Advertisement

Rabkavi Banhatti; ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ಸಚಿವ ತಿಮ್ಮಾಪುರ

10:42 PM Nov 27, 2023 | Team Udayavani |

ರಬಕವಿ-ಬನಹಟ್ಟಿ: ಬರ ಪರಿಸ್ಥಿತಿಯ ಬಗ್ಗೆ ಪ್ರಧಾನಿಯವರಿಗೆ ತಿಳಿಸಲು ನಾಲ್ಕು ಬಾರಿ ಹೋದರೂ ಅವರು ನಮ್ಮ ಮಂತ್ರಿಗಳ ಭೇಟಿಗೆ ಅವಕಾಶ ನೀಡಲಿಲ್ಲ. ನಮ್ಮ ದೇಶದ ಪ್ರಧಾನಿಗಳಿಗೂ ಕೂಡಾ ಕರ್ನಾಟಕವೂ ಭಾರತದಲ್ಲಿ ಇದೆ ಎಂಬ ಭಾವನೆ ಬರಬೇಕಾಗಿದೆ. ಕೇಂದ್ರ ಸರ್ಕಾರ ತನ್ನ ಪಾಲಿನ ಕಾರ್ಯವನ್ನು ತಾನು ಮಾಡಬೇಕಾಗಿದೆ. ನಮ್ಮ ರಾಜ್ಯದ ಅಳಲನ್ನು ತೋಡಿಕೊಳ್ಳಲು ಹೋದ ಮಂತ್ರಿಗಳಿಗೆ ಪ್ರಧಾನಿಯವರು ಭೇಟಿಗೆ ಅವಕಾಶ ನೀಡುತ್ತಿಲ್ಲ. ಬಿಜೆಪಿ ನಾಯಕರು ಅಂಕಿ ಸಂಖ್ಯೆಗಳು ಸರಿಯಿಲ್ಲ ಎಂಬ ಸಣ್ಣತನದ ಮಾತುಗಳನ್ನು ಆಡುತ್ತಿದ್ಧಾರೆ ಎಂದು ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ಹರಿ ಹಾಯ್ದರು.

Advertisement

ಸೋಮವಾರ ರಬಕವಿ-ಬನಹಟ್ಟಿ ನಗರಸಭೆಯ ಸಭಾ ಭವನದಲ್ಲಿ ಬರ ಪರಿಸ್ಥಿತಿ ಅಧ್ಯಯನದ ಅಧಿಕಾರಿಗಳ ಸಭೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿ ಸಂಸದರು ಕೇಂದ್ರದ ಹಣವನ್ನು ತಂದರೆ ಇಲ್ಲಿಯ ಜನರು ಶಬ್ಬಾಶನ್ನು ನೀಡುತ್ತಾರೆ. ಇಷ್ಟೊಂದು ಜನರನ್ನುಆಯ್ಕೆ ಮಾಡಿ ಕಳುಹಿಸಿದರೂ ನಮ್ಮ ಸಂಸದರು ಬರ ಪರಿಸ್ಥಿತಿಯ ಬಗ್ಗೆ ಪ್ರಧಾನಿಯವರಿಗೆ ಮನವರಿಕೆ ಮಾಡುತ್ತಿಲ್ಲ. ರಾಜ್ಯದ ರೈತರ ಪರಿಸ್ಥಿತಿಯ ಕುರಿತು ಮೋದಿಯವರ ಹತ್ತಿರ ಮಾತನಾಡುವ ಶಕ್ತಿ ಇಲ್ಲದಂತಾಗಿದೆ. ಇಷ್ಟು ಅಶಕ್ತ ಸಂಸದರನ್ನು ಮತ್ತು ರಾಜ್ಯ ಬಿಜೆಪಿ ನಾಯಕರನ್ನು ನಾನು ಇದುವರೆಗೆ ನೋಡಿಲ್ಲ ಎಂದರು.

120 ವರ್ಷಗಳ ಹಿಂದಿನ ಬರಗಾಲ ಪರಿಸ್ಥಿತಿ ಈಗ ಬಂದಿದೆ. ಬರದ ಸಂದರ್ಭದಲ್ಲಿ ರಾಜಕಾರಣದ ಮಾತುಗಳನ್ನು ಆಡುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲ. ದೇಶದ ಪ್ರಧಾನಿ ಮಹಾನಗರ ಪಾಲಿಕೆಗಳ ಚುನಾವಣೆಯ ಪ್ರಚಾರಕ್ಕೂ ಹೋಗುತ್ತಿದ್ದಾರೆ. ತಾವು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಪ್ರಧಾನಿ ಹೇಳುತ್ತಿಲ್ಲ. ಕೇವಲ ಕಾಂಗ್ರೆಸ್ ಸರ್ಕಾರವನ್ನು ತೆಗಳುವ ಕೆಲಸ ಮಾಡುತ್ತಿದ್ದಾರೆ. ಹತ್ತು ವರ್ಷದಲ್ಲಿ ತಾವು ಏನು ಮಾಡಿದ್ದೀರಿ ಎಂದು ಸಚಿವ ತಿಮ್ಮಾಪುರ ಪ್ರಶ್ನಿಸಿದರು.

ನಮ್ಮ ಪ್ರಧಾನಿಗಳಿಗೆ ಭೀಕರ ಬರಗಾಲದಲ್ಲಿ ಚುನಾವಣೆ ಮತ್ತು ಅಧಿಕಾರ ಮುಖ್ಯವಾಯಿತು. ಕೇಂದ್ರ ಸರ್ಕಾರ ರಾಜ್ಯದ ವಿರುದ್ಧ ವಿಮುಖ ಧೋರಣೆಯನ್ನು ತೋರುತ್ತಿದೆ. ನಾವು ಜಿ ಎಸ್ ಟಿ ಹಣ ನೀಡುತ್ತಿಲ್ಲವೆ. ನಮ್ಮ ಪಾಲಿನ ಹಣವನ್ನು ನಮಗೆ ನೀಡಿ. ದೇಶದಲ್ಲಿರುವ ರಾಜ್ಯಗಳನ್ನು ಮತ್ತು ರಾಜ್ಯದ ಜನತೆಯನ್ನು ಪ್ರೀತಿಸುವ ಕಾರ್ಯವನ್ನು ಪ್ರಧಾನಿಗಳು ಮಾಡಲಿ. ಪ್ರಧಾನಿಗಳು ದೇಶಕ್ಕಾಗಿ ಇರಬೇಕು ಯಾವುದೆ ಪಕ್ಷಕ್ಕೆ ಅಲ್ಲ. ಆದ್ದರಿಂದ ಪ್ರಧಾನಿ ಮೋದಿ ನಮ್ಮ ಮಂತ್ರಿಗಳ ಭೇಟಿಗೆ ಅವಕಾಶ ನೀಡಿ ಆದಷ್ಟು ಬೇಗನೆ ಬರ ಪರಿಹಾರವನ್ನು ಘೋಷಣೆ ಮಾಡಬೇಕು ಎಂದು ವಿನಂತಿಸುತ್ತೇನೆ ಎಂದು ಸಚಿವ ತಿಮ್ಮಾಪುರ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next