ರಬಕವಿ-ಬನಹಟ್ಟಿ : ತಾಲೂಕಿನೆಲ್ಲೆಡೆ ದೀಪಗಳ ಹಬ್ಬ ದೀಪಾವಳಿಯ ಅಬ್ಬರ ಜೋರಾಗಿದ್ದರೆ, ಇತ್ತ ನೇಕಾರರ ಜೀವನದ ಸ್ಥಿತಿ ಮಾತ್ರ ಕತ್ತಲಿಂದ ತುಂಬಿದೆ. ಕೈಮಗ್ಗ ನೇಕಾರರ ಸ್ಥಿತಿಯಂತೂ ಹೇಳತೀರದಾಗಿದೆ.
ಪವರ್‌ಲೂಂ ನೇಕಾರರಿಗೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ನಿಗದಿತ ಕೂಲಿ ಸಿಗದೇ ದೀಪಾವಳಿ ಹಬ್ಬದ ಹುರುಪು ಕಳೆಗುಂದಿದ್ದರೆ, ಕೈಮಗ್ಗ ಅಭಿವೃದ್ಧಿ ನಿಗಮದ ನೇಕಾರರಿಗೆ ದುಡಿಯುವ ಕೈಗಳಿಗೆ ಕಚ್ಚಾ ನೂಲು. ವಸ್ತುಗಳು ದೊರಕದೇ ಕೂಲಿ ಇಲ್ಲದ ಕಾರಣ ಕುಟುಂಬದ ನಿರ್ವಹಣೆಯೇ ದೊಡ್ಡ ಸವಾಲಾಗಿರುವಾಗ ದೀಪಾವಳಿ ಅವರ ಬಾಳಲ್ಲಿ ಬೆಳಕು ಮೂಡಿಸದೇ ಕತ್ತಲೆ ತುಂಬಿದೆ. ಕೈಮಗ್ಗ ಅಭಿವೃದ್ಧಿ ನಿಗಮದಿಂದ ನೇಕಾರರಿಗೆ ಕಳೆದ 6 ತಿಂಗಳಿಅದ ಕಚ್ಚಾ ನೂಲು ಸಮರ್ಪಕವಾಗಿ ಪೂರೈಕೆಯಾಗದೇ ಕೂಲಿ ಇಲ್ಲದ್ದಕ್ಕೆ ದೈನಂದಿನ ಬದುಕೇ ದುರ್ಬರವಾಗಿದೆ.
ಪ್ರತಿ ವರ್ಷ ಹಬ್ಬದ ಮುಂಗಡವಾಗಿ ಹಣ ಪಾವತಿಸಿ ಕಂತು ರೂಪದಲ್ಲಿ ಪಡೆಯುತ್ತಿದ್ದ ಕೆಎಚ್‌ಡಿಸಿ ಈ ವರ್ಷ ಹಬ್ಬದ ಮುಂಗಡ ನೀಡುವುದಿರಲಿ ನೇಕಾರರ ಕಳೆದ 6 ತಿಂಗಳ ಕೂಲಿಯನ್ನು ನೀಡಿಲ್ಲವಾದ್ದರಿಂದ ದೀಪಾವಳಿ ಈ ಬಾರಿ ಕೈಮಗ್ಗ ನೇಕಾರರ ಪಾಲಿಗೆ ಕತ್ತಲೆ ತುಂಬಿದೆ.
ದೀಪಾವಳಿಯ ಸಂದರ್ಭದಲ್ಲಿ ಕೈಮಗ್ಗ ನೇಕಾರನ ಸ್ಥಿತಿ ತುಂಬ ಚಿಂತಾಜಕವಾಗಿದೆ. ದುಡಿದ ಕೆಲಸಕ್ಕೆ ಮಜೂರಿ ಇಲ್ಲ, ಹಬ್ಬದ ಪ್ರಯುಕ್ತ ನೀಡುತ್ತಿದ್ದ ಮುಂಗಡ (ಸಾಲದ)ಹಣವಿಲ್ಲ, ಬೋನಸ್ ಅಂತೂ ಗಗನಕುಸುಮವೇ ಸರಿ. 6 ತಿಂಗಳಿಂದ ಕೈಗೆ ಉದ್ಯೋಗ ನೀಡದ ಕೆಎಚ್‌ಡಿಸಿ ಕೈಯಾಡಿಸಿದರೆ, ಆಡಳಿತದಲ್ಲಿರುವ ಸರ್ಕಾರ ಗ್ಯಾರಂಟಿ ಬಗ್ಗೆ ಹೇಳುತ್ತಾರೆ. ವಿಪಕ್ಷದವರ ಕೇಳಿದರೆ ನಾವು ಅಧಿಕಾರದಲ್ಲಿ ಇಲ್ಲ ಎಂದುತ್ತರಿಸುತ್ತಾರೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿರುವ ನೇಕಾರನ ಗೋಳು ಕೇಳುವವರೇ ಇಲ್ಲದಂತಾಗಿದೆ. ದಿನ ಬೆಳಗಾದರೆ ಕುಟುಂಬ ನಿರ್ವಹಣೆ ಹೇಗೆ? ಎಂಬುದೇ ಭೂತಾಕಾರದ ಸಮಸ್ಯೆಯಾಗಿ ನರಳುತ್ತಿರುವ ಕೈಮಗ್ಗ ನೇಕಾರರ ಸಮಸ್ಯೆಗಳಿಗೆ ಸ್ಪಂದಿಸುವವರಾರು ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
-ಕಿರಣ ಶ್ರೀಶೈಲ ಆಳಗಿ