ಸದ್ಯಕ್ಕೆ ಲಾಕ್‌ಡೌನ್ ಸಡಿಲಗೊಂಡಿದೆ. ಚಿತ್ರರಂಗ ಕೂಡ ಮೆಲ್ಲನೆ ರಂಗುತುಂಬಿಕೊಳ್ಳುವತ್ತ ಸಾಗಿದೆ. ಇಷ್ಟು ದಿನಗಳ ಕಾಲ ಮನೆಯಲ್ಲೇ ಇದ್ದ ಸಿನಿಮಾ ಮಂದಿ ಈಗ ಸಿನಿಮಾದತ್ತ ಮುಖ ಮಾಡುತ್ತಿದ್ದಾರೆ. ಈಗಾಗಲೇ ಎಲ್ಲರಿಗಿಂತಲೂ ಮೊದಲು ಕನ್ನಡ ನಟಿ ರಚಿತಾರಾಮ್ ಅವರು ತಮ್ಮ ಕೆಲಸ ಶುರುಮಾಡಿದ್ದಾರೆ. ಹೌದು, ರಚಿತಾರಾಮ್, ಲಾಕ್‌ಡೌನ್ ಆಗುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಿಂದ ದೂರ ಉಳಿದಿದ್ದರು.
ಯಾವಾಗ, ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿತೋ, ಆಗ ಪುನಃ ತಮ್ಮ ಮೊಬೈಲ್ ಆನ್ ಮಾಡಿಕೊಂಡಿದ್ದಲ್ಲದೆ, ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟಿವ್ ಆಗಿದ್ದಾರೆ. ಈಗ ಅವರು ಶೂಟಿಂಗ್ ಹೋಗುವುದನ್ನು ಖಚಿತಪಡಿಸಿದ್ದಾರೆ. ರಚಿತಾರಾಮ್ ಅವರು ತೆಲುಗಿನ “ಸೂಪರ್ ಮಚ್ಚಿ’ ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಲಾಕ್‌ಡೌನ್‌ಹಿನ್ನೆಲೆಯಲ್ಲಿ ಆ ಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿತ್ತು.
ಈಗ ಆ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ರಚಿತಾರಾಮ್ ಕೂಡ ನಟನೆಗೆ ಮುಂದಾಗಿದ್ದಾರೆ. ಆ ಕುರಿತು ಅವರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಷಯ ಹಂಚಿಕೊಂಡಿದ್ದಾರೆ. ಶೇ.10 ರಷ್ಟು ಚಿತ್ರೀಕರಣ ಬಾಕಿ ಉಳಿದಿದ್ದರಿಂದ ಅದನ್ನು ಈಗ ಪೂರೈಸುವ ಸಲುವಾಗಿ ರಚಿತಾರಾಮ್ ಹೈದರಾಬಾದ್‌ಗೆ ಹೋಗಿದ್ದಾರೆ. ಅದರಲ್ಲೂ, ಅವರು ಬೆಂಗಳೂರಿನಿಂದ ಹೈದರಾಬಾದ್‌ಗೆ ಅವರ ಸ್ವಂತ ಕಾರಲ್ಲೇ ಹೋಗಿದ್ದಾರೆ.
ಹತ್ತು ದಿನಗಳ ಕಾಲ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ, ಅವರು ಮನೆಯಲ್ಲೇ ಇದ್ದು, ಸ್ವಯಂ ಪ್ರೇರಿತ 8 ದಿನಗಳ ಕಾಲ ಕ್ವಾರಂಟೈನ್ನಲ್ಲಿರಲಿದ್ದಾರಂತೆ. ಅವರ ಕುಟುಂಬದ ಹಿತದೃಷ್ಟಿಯಿಂದ ಈ ನಿರ್ಧಾರ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. “ಸೂಪರ್ ಮಚ್ಚಿ’ ಸಿನಿಮಾ ನಿರ್ಮಾಪಕರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ಕಾರಣಕ್ಕೆ, ನಾನೀನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ.
ಅಂದುಕೊಂಡಂತೆ ಆಗಿದ್ದರೆ, ಆ ಚಿತ್ರ ಇಷ್ಟೊತ್ತಿಗೆ ಮುಗಿಯಬೇಕಿತ್ತು. ಆದರೆ, ಹಲವು ಸಮಸ್ಯೆಯಿಂದಾಗಿ ಆಗಿರಲಿಲ್ಲ. ಈಗ ಲಾಕ್ ಡೌನ್ ಸಡಿಲಗೊಂಡಿದ್ದರಿಂದ ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ಬೆನ್ನಲ್ಲೇ ರಚಿತಾರಾಮ್ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಇನ್ನು, ರಚಿತಾರಾಮ್ ಅವರು ಜುಲೈನಲ್ಲಿ ಕನ್ನಡದ ಚಿತ್ರಗಳಲ್ಲಿ ಭಾಗವಹಿಸಲಿದ್ದಾರೆ. ಸದ್ಯ ಹತ್ತು ದಿನಗಳ ಕಾಲ ಹೈದರಾಬಾದ್‌ನಲ್ಲೇ ಚಿತ್ರೀಕರಣ ಮುಗಿಸಿ, ನಂತರ ಇತ್ತ ವಾಪಾಸ್ ಆದ ನಂತರ ಪ್ರಜ್ವಲ್ ದೇವರಾಜ್ ಅವರ ಜೊತೆ “ವೀರಂ’ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.
“ಏಪ್ರಿಲ್’ ಚಿತ್ರಕ್ಕೂ ಚಾಲನೆ ಸಿಗಲಿದೆ. ಆದರೆ, ಚಿರಂಜೀವಿ ಸರ್ಜಾ ಅವರೊಂದಿಗೆ ಒಂದು ದಿನದ ಚಿತ್ರೀಕರಣದಲ್ಲೂ ಅವರು ಭಾಗವಹಿಸಲು ಸಾಧ್ಯವಾಗಿಲ್ಲ. ಆ ಚಿತ್ರದ ಫೋಟೋ ಶೂಟ್ ಕೂಡ ನಡೆದಿತ್ತು. ಇದರೊಂದಿಗೆ ವಿಜಯ್ ಗೌಡ ಅವರ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಕೂಡ ಶುರುವಾಗಲಿದ್ದು, ಅದರಲ್ಲೂ ರಚಿತಾರಾಮ್ ಭಾಗವಹಿಸಲಿದ್ದಾರೆ.