Advertisement

Rabkavi Banhatti 25 ಕೆಜಿ ಬೆಳ್ಳಿ ಅಂಬಾರಿ ಗೌರಿಮನಿ ಕುಟುಂಬದ ಕಲೆಗೆ ಸಾಕ್ಷಿ

06:16 PM Dec 09, 2023 | Team Udayavani |

ರಬಕವಿ ಬನಹಟ್ಟಿ; ಬಾಗಲಕೋಟೆ ಜಿಲ್ಲೆಯ ನೂತರ ರಬಕವಿ ಬನಹಟ್ಟಿ ತಾಲೂಕಿನ ಹನಗಂಡಿ ಗ್ರಾಮ ರಾಜ್ಯದಲ್ಲಿಯೇ ಕಂಚಿನ ಹಾಗೂ ಪಂಚಲೋಹದ ಪ್ರತಿಮೆಗಳನ್ನು ತಯಾರಿಸಲು ಹೆಸರು ಮಾಡಿದ ಗ್ರಾಮ. ಅಲ್ಲಿನ ಶ್ರೀಧರ ಗೌರಿಮನಿಯವರು 25 ಕೆಜಿ ಬೆಳ್ಳಿಯ ಅಂಬಾರಿಯನ್ನು ತಯಾರಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

Advertisement

ಅವರು ತ್ರಿವೇಂದ್ರ ಮಿಲಟರಿ ಕ್ಯಾಂಪನಲ್ಲಿ ಇಡಲು ಈ ಬೆಳ್ಳಿ ಅಂಬಾರಿಯನ್ನು ತಯಾರಿಸಿದ್ದು, ಅಂಬಾರಿ ನೋಡುಗರ ಸೆಳೆಯುತ್ತಿದೆ. ಇದು ತ್ರಿವೇಂದ್ರ ಮಿಲಿಟರಿ ಕ್ಯಾಂಪನಲ್ಲಿ ಭವಾನಿ ದೇವಯ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡಲು ಇದನ್ನು ಮಾಡಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ. ಇದು ಒಟ್ಟು ಮೊತ್ತ 25 ರಿಂದ 30 ಲಕ್ಷದವರೆಗೆ ಆಗಿದೆ ಎನ್ನುತ್ತಾರೆ ಶ್ರೀಧರ ಗೌರಿಮನಿ.

ಆರ್ಮಿ ಕ್ಯಾಂಪಸ್‌ನಲ್ಲಿ ಇದನ್ನು ಇಟ್ಟು ತಾವು ಹೋಗುವ ಕೆಲಸಕ್ಕೂ ಮುಂಚೆ ಅಲ್ಲಿ ಭವಾನಿ ಮಾತೆಯನ್ನು ಪೂಜೆ ಮಾಡಿ ಹೋಗುವ ಸಲುವಾಗಿ ಇದನ್ನು ನಿಮಾಣ ಮಾಡಿದ್ದಾರೆ ಎನ್ನುತ್ತಾರೆ ಶ್ರೀಧರ ಗೌರಿಮನಿ ಮನೆತನ 4ನೇ ತಲೆಮಾರಿನಿಂದಲೂ ಈ ಕಂಚಗಾರ ಕೆಲಸ ಮಾಡುತ್ತಾ ಬಂದಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿಯೂ ಇವರು ದೇಶದ ಅನೇಕ ರಾಜ್ಯಗಳಿಗೆ ಕಂಚಿನ ಅಂದರೆ ಪಂಚಲೋಹದ ಪ್ರತಿಮೆಗಳನ್ನು ಮಾಡಿ ಕೊಡುವುದರಲ್ಲಿ ಅಪಾರ ಸೇವೆ ಮಾಡುತ್ತಾ ಬಂದಿದ್ದಾರೆ. ಅದರಲ್ಲೂ ಹನಗಂಡಿ ಗ್ರಾಮದಲ್ಲಿ ಅನೇಕ ಕುಟುಂಬಗಳು ಈ ಕಂಚಗಾರಿಕೆಯಲ್ಲಿ ತೊಡಗಿದ್ದಾರೆ. ಗೌರಿಮನಿ ಮನೆತನದವರು ಮುಂಚೋಣಿಯಲ್ಲಿದ್ದಾರೆ. ಇವರು ತಮಿಳುನಾಡು, ಆಂದ್ರಪ್ರದೇಶ ಈಗಿನ ತೆಲಂಗಾಣ, ಮಹಾರಾಷ್ಟ್ರ, ಕೇರಳ, ಗೋವಾ ಸೇರಿದಂತೆ ಅನೇಕ ರಾಜ್ಯಗಳ ಹೆಸರಾಂತ ವ್ಯಕ್ತಿಗಳ ಹಾಗೂ ದೇಶಪ್ರೇಮದ ವ್ಯಕ್ತಿಗಳ ಪ್ರತಿಮೆಗಳನ್ನು ಮಾಡಿ ಕೊಟ್ಟಿದ್ದಾರೆ.

