ಬಾಗಲಕೋಟೆ: ಇಸ್ರೇಲ್ ದೇಶದಲ್ಲಿ ಜಿಲ್ಲೆಯ ರಬಕವಿಯ ಸಾಫ್ಟ್‌ವೇರ್ ಎಂಜಿನಿಯರ್ ಸಿಲುಕಿದ್ದು, ಮಗಳನ್ನು ಸುರಕ್ಷಿತವಾಗಿ ಕರೆಸಿ ಎಂದು ಹೆತ್ತವರು ಪ್ರಧಾನಿ ನರೇಂದ್ರ ಮೋದಿ ಬಳಿ ಮೊರೆ ಇಟ್ಟಿದ್ದಾರೆ.
ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಪಟ್ಟಣದ ಪೂಜಾ ಸಂಗಪ್ಪ ಉಮದಿ ಎಂಬ ಸಾಫ್ಟ್‌ವೇರ್ ಎಂಜಿನಿಯರ್, ಎರಡು ವರ್ಷಗಳ ಅವಧಿಗೆ ಟಿಸಿಎಸ್ ಕಂಪನಿ ಪರವಾಗಿ ಇಸ್ರೇಲ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಸದ್ಯ ಇಸ್ರೇಲ್ ನಲ್ಲಿ ಯುದ್ಧ ನಡೆಯುತ್ತಿರುವುದನ್ನು ಕೇಳಿ ಹೆತ್ತವರು ತೀವ್ರ ಆತಂಕದಲ್ಲಿದ್ದಾರೆ.
ಪೂಜಾಳ ತಂದೆ ಸಂಗಪ್ಪ ಮತ್ತು ತಾಯಿ ನಿರ್ಮಲಾ ಅವರು, ಮಗಳ ಸುರಕ್ಷತೆ ಹಾಗೂ ಭಾರತಕ್ಕೆ ಮರಳಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.
ಇಸ್ರೇಲ್ ನ ಗಾಜಾಪಟ್ಟಿಯಿಂದ 300 ಕಿಮೀ ಅಂತರದಲ್ಲಿ ಪೂಜಾ ಇದ್ದು, ಸೈರನ್ ಆದ ತಕ್ಷಣ ಬಂಕರ್ ನಲ್ಲಿ ರಕ್ಷಣೆ ಪಡೆಯುತ್ತಿದ್ದೇವೆ ಎಂದು ಫೋನ್ ಮೂಲಕ ಮಾಹಿತಿ ನೀಡಿದ್ದಾಳೆ ಎಂದು ಪೂಜಾಳ ತಂದೆ ಸಂಗಪ್ಪ ಉಮದಿ ಉದಯವಾಣಿಗೆ ತಿಳಿಸಿದರು.
ನಾನು ಸುರಕ್ಷಿತವಾಗಿದ್ದೇನೆ ಎಂದು ಮಗಳು ಹೇಳುತ್ತಿದ್ದಾಳೆ. ಆದರೆ, ಬಹಳ ಪ್ರೀತಿಯಿಂದ ಸಾಕಿದ ಮಗಳು ಸಂಕಷ್ಟದಲ್ಲಿ ಸಿಲುಕಿರುವುದು ಕೇಳಿ ಆತಂಕವಾಗುತ್ತಿದೆ. ನಮಗೆ ಒಬ್ಬಳೇ ಮಗಳು. ಒಂದೂವರೆ ವರ್ಷದ ಹಿಂದೆ ಇಸ್ರೇಲ್ ಗೆ ಹೋಗಿದ್ದಾಳೆ. ನಿತ್ಯವೂ ಫೋನ್ ಮಾಡಿ ಮಾತಾಡುತ್ತಾಳೆ. ಆದರೂ ನಮಗೆ ತೀವ್ರ ಆತಂಕವಾಗಿದೆ. ಪ್ರಧಾನಿ ಮೋದಿ ಅವರೇ ನಮ್ಮ ನೆರವಿಗೆ ಬರಬೇಕು ಎಂದು ಕೇಳಿಕೊಂಡಿದ್ದಾರೆ. ನಮ್ಮ ಮಗಳು ಪೂಜಾ ಸೇರಿ, ಮೂವರು ಭಾರತೀಯರು ಅಲ್ಲಿದ್ದಾರೆ ಎಂದು ಮಗಳು ತಿಳಿಸಿದ್ದಾಳೆ. ಎಲ್ಲರನ್ನೂ ಸುರಕ್ಷಿತವಾಗಿ ಭಾರತಕ್ಕೆ ಕರೆಸಬೇಕು ಎಂದು ಸಂಗಪ್ಪ ಉಮದಿ ಒತ್ತಾಯಿಸಿದ್ದಾರೆ.