Advertisement

Rabkavi Banhatti ಗಣೇಶ ಮೂರ್ತಿ ನಿರ್ಮಾಣವೇ ಬದುಕಿಗೆ ಜೀವಾಳ 

09:34 PM Sep 05, 2024 | Team Udayavani |

ರಬಕವಿ ಬನಹಟ್ಟಿ : ಗಣೇಶೋತ್ಸವಕ್ಕೆ ಇನ್ನೇನು ಎರಡೇ ದಿನಗಳು ಬಾಕಿ ಇದ್ದು, ಗಣೇಶನ ಆಗಮನಕ್ಕೆ ರಬಕವಿ ಬನಹಟ್ಟಿಯಲ್ಲಿ ಭರ್ಜರಿ ತಯಾರಿ ನಡೆದಿದೆ. ಇದರಿಂದ ಜೇಡಿಮಣ್ಣಿನ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ತಯಾರಿಕೆಗೆ ಕಲಾವಿದರು ಹಗಲು ರಾತ್ರಿ ಎನ್ನದೇ ತಲ್ಲೀನರಾಗಿ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.

Advertisement

ರಬಕವಿಯ ಈಶ್ವರ ಸಣಕಲ್ ರಸ್ತೆಗೆ ಹೊಂದಿಕೊಂಡಂತೆ ಚವ್ಹಾಣ ಎಂಬುವವರ ಕುಟುಂಬ ಇದ್ದು, ಇವರ ಮುಖ್ಯ ಉದ್ಯೋಗ ಗಣೇಶ ವಿಗ್ರಹಗಳನ್ನು ಮಾಡುವುದು. ಒಂದು ಶತಮಾನಗಳಿಗಿಂತಲೂ ಹೆಚ್ಚು ಕಾಲ ಗಣೇಶ ವಿಗ್ರಹಗಳನ್ನು ಮಾಡುತ್ತಾ ಬಂದಿದ್ದಾರೆ.

ರಾಮಾಚಾರಿ ಚವ್ಹಾಣ, ನಂತರ ಇವರ ಮಗ ದಾನೇಶ್ವರ ಚವ್ಹಾಣ ಹಾಗೂ ಹೆಂಡತಿ ಕಮಲವ್ವ, ಇವರ ಮಗ ವಿಠ್ಠಲ ಚವ್ಹಾಣ ಮೂರ್ತಿಗಳನ್ನು ಮಾಡುತ್ತಿದ್ದರು. ಹಲವು ವರ್ಷಗಳ ಹಿಂದೆ ವಿಠ್ಠಲ ಚವ್ಹಾಣ ನಿಧನ ಹೊಂದಿದ ನಂತರ ಅವರ ಪತ್ನಿ ವೀಣಾ ಚವ್ಹಾಣ ತಮ್ಮ ಇಬ್ಬರು ಮಕ್ಕಳಾದ ಅಮರ ಮತ್ತು ರಾಹುಲ ಅವರನ್ನು ಕರೆದುಕೊಂಡು ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡು, ಮಕ್ಕಳ ಜೊತೆಗೂಡಿ ಮೂರ್ತಿಗಳನ್ನು ಮಾಡುತ್ತಿದ್ದಾರೆ. ಈ ಕುಟುಂಬದ ಮೂಲ ಕಸುಬು ಮೂರ್ತಿಗಳನ್ನು ಮಾಡುವುದು. ಹೋಳಿ ಹುಣ್ಣಿಮೆಯ ಸಂದರ್ಭದಲ್ಲಿ ಕಾಮಣ್ಣನ ಮೂರ್ತಿಗಳನ್ನು ಮಾರಾಟ ಮಾಡುವುದು ಇವರ ಪ್ರಮುಖ ಉದ್ಯೋಗವಾಗಿದೆ.

