Advertisement
ಈ ಭಾಗದ ಜಮಖಂಡಿ ರಬಕವಿ, ಬನಹಟ್ಟಿ, ತೇರದಾಳ, ಹಾರುಗೇರಿ ಅಥಣಿ ಹಾಗೂ ಬೆಳಗಾವಿ ಬಾಗಲಕೋಟ ಜಿಲ್ಲೆಯ ಪ್ರಮುಖ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಹಾಹಾಕಾರ ಪ್ರಾರಂಭವಾಗುವ ಸಂಭವ ಜಾಸ್ತಿಯಾಗಿದೆ. ಏಪ್ರಿಲ್ ಎರಡನೆ ವಾರದವರೆಗೆ ನೀರು ಸಾಕಾಗಬಹುದು ಎಂಬುದು ಅಧಿಕಾರಿಗಳ ಅಂಬೋಣ. ಅಲ್ಲದೇ ಬಿಸಿಲಿನ ತಾಪಮಾನ, ನೀರಿನ ಮಟ್ಟದಲ್ಲಿ ಕುಸಿತ, ಸರಿಯಾದ ಮಳೆಯಾಗದಿರುವ ಹಿನ್ನಲೆಯಲ್ಲಿ ಮುಂದಿನ ಎರಡುವರೆ ತಿಂಗಳುಗಳ ಕಾಲ ನೀರಿನ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಹೆಚ್ಚಾಗಿದೆ.
Related Articles
Advertisement
ಅದೇ ರೀತಿ ತೇರದಾಳ ಹಾಗೂ ಮಹಾಲಿಂಗಪುರ ಪುರಸಭೆಯಲ್ಲಿ ಬರ ಎದುರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೇ ಎನ್ನುವುದು ಬೀಸಿಲಿನ ತಾಪಮಾನ ನೋಡಿದರೆ ತಿಳಿಯುತ್ತಿಲ್ಲ.
ಇನ್ನೂ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಆ ನಿಟ್ಟಿನಲ್ಲಿ ಕೊಳವೆ ಬಾವಿ, ಕೆರೆ ಇತರೆ ಸಂಪನ್ಮೂಲಗಳನ್ನು ಬಳಸಿಕೊಂಡು ನೀರಿನ ವ್ಯವಸ್ಥೆ ಮಾಡಲು ತಾಲೂಕು ಆಡಳಿತ ಸಿದ್ದತೆ ಮಾಡಿಕೊಂಡಿದೆ.
ಮುಂದಿನ ಮೂರು ತಿಂಗಳಕಾಲ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅದರಲ್ಲಿ ಬೀಜಿಯಾಗಿದ್ದಾರೆ. ಸದ್ಯ ಮುಂದಿನ ದಿನಮಾನಗಳಲ್ಲಿ ಸಂಭವಿಸುವ ಬರ ಪರಿಸ್ಥಿತಿಯಲ್ಲಿ ಕುಡಿಯುವ ನೀರು, ಬೆಳೆ, ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದು, ಆ ನಿಟ್ಟಿನಲ್ಲಿ ಜಿಲ್ಲಾ ಹಾಗೂ ತಾಲೂಕು ಆಡಳಿತ ಈ ಗಂಭೀರ ಸಮಸ್ಯೆಯನ್ನು ಯಾವ ರೀತಿ ಎದುರಿಸುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ತಾಲೂಕಿನಲ್ಲಿ ಸದ್ಯ ಸುಮಾರು ಒಂದುವರೆ ತಿಂಗಳ ಕಾಲ ನೀರಿನ ಯಾವುದೇ ಸಮಸ್ಯೆ ಇಲ್ಲ, ಈ ಕುರಿತು ನದಿ ನೀರು ಬತ್ತಿ ಸಮಸ್ಯೆ ಆಗುವ ಮೊದಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಆ ನಿಟ್ಟಿನಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಎಲ್ಲಿ ಸಮಸ್ಯೆ ಆಗುತ್ತದೆಯೋ ಅಲ್ಲಲ್ಲಿ ನಿವಾರಣೆಗೆ ತಾಲೂಕು ಆಡಳಿತ ಸಕಲ ರೀತಿಯಿಂದ ಸಜ್ಜಾಗಿದೆ.