಿಂಗ್ಸ್ ನಲ್ಲಿ 94 ರನ್ ಹಿನ್ನಡೆ ಅನುಭವಿಸಿರುವ ಭಾರತ ತಂಡ ಈ ಪಂದ್ಯ ಗೆಲ್ಲಬೇಕಾದರೆ 407 ರನ್ ಗಳಿಸಬೇಕಿದೆ. ಡ್ರಾ ಮಾಡಿಕೊಳ್ಳಲು 138 ಓವರ್ ಆಡಬೇಕಿದೆ.
ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್ ಮತ್ತು ಗ್ರೀನ್ ಅರ್ಧಶತಕ ಸಿಡಿಸಿ ಮಿಂಚಿದರು. ಲಬುಶೇನ್ 73 ರನ್ ಗಳಿಸಿದರೆ, ಸ್ಮಿತ್ 81 ರನ್ ಗಳಿಸಿದರು. ವೇಗವಾಗಿ ಬ್ಯಾಟ್ ಬೀಸಿದ ಗ್ರೀನ್ ನಾಲ್ಕು ಸಿಕ್ಸರ್ ನೆರವಿನಿಂದ 84 ರನ್ ಗಳಿಸಿದರು. ನಾಯಕ ಪೇನ್ ಅಜೇಯ 39 ರನ್ ಗಳಸಿದರು. ಗ್ರೀನ್ ಔಟಾಗುತ್ತಿದ್ದಂತೆ ಆಸೀಸ್ ಡಿಕ್ಲೇರ್ ಮಾಡಿಕೊಂಡಿತು.
ಇದನ್ನೂ ಓದಿ:ಚೇತೇಶ್ವರ್ ಪೂಜಾರ ಫಿಫ್ಟಿಗೆ 174 ಎಸೆತ!
ಸೈನಿ ಮತ್ತು ಅಶ್ವಿನ್ ತಲಾ ಎರಡು ವಿಕೆಟ್ ಪಡೆದರೆ, ಬುಮ್ರಾ ಮತ್ತು ಸಿರಾಜ್ ತಲಾ ಒಂದು ವಿಕೆಟ್ ಪಡೆದರು. ಜಡೇಜಾ ಅನುಪಸ್ಥಿತಿ ಮತ್ತು ಕಳಪೆ ಫೀಲ್ಡಿಂಗ್ ಭಾರತಕ್ಕೆ ಹಿನ್ನಡೆಯಾಯಿತು.
ಮತ್ತೆ ನಿಂದನೆ: ಆಸೀಸ್ ಪ್ರೇಕ್ಷಕರು ಇಂದು ಮತ್ತೆ ತಮ್ಮ ಕೀಳು ಮನಸ್ಥಿತಿ ತೋರಿದರು. ಫೀಲ್ಡಿಂಗ್ ಮಾಡುತ್ತಿದ್ದ ಸಿರಾಜ್ ಗೆ ಅಶ್ಲೀಲ ಶಬ್ಧ ಬಳಕೆ ಮಾಡಿದರು. ಸಿರಾಜ್ ಕೂಡಲೇ ಅಂಪಾಯರ್ ಗಳ ಗಮನಕ್ಕೆ ತಂದರು. ನಿಂದನೆ ಮಾಡಿದ ಪ್ರೇಕ್ಷಕರ ಬಳಿಗೆ ತೆರಳಿದ ಪೊಲೀಸರು ನಾಲ್ವರು ಯುವಕರನ್ನು ಸ್ಟ್ಯಾಂಡ್ ನಿಂದ ಹೊರಕ್ಕೆ ಕಳುಹಿಸಿದರು.