ಒಂದು ಊರಿನಲ್ಲಿ ಒಬ್ಬ ವ್ಯಾಪಾರಿ ಇದ್ದನು. ಅವನು ತುಂಬಾ ಶ್ರೀಮಂತ. ಅರಮನೆಯಂಥ ಮನೆ. ಮನೆ ತುಂಬ ಮಕ್ಕಳು ಅವನಿಗೆ. ಮನೆಯ ಪಕ್ಕದ ಮರದಲ್ಲಿ ಒಂದು ಕಾಗೆ ವಾಸವಾಗಿತ್ತು. ಮರದ ಹತ್ತಿರವೇ ಸುಂದರ ವಿಶಾಲವಾದ ಸಮುದ್ರವಿತ್ತು. ಕಾಗೆಗೆ ಸಮುದ್ರದಲ್ಲಿ ಸಿಗುತ್ತಿದ್ದ ಮೀನಿಗಿಂತ ವ್ಯಾಪಾರಿ ಮನೆಯ ಸಿಹಿ, ಖಾರ, ತುಪ್ಪ, ಎಣ್ಣೆ , ಹಾಲು- ಮೊಸರು ಮುಂತಾದವೇ ಹೆಚ್ಚು ರುಚಿಯೆನಿಸುತ್ತಿತ್ತು. ಅವರ ಮನೆ ಆಹಾರ ತಿಂದು ತಿಂದು ಕಾಗೆಗೆ ಅಹಂಕಾರ ಬಂದಿತ್ತು. ಬೇರೆ ಪಕ್ಷಿಗಳ ಜತೆ ಅಸಹನೆಯಿಂದ ವರ್ತಿಸುತ್ತಿತ್ತು. ಈ ಕಾರಣಕ್ಕೆ ಯಾವ ಪಕ್ಷಿಯೂ ಕಾಗೆ ಬಳಿ ಸುಳಿಯುತ್ತಿರಲಿಲ್ಲ.
ಒಂದು ದಿನ ಹಿಮಾಲಯದ ಮಾನಸ ಸರೋವರದಿಂದ ರಾಜಹಂಸಗಳು ವ್ಯಾಪಾರಿ ಇದ್ದ ಪ್ರದೇಶಕ್ಕೆ ವಲಸೆ ಬಂದವು. ವ್ಯಾಪಾರಿಯ ಮಕ್ಕಳು ಸುಂದರ ಬಿಳಿಯ ಬಣ್ಣದ ಆಕರ್ಷಕ ಹಂಸಗಳನ್ನು ನೋಡಿ ಮಾರುಹೋದರು. ಇದನ್ನು ನೋಡಿ ಕಾಗೆಗೆ ಅಸೂಯೆಯಾಯಿತು. ಕಾಗೆ ಹಂಸಗಳ ಬಳಿ ಹೋಗಿ “ನಿಮ್ಮಲ್ಲಿ ಯಾರಾದರೂ ನನ್ನನ್ನು ಹಾರಾಟದಲ್ಲಿ ಸೋಲಿಸಬಲ್ಲಿರಾ?’ ಎಂದು ಸವಾಲು ಹಾಕಿತು. ಕಾಗೆಯ ಸವಾಲು ಕೇಳಿ ಹಂಸಗಳಿಗೆ ಅಚ್ಚರಿಯಾಯಿತು. ಗುರುತು ಪರಿಚಯವಿಲ್ಲದ ಕಾಗೆ ತಮ್ಮನ್ನು ಸ್ಪರ್ಧೆಗೆ ಆಹ್ವಾನಿಸಿದ್ದು ಅವುಗಳಿಗೆ ಸಿಟ್ಟು ತರಿಸಲಿಲ್ಲ. ಒಂದು ಹಂಸ “ಅಯ್ನಾ ಕಾಗೆ ಹಾರಾಟದಲ್ಲಿ ನಿನ್ನ ಹೆಚ್ಚುಗಾರಿಕೆ ಏನಿದೆ ಹೇಳು?’ ಎಂದಿತು. ಕಾಗೆ “ನಾನು ಹಾರಾಟದಲ್ಲಿ ಅಪ್ರತಿಮ. ನೂರೊಂದು ಬಗೆಯ ಹಾರಾಟ ವಿದ್ಯೆಯನ್ನು ಕಲಿತಿದ್ದೇನೆ. ಎಲ್ಲ ರೀತಿಯ ಲಾಗಗಳನ್ನು ಪ್ರದರ್ಶಿಸಬಲ್ಲೆ ‘ ಎಂದಾಗ ಹಂಸಗಳು “ನಮಗೆ ಹಾರುವುದೊಂದೇ ಗೊತ್ತು. ನಿನ್ನ ಹಾಗೆ ವಿವಿಧ ಬಗೆಯ ಹಾರಾಟ ವಿದ್ಯೆಯನ್ನು ನಾವು ಕೇಳಿಯೂ ಇಲ್ಲ , ಕಲಿತೂ ಇಲ್ಲ. ಆದರೂ ನಿನ್ನ ಆಹ್ವಾನ ಅಂಗೀಕರಿಸುತ್ತೇವೆ. ನೀನು ನಮ್ಮೊಂದಿಗೆ ಸ್ಪರ್ಧಿಸಬಹುದು’ ಎಂದವು.