-ಗಿರೀಶ ಸ್ವಾದಿ ತಹಶೀಲ್ದಾರರು, ರಬಕವಿ ಬನಹಟ್ಟಿ ಬರ ಎದುರಿಸುವ ನಿಟ್ಟಿನಲ್ಲಿ ಈಗಾಲೇ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆದಿದ್ದು, ತಾಲೂಕಿನ ಯಾವ ಯಾವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದುರಾಗುತ್ತದೆ ಎಂಬುದರ ಬಗ್ಗೆ ಪಟ್ಟಿ ಮಾಡಲಾಗಿದ್ದು, ಮೊದಲು ಬೋರ್ ವೆಲ್‌ಗಳ ಮೂಲಕ ನೀರು ಪೂರೈಕೆಗೆ ಕ್ರಮ ತೆಗೆದುಕೊಳ್ಳುತ್ತೇವೆ. ಒಂದು ವೇಳೆ ಬರ ಪರಿಸ್ಥಿತಿ ಹೆಚ್ಚಾದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ಸಿದ್ಧರಿದ್ದು, ಈ ಕುರಿತು ಟೆಂಡರ್ ಕರೆಯಲಾಗಿದೆ. ಒಟ್ಟಾರೆ ಈ ಕುರಿತು ಅಗತ್ಯ ಕ್ರಮಗಳನ್ನು ತೆಗೆದುಕೊಂಡು, ನೀರಿನ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ.
-ಸಿದ್ದಪ್ಪ ಪಟ್ಟಿಹಾಳ, ಕಾರ್ಯನಿರ್ವಹಣಾಧಿಕಾರಿ, ತಾಲೂಕು ಪಂಚಾಯತಿ, ರಬಕವಿ ಬನಹಟ್ಟಿ ರಬಕವಿ ಬನಹಟ್ಟಿ ನಗರಸಭೆಯ ವ್ಯಾಪ್ತಿಯಲ್ಲಿ ಈಗಾಗಲೇ 338 ಕೊಳವೆ ಬಾವಿಗಳಿವೆ. ಅದರಲ್ಲಿ 326 ಕಾರ್ಯ ಮಾಡುತ್ತಿವೆ. ಉಳಿದ ಕೊಳವೆ ಬಾವಿಗಳ ದುರಸ್ತಿ ಕಾರ್ಯವನ್ನು ಕೂಡಾ ಕೈಗೊಳ್ಳಲಾಗುವುದು. 13 ತೆರೆದ ಬಾವಿಗಳು ಇದ್ದು, ಅವುಗಳನ್ನು ಕೂಡಾ ಸ್ವಚ್ಛಗೊಳಿಸಿ ನೀರು ಪೂರೈಕೆಗೆ ಬಳಸಿಕೊಳ್ಳಲಾಗುವುದು ಮತ್ತು 85 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಲಾಗಿದೆ. ಕೊಳವೆ ಬಾವಿಗಳ ಮಾಲೀಕರೊಂದಿಗೆ ಒಡಂಬಡಿಕೆ ಮಾಡಿಕೊಂಡು ನೀರು ಪೂರೈಸಿದ ಕೊಳವೆ ಬಾವಿಗಳ ಮಾಲೀಕರ ವಿದ್ಯುತ್ ಬಿಲ್ ನ್ನು ನಗರಸಭೆಯಿಂದ ಪಾವತಿಸಲಾಗುವುದು. ನೀರಿನ ಸಮಸ್ಯೆಯನ್ನು ಎದುರಿಸುವ ಸಂದರ್ಭದಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.
-ಜಗದೀಶ ಈಟಿ, ಪೌರಾಯುಕ್ತರು, ನಗರಸಭೆ, ರಬಕವಿ ಬನಹಟ್ಟಿ -ಕಿರಣ ಶ್ರೀಶೈಲ ಆಳಗಿ