Advertisement

ರಬಕವಿ-ಬನಹಟ್ಟಿ: ಶಾಲೆ ಪಕ್ಕದಲ್ಲಿಯೇ ಶೌಚಗೃಹ, ಕಸದ ರಾಶಿ!

09:15 PM Aug 02, 2023 | Team Udayavani |

ರಬಕವಿ-ಬನಹಟ್ಟಿ : ಶಾಲಾ ಆವರಣದ ಬಳಿಯೇ ಶಾಲೆ ಅವಧಿಯಲ್ಲಿಯಲ್ಲಿಯೇ ಶೌಚಾಲಯ ಹಾಗು ತರಕಾರಿ ತ್ಯಾಜ್ಯದ ಕಸ ತಂದು ರಾಶಿ ರಾಶಿ ಸುರಿಯುವದು ತಪ್ಪಿಲ್ಲ. ವಿದ್ಯಾರ್ಥಿಗಳು ಈ ತ್ಯಾಜ್ಯವನ್ನೇ ತುಳಿದುಕೊಂಡು ಜ್ಞಾನ ದೇಗುಲಕ್ಕೆ ಪ್ರವೇಶ ಪಡೆಯುವದಷ್ಟೇ ಅಲ್ಲ ನಿತ್ಯ ಕಿಟಕಿಗಳನ್ನು ಬಂದ್ ಮಾಡಿಕೊಂಡೇ ಪಾಠ ಕಲಿಯಬೇಕಾದ ಅನಿವಾರ್ಯತೆ ಎದುರಾಗಿದೆ.

Advertisement

ಬನಹಟ್ಟಿಯ ಗಾಂಧಿ ವೃತ್ತದ ಬಳಿಯಿರುವ ಸರ್ಕಾರಿ ಶಾಲೆಯ ಆವರಣದಲ್ಲಿ ಇಂತಹ ಪ್ರಸಂಗ ನಿತ್ಯ ಜರುಗುತ್ತಿದ್ದು, ಇದನ್ನು ತಪ್ಪಿಸಲು ಕ್ರಮ ವಹಿಸದ ನಗರಸಭೆ ವಿರುದ್ಧ ವಿದ್ಯಾರ್ಥಿಗಳ ಪೋಷಕರು, ಸ್ಥಳೀಯರು ಹಿಡಿಶಾಪ ಹಾಕುವಂತಾಗಿದೆ. ಅಲ್ಲದೇ ನಗರಸಭೆ ನಡೆಸುತ್ತಿರುವ ಸ್ವಚ್ಛ ಸರ್ವೇಕ್ಷಣಾ ಅಭಿಯಾನ, ಸ್ವಚ್ಛತಾ ಆಂದೋಲನಕ್ಕೆ ಇಲ್ಲಿನ ಮಕ್ಕಳನ್ನೇ ಜಾಗೃತಿ ಅಭಿಯಾನ ನಡೆಸುತ್ತಿದ್ದರೂ ಇದೇ ಸ್ಥಳಕ್ಕೆ ಕಪ್ಪು ಚುಕ್ಕೆಯಾದಂತಾಗಿದೆ.

ಬನಹಟ್ಟಿಯ ಎರಡೂ ಬದಿಯಲ್ಲಿ ಸಂಜೆ ವೇಳೆ ತಲೆ ಎತ್ತುವ ಬೀದಿ ಬದಿ ವ್ಯಾಪಾರಸ್ಥರು ಹಾಗು ಮಾರುಕಟ್ಟೆ ತರಕಾರಿಯವರು ತ್ಯಾಜ್ಯವನ್ನು ಮೂಟೆಗಳಲ್ಲಿ ತುಂಬಿಕೊಂಡು ಶಾಲಾ ಗೋಡೆ ಬದಿಗೆ ತಂದು ಸುರಿಯುತ್ತಿರುವದರಿಂದ ರಾಶಿ-ರಾಶಿ ಕಸ ಬಿದ್ದು ಸ್ಥಳೀಯ ನಿವಾಸಿಗಳು, ವಿದ್ಯಾರ್ಥಿಗಳಿಗೆ ತೊಂದರೆಯುಂಟಾಗಿದೆ.

ಈ ಮೂಟೆಗಳನ್ನು ಬೀದಿ ನಾಯಿಗಳು, ಹಂದಿಗಳು, ಬಿಡಾಡಿ ದನಗಳು ಬಂದು ಕೆದಕಿ ಮತ್ತಷ್ಟು ರಸ್ತೆ ಪೂರ್ತಿ ಹರಡುತ್ತಿದ್ದು, ನಗರಸಭೆ ಎತ್ತೊಯ್ಯದ ಪರಿಣಾಮ ಅಲ್ಲಿಯೇ ಕೊಳತು ದುರ್ನಾತ ಬೀರುತ್ತಿರುವದಲ್ಲದೇ ಅನಾರೋಗ್ಯಕ್ಕೆ ಎಡೆಮಾಡಿಕೊಡುತ್ತಿದೆ.

ಶಾಲೆಯೆಂಬುದು ಜ್ಞಾನದೇಗುಲವಿದ್ದಂತೆ, ದೇಶದ ಮುಂದಿನ ಭವಿಷ್ಯ ಅಲ್ಲಿ ರೂಪಿತವಾಗಿರುತ್ತದೆ. ಶಾಲೆ, ಮನೆ, ದೇವಾಲಯ ಬಳಿ ಅಸ್ವಚ್ಛತೆ ಮಾಡುವದು ತರವಲ್ಲ. ಜನರು ಇದನ್ನು ಅರಿತುಕೊಳ್ಳಬೇಕು. ಸಂಬಂಧಪಟ್ಟವರು ಈ ಬಗ್ಗೆ ಕ್ರಮ ವಹಿಸಬೇಕು.
-ಎಸ್.ಎಸ್. ಹೊಂಬರಡೆ, ಸಾರ್ವಜನಿಕರು

Advertisement

ರಸ್ತೆಯಲ್ಲಿ ತರಕಾರಿ ತ್ಯಾಜ್ಯ ಬಿಸಾಡಿದರೆ ನಗರಸಭೆ ದಂಡ ಹಾಕುತ್ತದೆಂದು ಅದಕ್ಕೆ ಹೆದರಿ ರಾತ್ರೋ ರಾತ್ರಿ ಶಾಲೆ ಪಕ್ಕದ ಸ್ಥಳದಲ್ಲಿ ತಂದು ಸುರಿಯುವದು ಅಪರಾಧವೇ. ಈ ಬಗ್ಗೆ ಗಮನಕ್ಕೆ ಬಂದಿಲ್ಲ. ಸಂಬಂಧಪಟ್ಟ ಸ್ಥಳ ಪರಿಶೀಲಿಸಿ ಕಸ ಎತ್ತುವಳಿಗೆ ಕ್ರಮ ವಹಿಸಲಾಗುವದು.
-ಜಗದೀಶ ಈಟಿ, ಪೌರಾಯುಕ್ತರು, ರಬಕವಿ-ಬನಹಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next