ಕನ್ನಡ ಚಿತ್ರರಂಗಕ್ಕೆ ಪ್ರತಿ ವರ್ಷ ಬೇರೆ ಬೇರೆ ಭಾಷೆಗಳಿಂದ ನಾಯಕಿಯರು ಎಂಟ್ರಿಕೊಡುತ್ತಲೇ ಇರುತ್ತಾರೆ. ಹೀಗೆ ಬಂದ ನಟಿಯರು ಅನೇಕರು ಸ್ಯಾಂಡಲ್‌ವುಡ್‌ನಲ್ಲಿ ತಮ್ಮಛಾಪು ಮೂಡಿಸಿದ್ದಾರೆ ಕೂಡಾ. ಅದರಲ್ಲೂ ಮಲಯಾಳಂ ಮೂಲದ ನಟಿಯರಿಗೂ ಕನ್ನಡ ಚಿತ್ರರಂಗಕ್ಕೂ ಚೆನ್ನಾಗಿ ಕೂಡಿ ಬರುತ್ತದೆ. ಈಗಾಗಲೇ ಮಲಯಾಳಂನಿಂದ ಕನ್ನಡ ಚಿತ್ರರಂಗಕ್ಕೆ ನಾಯಕಿಯರಾಗಿ ಬಂದ ಅನೇಕ ನಟಿಯರು ಗಟ್ಟಿ ನೆಲೆಯೂರಿದ್ದಾರೆ. ಈಗ ಆ ಸಾಲಿಗೆ ಸೇರುವ ಮತ್ತೂಂದು ರಚೆಲ್ ಡೇವಿಡ್.
ಈ ಹೆಸರನ್ನು ನೀವು ಕೇಳಿರಬಹುದು. ನೀವು “ಲವ್ ಮಾಕ್ಟೇಲ್-2′ ಚಿತ್ರ ನೋಡಿದ್ದರೆ ಖಂಡಿತಾ ನಿಮಗೆ ಈ ಹೆಸರು ಹಾಗೂ ಮುಖ ನೆನಪಿಗೆ ಬರುತ್ತದೆ. ಕೇರಳ ಮೂಲದ ರಚೆಲ್ ಈಗ ಕನ್ನಡದಲ್ಲಿ ಬಿಝಿಯಾಗುತ್ತಿದ್ದಾರೆ. ಈಗಾಗಲೇ ಪ್ರಮೋದ್ ನಾಯಕರಾಗಿರುವ “ಭುವನಂ ಗಗನಂ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಇನ್ನಷ್ಟು ಚಿತ್ರಗಳು ಕೈಯಲ್ಲಿವೆ.
ಬಯಸದೇ ಬಂದ ಭಾಗ್ಯ: ರಚೆಲ್‌ಗೆ “ಲವ್ ಮಾಕ್ಟೇಲ್-2′ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದು “ಬಯಸದೇ ಬಂದ ಭಾಗ್ಯ’. ಅದೊಂದು ದಿನ “ಲವ್ ಮಾಕ್ಟೇಲ್-2′ ತಂಡದಿಂದ ಕರೆ ಬಂದಾಗ ರಚೆಲ್ ಗೆ ಆಶ್ಚರ್ಯ ಕಾದಿತ್ತಂತೆ. “ಕನ್ನಡ ಇಂಡಸ್ಟ್ರಿಯಲ್ಲಿ ನನಗೆ ಯಾವುದೇ ಸಂಬಂಧ ಇರಲಿಲ್ಲ. ಹಾಗಾಗಿ ತಂಡದಿಂದ ಕರೆ ಬಂದಾಗ ಅಚ್ಚರಿಯಾಯಿತು. ನಿರ್ದೇಶಕ ಮತ್ತು ನಟ ಕೃಷ್ಣ ಅವರೊಂದಿಗೆ ಕೆಲಸ ಮಾಡಿರುವುದು ಅದ್ಭುತ ಅನುಭವ. ಅವರು ನಿರ್ಮಾಪಕರಾಗಿ, ನಿರ್ದೇಶಕರಾಗಿ ಸಾಕಷ್ಟು ಸ್ಪಷ್ಟತೆ ಹೊಂದಿದ್ದಾರೆ. ಇದು ನಮ್ಮಂತಹ ಹೊಸ ಕಲಾವಿದರಿಗೆ ತುಂಬಾ ಸಹಾಯವಾಗುತ್ತದೆ. ಸಿನಿಮಾ ಸೆಟ್‌ಗೆ ಹೋಗುವ ಮುನ್ನ ನಾವು ಸಾಕಷ್ಟು ರಿಹರ್ಸಲ್‌ಗಳನ್ನು ಮಾಡಿದ್ದು ನನಗೆ ಸಾಕಷ್ಟು ಸಹಾಯವಾಯಿತು ಹಾಗೂ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಅದೇ ರೀತಿ ಮಿಲನ ನಾಗರಾಜ್ ಕೂಡ ಉತ್ತಮ ಬೆಂಬಲ ನೀಡಿದರು. ಒಟ್ಟಾಗಿ, ನಾವು ತಂಡವಾಗಿ ಕೆಲಸ ಮಾಡಿದ್ದೇವೆ’ ಎಂದು ತಮ್ಮ ಚೊಚ್ಚಲ ಕನ್ನಡ ಸಿನಿಮಾದ ಬಗ್ಗೆ ಹೇಳುತ್ತಾರೆ.
“ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ಈಗ “ಭುವನಂ ಗಗನಂ’ ಸಿನಿಮಾ ದಲ್ಲೂ ಒಳ್ಳೆಯ ಪಾತ್ರ ಸಿಕ್ಕಿದೆ. ನಟಿಯರನ್ನು ತುಂಬಾ ಗೌರವದಿಂದ ನಡೆಸಿಕೊಳ್ಳುವ ಕನ್ನಡ ಚಿತ್ರರಂಗದಲ್ಲಿ ಮುಂದೆ ಮತ್ತಷ್ಟು ಸಿನಿಮಾ ಮಾಡುವ ಕನಸಿದೆ’ ಎನ್ನುವುದು ರಚೆಲ್ ಮಾತು.
“ನಾನು ಬಣ್ಣದ ಬದುಕಿಗೆ ಈಗಷ್ಟೇ ಕಾಲಿಟ್ಟಿದ್ದೇನೆ. ಈ ಅವಧಿ ನನಗೆ ಅನೇಕ ಅನುಭವಗಳನ್ನು ತಂದುಕೊಟ್ಟಿದೆ. ನಾನೊಬ್ಬಳು ನಟಿಯಾಗಬೇಕು ಎಂದು ಇಲ್ಲಿಗೆ ಬಂದಾಗಿನಿಂದ ಎಲ್ಲರೂ ಸಹಕಾರ ನೀಡುತ್ತ ಬಂದಿದ್ದಾರೆ. ಈ ಮೂರು ವರ್ಷಗಳು ಸಾಕಷ್ಟು ಒಳ್ಳೆಯ ಅನುಭವಗಳನ್ನು ಕೊಟ್ಟಿವೆ. ಪ್ರತಿದಿನ ಹೊಸದೇನಾದ್ರೂ ಕಲಿಯುತ್ತಿದ್ದೀನಿ. ಮೊದಲು ಚಿತ್ರರಂಗ ಹೊಸದಾಗಿದ್ದರಿಂದ, ಚಿತ್ರಗಳ ಆಯ್ಕೆ, ಪಾತ್ರಗಳ ಆಯ್ಕೆ ಬಗ್ಗೆ ನನಗೆ ಸ್ಪಷ್ಟತೆಯಿರಲಿಲ್ಲ. ಈಗ ಆ ಬಗ್ಗೆ ಒಂದಷ್ಟು ಅನುಭವ ಸಿಕ್ಕಿದೆ. ಚಿತ್ರಗಳ ಕಥೆ, ಪಾತ್ರಗಳ ಆಯ್ಕೆ, ಅದಕ್ಕೆ ತಯಾರಿ ಹೇಗಿರಬೇಕು ಅನ್ನೋದನ್ನ ಮೊದಲೇ ಪ್ಲಾನ್ ಮಾಡಿಕೊಳ್ಳುತ್ತೇನೆ.’ ಎನ್ನಲು ರಚೆಲ್ ಮರೆಯುವುದಿಲ್ಲ.