ರಬಕವಿ-ಬನಹಟ್ಟಿ: ರಬಕವಿ ಬನಹಟ್ಟಿ ನಗರ ಸ್ವಾತಂತ್ರ‍್ಯ ಪೂರ್ವ ಕಾಲದಿಂದಲೂ ನೇಕಾರಿಕೆಯನ್ನು ಅವಲಂಬಿಸಿದ ನಗರಗಳು. ಶತಮಾನಗಳಿಂದ ನೇಕಾರರಿಕೆಯ ಉದ್ಯೋಗವನ್ನು ಮಾಡುತ್ತ ಬಂದರೂ ಇಲ್ಲಿಯ ನೇಕಾರರು ಮತ್ತು ನೇಕಾರಿಕೆಯ ಉದ್ಯೋಗ ಸಮಯದಿಂದ ಸಮಯಕ್ಕೆ ಹಲವಾರು ಸಮಸ್ಯೆಗಳಿಂದ ತೊಂದರೆಯಲ್ಲಿದೆ.
ಬಡ ನೇಕಾರರ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬನಹಟ್ಟಿ ನಗರದ ಲಕ್ಷ್ಮಿ ನಗರದ ಬಡಾವಣೆಯಲ್ಲಿ ನೇಕಾರ ಭವನವವನ್ನು ನಿರ್ಮಾಣ ಮಾಡಲಾಗಿತ್ತು. ಉಮಾಶ್ರೀ ಸಚಿವೆಯಾಗಿದ್ದ ಸಂದರ್ಭದಲ್ಲಿ ನೇಕಾರರ ಭವನವನ್ನು 2015ರಲ್ಲಿ ನಿರ್ಮಾಣ ಮಾಡಲಾಯಿತು. ಅಂದಾಜು ರೂ. 55 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೇಕಾರರ ಭವನ ಸದ್ಯ ಯಾವುದೆ ಕೆಲಸಕ್ಕೆ ಬಾರದೆ ಧೂಳು ತಿನ್ನುತ್ತಿದೆ. ಇದುವರೆಗೂ ಯಾವುದೆ ಒಂದು ಕಾರ್ಯಕ್ರಮ ಈ ಭವನದಲ್ಲಿ ನಡೆದಿಲ್ಲ.
ನೀರು, ವಿದ್ಯುತ್, ಸ್ವಚ್ಛತೆ, ರಸ್ತೆ ಸೇರಿದಂತೆ ಮೂಲ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದೆ. ಭವನಕ್ಕಾಗಿ ಕೊಳವೆ ಬಾವಿ ಇದ್ದರೂ ಅದು ಕೆಟ್ಟು ನಿಂತಿದೆ. ಇನ್ನೂ ಭವನಕ್ಕೆ ವಿದ್ಯುತ್ ಸಂಪರ್ಕವೂ ಕೂಡಾ ಇಲ್ಲವಾಗಿದೆ. ನಗರದಿಂದ ದೂರದಲ್ಲಿರುವುದರಿಂದ ನೇಕಾರರ ಭವನವು ಅನೈತಿಕ ಚಟುವಟಿಕೆಗಳ ತಾನವಾಗಿತ್ತು. ನೇಕಾರ ಭವನದ ಸುತ್ತ ಮುತ್ತ ಸಾಕಷ್ಟು ಪ್ರಮಾಣದಲ್ಲಿ ಕಸ, ಗಿಡಗಂಟಿಗಳು ಬೆಳೆದು ನಿಂತಿವೆ. ಭವನಕ್ಕೆ ಕಟ್ಟಲಾದ ಕಟ್ಟೆಗಳು ಕೂಡಾ ಒಡೆಯುತ್ತಿವೆ. ಈಗ ಸುತ್ತ ಮುತ್ತ ಒಂದೆರಡು ಮನೆಗಳು ನಿರ್ಮಾಣವಾಗಿದ್ದರಿಂದ ಚಟುವಟಿಕೆಗಳು ನಿಂತಿವೆ.
ಜಮಖಂಡಿಯ ಭೂಸೇನಾ ನಿಗಮದಿಂದ ನಿರ್ಮಾಣಗೊಂಡ ನೇಕಾರರ ಭವನವು ಇದುವರೆಗೂ ರಬಕವಿ ಬನಹಟ್ಟಿ ನಗರಸಭೆಗೆ ಹಸ್ತಾಂತರಗೊಂಡಿಲ್ಲ. ನೇಕಾರ ಭವನವು ಲಕ್ಷ್ಮೀ ನಗರದ ಬಡಾವಣೆಯಲ್ಲಿ ನಿರ್ಮಾಣಗೊಂಡಿದೆ. ಇದು ನಗರದಿಂದ ದೂರವಿರುವುದರಿಂದ ಇಲ್ಲಿ ಯಾವುದೆ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಜನರು ಇಲ್ಲಿಗೆ ಬರುವುದು ಕೂಡಾ ತೊಂದರೆದಾಯಕವಾಗಿದೆ.
ಸ್ಥಳೀಯ ಮುಖಂಡರಾದ ಶಶಿಕಾಂತ ಹುನ್ನೂರ, ಕಲ್ಲಪ್ಪ ಕರಲಟ್ಟಿ, ಸೋಮನಾಥ ಗೊಂಬಿ ನೇಕಾರರ ಭವನವನ್ನು ನೇಕಾರ ಸಮುದಾಯದ ಅಭಿವೃದ್ಧಿಗಾಗಿ ಬಳಕೆ ಮಾಡಲು ಸಾಕಷ್ಟು ಹೋರಾಟ ಮಾಡಿದರೂ ಕೂಡಾ ಯಾವುದೆ ಪ್ರಯೋಜನವಾಗಲಿಲ್ಲ. ಅವರು ಕೂಡಾ ಕೈಚಲ್ಲಿ ಕುಳಿತಿದ್ದಾರೆ.
ಕೆ ಆರ್ ಡಿ ಡಿ ಎಲ್ ನಿಗಮದಿಂದ ಅದು ಹಸ್ತಾಂತರವಾಗಬೇಕಾಗಿದೆ. ಈ ಕುರಿತು ಸಾಕಷ್ಟು ಬಾರಿ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದೆ. ನೇಕಾರರ ಭವನ ನೇಕಾರರ ಅಭಿವೃದ್ಧಿಗಾಗಿ ಸದ್ಬಳಕೆಯಾಗಬೇಕು.
-ರಾಜಶೇಖರ ಸೋರಗಾವಿ, ನೇಕಾರ ಮುಖಂಡರು, ಬನಹಟ್ಟಿ
-ಕಿರಣ ಶ್ರೀಶೈಲ ಆಳಗಿ