ಅದರಲ್ಲೂ ರಾಜ್ಯದಲ್ಲಿ ಸಂಗೋಳ್ಳಿ ರಾಯಣ್ಣ, ವಿವೇಕಾನಂದರು, ವೀರರಾಣೀ ಚನ್ನಮ್ಮ, ಬಸವೇಶ್ವರರು, ಗಾಂಧೀಜಿ, ಬೋಷರು ಅಲ್ಲದೆ ದೇಶದ ಗಡಿ ಪ್ರದೇಶದಲ್ಲಿ ಸೇವೆಸಲ್ಲಿಸುವ ಸಂದರ್ಭದಲ್ಲಿ ವೀರಮರಣವನ್ನಪ್ಪಿದ ವೀರಯೋಧರ ಪ್ರತಿಮೆಗಳನ್ನು ಸಹ ಮಾಡಿಕೊಟ್ಟಿದ್ದೇವೆ ಎನ್ನುತ್ತಾರೆ ಕಲೆಗಾರ ಕಂಚಗಾರ ಶ್ರೀಧರ ಗೌರಿಮನಿ.

ವಿಜಯಪುರ ಜೋರಾಪುರ ಪೇಠದಲ್ಲಿ ಪ್ರತಿಷ್ಠಾಪಿಸಲು ಸಜ್ಜಾದ 5.5 ಅಡಿಯ ಅತೀ ಎತ್ತರದ ಕಂಚಿನ ದೇವಿ (ಚಾಮುಂಡೇಶ್ವರಿ) ಪ್ರತಿಮೆ ಸಂಪೂರ್ಣ ಶುದ್ಧ ಪಂಚಲೋಹದಲ್ಲಿ ತಯಾರಿಸಲಾಗಿದೆ. ಈ ತಯಾರಿಸಲು ಅಂದಾಜು ಒಂದು ವರ್ಷ ಅವಧಿ ತೆಗೆದುಕೊಂಡಿದೆ. ಯಾಕೆಂದರೆ ಬಹಳ ವೈಜ್ಞಾನಿಕ ತಳಹದಿಯಲ್ಲಿ ಲೋಹವನ್ನು ಕರಗಿಸಿ ಆರೋಗ್ಯದ ಹಿತದೃಷ್ಠಿಯಿಂದ ಬಹಳ ಭಕ್ತಿ ಹಾಗೂ ಅರ್ಪಣಾಮನೋಭಾವದಿಂದ ತಯಾರಿಸಬೇಕಾಗುತ್ತದೆ. ಮೂರ್ತಿ ತಯಾರಿಸುವಾಗ ಅನೇಕ ಭಕ್ತಿಗೀತೆಗಳು ಹಾಗೂ ದೇವಿ ಮಂತ್ರಗಳನ್ನು ಪಠಿಸುತ್ತಾ, ಅದಕ್ಕೊಂದು ಜೀವ ಕಳೆ ತುಂಬುತ್ತೇವೆ. ಮಂತ್ರಗಳಿಲ್ಲದೇ ಮಾಡಿದ ಪ್ರತಿಮೆಯಲ್ಲಿ ಶಕ್ತಿ ಇರಲಾರದು ಎಂದು ನಮ್ಮ ಪೂರ್ವಜರು ಹೇಳುತ್ತಿದ್ದರು. ಭಾರತೀಯ ಸಂಪ್ರದಯಾದಲ್ಲಿ ಇದೇದಲ್ಲ ಸಾಧ್ಯವಿದೆ ಎಂಬ ಅಪಾರ ನಂಬಿಕೆಯಿಅದ ನಾವು ಕೂಡಾ ಅದೇ ಪದ್ದತ್ತಿಯನ್ನು ಅನುಸರಿಕೊಂಡು ಹೋಗುತ್ತಿದ್ದೇವೆ. ಈ ಪ್ರತಿಮೆ 180 ಕೆ.ಜಿ ತೂಕ ಹೊಂದಿದೆ. ಅದರಲ್ಲೂ ಈ ಪ್ರತಿಮೆ ಮಾಡುವಾಗ ನಮಗೆ ತುಂಬಾ ಸಂತೋಷವನ್ನೂ ನೀಡಿದೆ. ಯಾಕೆಂದರೆ ಪ್ರತಿಮೆ ಪ್ರತಿಷ್ಠಾಪಿಸಿದ ಬಳಿಕ, ಸಾವಿರಾರು ಭಕ್ತರು ಅದರ ಮುಂದೆ ನಿಂತಿ ತಮ್ಮ ತಮ್ಮ ಅನಿಸಿಕೆ ಬೇಡಿಕೆಗಳನ್ನು ಬೇಡುವುದು ವಾಡಿಕೆ, ಅದರಂತೆ ನಾವು ಕೂಡಾ ಅಷ್ಟೆ ಪ್ರಾಮಾಣಿಕತೆಯಿಂದ ಭಕ್ತಿ ಶ್ರದ್ದೇಯಿಂದ ಮಾಡಿರುತ್ತೇವೆ ಎನ್ನುತ್ತಾರೆ ಶ್ರೀಧರ ಗೌರಿಮನಿ.

