ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ನಗರದ ವಿವಿಧ ಕಡೆಗಳಲ್ಲಿ ಪಿಒಪಿ ಗಣೇಶನ ವಿಗ್ರಹಗಳನ್ನು ಮಾರಾಟ ಮಾಡುವ ಸ್ಥಳಗಳಲ್ಲಿ ಕಂದಾಯ, ಪೊಲೀಸ್ ಮತ್ತು ನಗರಸಭೆಯ ಅಧಿಕಾರಿಗಳು ದಾಳಿ ನಡೆಸಿ 60ಕ್ಕೂ ಹೆಚ್ಚು ಪಿಒಪಿ ಗಣೇಶ ವಿಗ್ರಹಗಳನ್ನು ತಮ್ಮ ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ್ ಎಸ್.ಬಿ.ಕಾಂಬಳೆ, ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ, ಎಎಸ್‌ಐ ಎಸ್.ಎಸ್. ಬಾಬಾನಗರ, ನಗರಸಭೆಯ ಅಧಿಕಾರಿಗಳಾದ ಶೋಭಾ ಹೊಸಮನಿ, ರಾಜಕುಮಾರ ಹೊಸೂರ ಇದ್ದರು.
ಮಾರಾಟ ಮಾಡುವವರ ಮೇಲೆ ನಗರಸಭೆಯ ಅಧಿಕಾರಿಗಳು ದಂಡವನ್ನು ವಿಧಿಸಿದರು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಮಳೆಯ ಅಭಾವವಿರುವುದರಿಂದ ನೀರಿನ ಮೂಲಗಳನ್ನು ನಾವೆಲ್ಲರೂ ಸಂರಕ್ಷಣೆ ಮಾಡಬೇಕಾಗಿದೆ. ಪಿಒಪಿ ಗಣೇಶ ವಿಗ್ರಹಗಳು ನೀರಿನಲ್ಲಿ ಬೇಗನೆ ಕರಗದೆ ಇರುವುದರಿಂದ ನೀರಿನ ಮೂಲಕ್ಕೆ ತೊಂದರೆಯಾಗಲಿದೆ ಎಂದು ರಬಕವಿ ಬನಹಟ್ಟಿ ತಾಲ್ಲೂಕು ಪ್ರಭಾರ ತಹಶೀಲ್ದಾರ್ ಸದಾಶಿವ ಮಕ್ಕೋಜಿ ತಿಳಿಸಿದರು.
ಪಿಒಪಿ ಗಣೇಶ ವಿಗ್ರಹಗಳು ಮತ್ತು ಅವುಗಳಿಗೆ ಬಳಸಿದ ರಾಸಾಯನಿಕ ಮಿಶ್ರಿತ ಬಣ್ಣಗಳಿಂದ ನೀರು ಕಲುಷಿತಗೊಳ್ಳುತ್ತದೆ. ಆದ್ದರಿಂದ ಬಾವಿ, ಕೆರೆ ಮತ್ತು ನದಿಯ ನೀರು ಕಲುಷಿತವಾಗದಂತೆ ನಾವೆಲ್ಲರೂ ಗಮನ ನೀಡಬೇಕಾಗಿದೆ.
ಆದ್ದರಿಂದ ಸಾರ್ವಜನಿಕರು ಮಣ್ಣಿನ ಗಣೇಶ ಮತ್ತು ನೈಸರ್ಗಿಕ ಬಣ್ಣಗಳಿಂದ ತಯಾರು ಮಾಡಿದ ಗಣೇಶ ವಿಗ್ರಹಗಳನ್ನು ಪೂಜಿಸಿ ವಿಸರ್ಜನೆ ಮಾಡಬೇಕು ಎಂದು ರಬಕವಿ ಬನಹಟ್ಟಿ ತಾಲ್ಲೂಕು ಪ್ರಭಾರ ತಹಶೀಲ್ದಾರ್ ಸದಾಶಿವ ಮಕ್ಕೋಜಿ ತಿಳಿಸಿದರು.