ವೀಣಾ ಮದುವೆಯಾಗಿ ಬಂದ ನಂತರ ತಮ್ಮ ಪತಿ ವಿಠ್ಠಲ ಅವರ ಜೊತೆಗೂಡಿ ಗಣೇಶನ ವಿಗ್ರಹಗಳನ್ನು ಮಾಡುವುದನ್ನು ಕಲಿತುಕೊಂಡರು. ಅವರು ಸುಮಾರು ಮೂವತ್ತು ವರ್ಷಗಳಿಂದ ವಿಗ್ರಹಗಳನ್ನು ಮಾಡುತ್ತಿದ್ದಾರೆ. ಅದೇ ರೀತಿಯಾಗಿ ಅವರ ಮಕ್ಕಳಾದ ಅಮರ ಹದಿನೈದು ವರ್ಷಗಳಿಂದ ರಾಹುಲ ಹದಿನಾಲ್ಕು ವರ್ಷಗಳಿಂದ ಮೂರ್ತಿಗಳನ್ನು ಮಾಡುತ್ತಿದ್ದಾರೆ. ವೀಣಾ ಕೂಡಾ ಮಕ್ಕಳನ್ನು ಕರೆದುಕೊಂಡು ಮನೆತನದ ವೃತ್ತಿಯನ್ನು ಮುಂದುವರೆಸಿಕೊಅಡು ಬಂದಿರುವುದು ಅಪರೂಪದ ಸಂಗತಿ.

ಬದಲಾದ ಕಾಲಕ್ಕೆ ಅನುಗುಣವಾಗಿ ಕಳೆದ ಐದಾರು ವರ್ಷಗಳಿಂದ ಪ್ಲಾಸ್ಟರ ಆಫ್ ಪ್ಯಾರಿಸ್‌ನಿಂದ ತಯಾರಿಸಲಾದ ಮೂರ್ತಿ ತಯಾರಿಸಲಾಗುತ್ತಿತ್ತು. ಅದರಲ್ಲಿ ಕೆಲವರು ಪಿಒಪಿ ಮತ್ತು ಜೇಡಿಮಣ್ಣಿನ ಗಣಪತಿ ಪೂಜಿಸುತ್ತಿದ್ದರು. ಆದರೆ, ಕಳೆದ ಹಲವು ವರ್ಷಗಳಿಂದ ರಾಜ್ಯ ಸರಕಾರ ಮಣ್ಣಿನ ಗಣಪತಿ ಮೂರ್ತಿ ತಯಾರಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕಾರಣ ಚವ್ಹಾಣ ಕುಟುಂಬದವರಿಗೆ ಸಾಕಷ್ಟು ಬೇಡಿಕೆ ಬಂದಿದೆ. ಕಾರಣ ಇವರು ಮೊದಲಿನಿಂದಲೂ ಮಣ್ಣಿನ ಗಣೇಶ ವಿಗ್ರಹಗಳನ್ನು ಮಾಡುತ್ತಾ ಬಂದಿರುವುದು ವಿಶೇಷವಾಗಿದೆ.

Advertisement

ಈ ಬಾರಿ ನೂರಾರು ವಿಗ್ರಹಗಳನ್ನು ಮಾಡಿದ್ದೇವೆ. ಇನ್ನೂ ಬೇಡಿಕೆ ಸಾಕಷ್ಟು ಇದೆ. ಆದರೆ ಮಣ್ಣಿನ ಮೂರ್ತಿಗಳನ್ನು ಕೈಯಿಂದ ಮಾಡಬೇಕಾದರೆ ಬಹಳಷ್ಟು ಸಮಯಬೇಕಾಗುತ್ತದೆ. ಅದರಲ್ಲೂ ತಾಳ್ಮೆ ಮುಖ್ಯವಾಗಿದೆ. ನಾವು ಯಾವುದೇ ರಾಸಾಯನಿಕ ಬಣ್ಣಗಳನ್ನು ಬಳಸದೆ, ಕೇವಲ ನೈಸರ್ಗಿಕ ನೀರಿನಲ್ಲಿ ಕರಗುವ ಬಣ್ಣಗಳನ್ನು ಬಳಸುತ್ತೇವೆ. ಅಲ್ಲದೇ ಜನರು ಜಾಗೃತರಾಗುತ್ತಿದ್ದು ಬಾರಿ ಪ್ರಮಾಣದಲ್ಲಿ ಗ್ರಾಹಕರು ಬರುತ್ತಿದ್ದು, ಪರಿಸರ ಸ್ನೇಹಿ ಗಣೇಶನಿಗೆ ಮತ್ತೊಮ್ಮೆ ಬಾರಿ ಬೇಡಿಕೆ ಬಂದಿದೆ ಎನ್ನುತ್ತಾರೆ ಅಮರ ಚವ್ಹಾಣ.

ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಗಣೇಶ ಮೂರ್ತಿ ತಯಾರಿಸುವುದು ಸುಲಭ. ಆದರೆ ಜೇಡಿಮಣ್ಣಿನಿಂದ ತಯಾರಿಸುವ ಮೂರ್ತಿಗಳು ತೀರಾ ಸೂಕ್ಷ್ಮವಾಗಿರುವ ಜೊತೆಗೆ ಪರಿಸರ ಸ್ನೇಹಿ ಆಗಿವೆ. ಮೂರ್ತಿಗಳಲ್ಲಿ ಕಲಾವಿದನ ನೈಜ ಕಲಾತ್ಮಕತೆ. ಕೌಶಲ್ಯ ಮೂಡುತ್ತದೆ. ಪರಿಸರಕ್ಕೆ ಹಾನಿ ಉಂಟಾಗಬಾರದು ಎಂಬ ಉದ್ದೇಶದಿಂದ ತಾವು ಪ್ರತಿ ವರ್ಷ ಜೇಡಿ ತಾವಲಗೇರಿಯಿಂದ ವಿಶೇಷವಾದ ಜೇಡಿ ಮಣ್ಣನ್ನು ತಂದು ಅದಕ್ಕೆ ಹತ್ತಿಯನ್ನು ಕೂಡಿಸಿ, ಹದ ಮಾಡಿಕೊಂಡು ಮಣ್ಣಿನ ಗಣೇಶನ ಮೂರ್ತಿಗಳನ್ನು ಮಾಡುತ್ತೇವೆ ಎನ್ನುತ್ತಾರೆ ಅಮರ ಚವ್ಹಾಣ.

ಕುಟುಂಬ ನಿರ್ವಹಣೆ ಹೊತ್ತಿರುವ ತಾಯಿ ವೀಣಾ, ಮಕ್ಕಳೊಂದಿಗೆ ಗಣೇಶನ ವಿಗ್ರಹಗಳನ್ನು ಮಾಡುವಲ್ಲಿ ನೆರವಾಗುತ್ತಿದ್ದಾರೆ. ನಾಲ್ಕು ತಲೆ ಮಾರುಗಳಿಂದ ಗಣೇಶನ ವಿಗ್ರಹ ಜೊತೆ, ಗೌರಿ ಹುಣ್ಣಿಮೆಗೆ ಗೌರಿ ಮೂರ್ತಿ, ಕಾಮಣ್ಣನ, ಕೃಷ್ಣ ಜಯಂತಿಗೆ ಕೃಷ್ಣ ಮೂರ್ತಿಗಳನ್ನು ಮಾಡುತ್ತ ಬಂದಿರುವ ಈ ಕುಟುಂಬ ವರ್ಷ ಪೂರ್ತಿ ಮೂರ್ತಿ ತಯಾರಿಕೆಯಲ್ಲಿ ತಮ್ಮ ಜೀವನ ಕಳೆಯುತ್ತಿರುವುದು ವಿಶೇಷತೆಯಾಗಿದೆ.

-ಕಿರಣ ಶ್ರೀಶೈಲ ಆಳಗಿ 
Advertisement

Udayavani is now on Telegram. Click here to join our channel and stay updated with the latest news.

Next