ಚೆನ್ನೈ: ಭಾರತದ ಜನಪ್ರಿಯ ಕಾರು ರೇಸರ್ ಕೆ ಇ ಕುಮಾರ್ (59) ಭೀಕರ ಅಪಘಾತದಲ್ಲಿ ಭಾನುವಾರ (ಜ.8 ರಂದು) ಮೃತಪಟ್ಟಿದ್ದಾರೆ.
ಮದ್ರಾಸ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ಭಾನುವಾರ ಮುಂಜಾನೆ ಭಾರತೀಯ ರಾಷ್ಟ್ರೀಯ ಕಾರ್ ರೇಸಿಂಗ್ ಚಾಂಪಿಯನ್‌ಶಿಪ್ ನ ಎಂಆರ್ ಎಫ್, ಎಂಎಂಎಸ್ ಸಿ, ಎಫ್ ಎಂಎಸ್ ಸಿಐ ರೇಸಿಂಗ್ ಸ್ಪರ್ಧೆಯ ಎರಡನೇ ಸುತ್ತು ನಡೆಯುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ.
ರೇಸ್ ನಲ್ಲಿರುವಾಗ ಕುಮಾರ್ ಅವರ ಕಾರು ಪ್ರತಿಸ್ಪರ್ಧಿಯ ಕಾರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ವೇಗದಲ್ಲಿದ್ದ ಕಾರು ಟ್ರ್ಯಾಕ್ ತಪ್ಪಿ ಪಲ್ಟಿಯಾಗಿ, ಬೇಲಿಗೆ ಹೋಗಿ ಗುದ್ದಿದೆ. ತಕ್ಷಣವೇ ರೇಸ್ ನಿಲ್ಲಿಸಿ, ಸಂಪೂರ್ಣ ನಜ್ಜುಗುಜ್ಜಾಗಿದ್ದ ಕಾರಿನಿಂದ ಕುಮಾರ್ ಅವರನ್ನು ಹೊರ ತೆಗೆದು ಕೂಡಲೇ ಆಸ್ಪತ್ರಗೆ ರವಾನಿಸಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾ ಅಧ್ಯಕ್ಷರಾಗಿರುವ ವಿಕ್ಕಿ ಚಾಂಧೋಕ್ ಈ ಬಗ್ಗೆ ಮಾತಾನಾಡಿಇದು ಅತ್ಯಂತ ದುರದೃಷ್ಟಕರ ಘಟನೆ. ಕುಮಾರ್ ಒಬ್ಬ ಅನುಭವಿ ರೇಸರ್ ಆಗಿದ್ದರು. ನಾನು ಅವರನ್ನು ಹಲವಾರು ದಶಕಗಳಿಂದ ಸ್ನೇಹಿತ ಮತ್ತು ಪ್ರತಿಸ್ಪರ್ಧಿಯಾಗಿ ತಿಳಿದಿದ್ದೇನೆ. ಎಂಎಂಎಸ್ ಸಿ ಮತ್ತು ಇಡೀ ರೇಸಿಂಗ್ ಸಮೂಹ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತದೆ ಎಂದಿದ್ದಾರೆ.
ಕೆ ಇ ಕುಮಾರ್ ಮದ್ರಾಸ್ ಇಂಟರ್ನ್ಯಾಷನಲ್ ಸರ್ಕ್ಯೂಟ್ ಶಾಶ್ವತ ಸದಸ್ಯರಾಗಿದ್ದರು.