ಪಂದ್ಯ ಆರಂಭವಾಯಿತು. ಹಂಸಗಳನ್ನು ಸೋಲಿಸಲೇಬೇಕು ಅನ್ನುವ ಛಲದಿಂದ ಹಂಸಗಳ ಗಮನ ಸೆಳೆಯಲು ಲಾಗ ಹಾಕಿ ಜೋರಾಗಿ ಸುತ್ತಿ ಪ್ರದರ್ಶಿಸಿದರೂ ವಿಚಲಿತರಾಗದ ಹಂಸಗಳು ಕಾಗೆಯನ್ನು ದಾಟಿ ಮುಂದೆ ಚಲಿಸಿದವು. ಅವುಗಳ ಪ್ರಶಾಂತ ಹಾರಾಟ ನೋಡಿ ಕಾಗೆಗೆ ತನ್ನ ಮಿತಿ ಗೊತ್ತಾಗಿ ಲಾಗ ಹಾಕಲು ತ್ರಾಣಲ್ಲದೆ ರೆಕ್ಕೆಗಳಲ್ಲಿ ಶಕ್ತಿ ಕಡಿಮೆಯಾಗಿ ಸಮುದ್ರದ ನೀರಲ್ಲದೇ ಬೇರೆ ಏನು ಕಾಣದಾಗಿ ಹೋಯಿತು. ಕೆಳಕ್ಕೆ ಬಿದ್ದರೆ ಜಲಸಮಾಧಿಯಾಗುವುದು ಖಂಡಿತ ಎಂದು ಅದಕ್ಕೆ ಗೊತ್ತಾಗಿ ಪ್ರಾಣಭಯದಿಂದ ಕಿರುಚತೊಡಗಿತು. ಬಳಿ ಬಂದ ಹಂಸಗಳು “ನಿನ್ನ ಹಾರಾಟದ ಎಲ್ಲ ಭಂಗಿಗಳು ಮುಗಿದವಾ?’ ಎಂದಾಗ ಕಾಗೆ ನಾಚಿಕೆಯಿಂದ ತಲೆ ತಗ್ಗಿಸಿತು. ಅದು “ಅಯ್ನಾ ಹಂಸಗಳೇ ದಯವಿಟ್ಟು ನನ್ನನ್ನು ಕಾಪಾಡಿ. ನಾನು ಇನ್ನು ಮೇಲೆ ಯಾರನ್ನೂ ಅವಮಾನಿಸುವುದಿಲ್ಲ.’ ಎಂದು ಪ್ರಾರ್ಥಿಸಿತು. ಕಾಗೆಯನ್ನು ಮನ್ನಿಸಿದ ಹಂಸಗಳು ಅದಕ್ಕೆ ಸಹಾಯ ಮಾಡಿತು. ಕಾಗೆ ಸುರಕ್ಷಿತವಾಗಿ ದಡ ಮುಟ್ಟಿತು.
ನಿರೂಪಣೆ: ಗಿರಿಜಾ ಎಸ್. ದೇಶಪಾಂಡೆ
(ಮಹಾಭಾರತ ಉಪಕಥೆಯ ಆಧಾರ)