Advertisement

ಒಬ್ಬ ತಾಯಿ, ಮಗ ಬೇಗ ಶಕ್ತಿ, ಬುದ್ದಿ ತುಂಬಿಕೊಂಡು ದೊಡ್ಡವನಾಗಿ ಸಮಾಜದಲ್ಲಿ ಹೆಸರು ಮಾಡಲಿ ಎಂದು ಪ್ರತಿದಿನ ತಾನು ಮಾಡುವ ರೊಟ್ಟಿಯಲ್ಲಿ ಪ್ರೀತಿ ತುಂಬಿ ಮಾಡುತ್ತಿರುತ್ತಾಳೆ. ಅದೇ ಆ ತಾಯಿಯ ಭಾವನೆಗಳು ರೊಟ್ಟಿಯ ಮೂಲಕ ಆ ಮಗನ ಹೊಟ್ಟೆ ಸೇರುತ್ತದೆ ಎಂಬ ಅಪಾರ ನಂಬಿಕೆಯಿಂದ ಈ ಪ್ರತಿಮೆಗಳನ್ನು ಮಾಡುವುದರಲ್ಲಿ ನಿರತರಾಗಿರುತ್ತೇವೆ ಎನ್ನುತ್ತಾರೆ ಈ ಕಲೆಗಾರ.

ಇವರು ಬಸವಣ್ಣ ದೇವರು. ಕಾಳಿಕಾದೇವಿ, ಬೃಹತ್ ಕಂಚಿನ ಗಂಟೆಗಳು, ಕಂಚಿನ ಆಮೆ, ದೇವಸ್ಥಾನಗಳ ಮೇಲಿನ ಬೃಹತ್ ಕೆಲಸಗಳು ಸೇರಿದಂತೆ ಅನೇಕ ಮಾದರಿಯ ಮತ್ತು ಭಕ್ತರು ಹೇಳಿದಂತೆ ಪ್ರತಿಮೆಗಳನ್ನು ಮಾಡಿಕೊಡುತ್ತಾರೆ. ನಮ್ಮ ಭಾರತೀಯ ಸಂಪ್ರದಾಯವನ್ನು ಎತ್ತಿಹಿಡಿಯುವ ಕಾಯಕದಲ್ಲಿ ನಿರತರಾದ ಗೌರಿಮನಿಯವರ ಕಾರ್ಯ ನಿಜಕ್ಕೂ ಮೆಚ್ಚುವಂತಹದು.

-ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next