Advertisement

ಶ್ವಾನಗಳಿಗೆ ರೇಬಿಸ್‌ ಲಸಿಕೆ ಬಾಕಿ!

12:17 AM Feb 18, 2020 | Lakshmi GovindaRaj |

ಬೆಂಗಳೂರು: ವಿಶ್ವದಾದ್ಯಂತ ಚೀನಾದ ಕೊರೊನಾ ವೈರಸ್‌ ಸದ್ದು ಮಾಡುತ್ತಿದೆ. ಇದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಅಷ್ಟೇ ಅಪಾಯಕಾರಿ ರೇಬಿಸ್‌ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗುತ್ತಿಲ್ಲ. ಹೀಗಾಗಿ, ಪ್ರತಿ ವರ್ಷ ನಗರದಲ್ಲಿ ರೇಬಿಸ್‌ನಿಂದ 15 ಜನ ಸಾವನ್ನಪ್ಪುತ್ತಿದ್ದಾರೆ! ಜನವರಿಯಿಂದ ಈವರೆಗೆ ರಾಜ್ಯದಲ್ಲಿ ಒಟ್ಟು ಐದು ಮಂದಿ ರೇಬಿಸ್‌ಗೆ ಬಲಿಯಾಗಿದ್ದಾರೆ. ಅದರಲ್ಲಿ ಎರಡು ಪ್ರಕರಣ ಬಿಬಿಎಂಪಿ ವ್ಯಾಪ್ತಿಯಲ್ಲೇ ನಡೆದಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

Advertisement

“ಇದಕ್ಕೆ ಸಾರ್ವಜನಿಕರ ನಿರ್ಲಕ್ಷ್ಯವೂ ಕಾರಣ’ ಎನ್ನುತ್ತಾರೆ ಸಾಂಕ್ರಮಿಕ ರೋಗಗಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅನ್ಸರ್‌ಅಹ್ಮದ್‌. “ನಾಯಿ ಕಚ್ಚಿದರಷ್ಟೇ ಅಲ್ಲ, ಪರಚಿದರೂ ಚುಚ್ಚುಮದ್ದು ತೆಗೆದುಕೊಳ್ಳಬೇಕು. ನಾಯಿಗಳು ತಮ್ಮ ಇಡೀ ದೇಹವನ್ನು ನಾಲಿಗೆಯ ಮೂಲಕ ಶುಚಿಗೊಳಿಸಿಕೊ ಳ್ಳುವುದರಿಂದ ದೇಹದ ಎಲ್ಲ ಭಾಗಗಳಲ್ಲೂ ಸೋಂಕಿನ ಅಂಶವಿರುತ್ತದೆ. ಹೀಗಾಗಿ, ನಿರ್ಲಕ್ಷ್ಯ ಮಾಡುವುದು ಅಪಾಯಕಾರಿ’ ಎಂದು ಎಚ್ಚರಿಸಿದರು.

ಪ್ರತಿ ವರ್ಷ ನಾಯಿಗಳಿಗೆ ರೇಬಿಸ್‌ ರೋಗ ನಿರೋಧಕ (ಆ್ಯಂಟಿ ರೇಬಿಸ್‌ ವ್ಯಾಕ್ಸಿನ್‌-ಎಆರ್‌ವಿ) ಚುಚ್ಚುಮದ್ದು ನೀಡಬೇಕು. ನಗರದಲ್ಲಿ ಒಟ್ಟು 3,09,972 ನಾಯಿಗಳಿದ್ದು, ಪಾಲಿಕೆ 2019ರ ಡಿಸೆಂಬರ್‌ ಅಂತ್ಯದ ವೇಳೆಗೆ 57,736 ನಾಯಿಗಳಿಗೆ ಮಾತ್ರ ಎಆರ್‌ವಿ ನೀಡಿದೆ! ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ (ಎಬಿಸಿ- ಅನಿಮಲ್‌ ಬರ್ಥ್ ಕಂಟ್ರೋಲ್‌) ಮಾಡುವ ಸಂದರ್ಭದಲ್ಲೇ ರೇಬಿಸ್‌ ರೋಗ ನಿರೋಧಕ ಚುಚ್ಚುಮದ್ದನ್ನು ಪಾಲಿಕೆ ನೀಡುತ್ತಿದೆ.

ಕಳೆದ ವರ್ಷ ಎಬಿಸಿ ಸಮಯದಲ್ಲಿ 28,872 ನಾಯಿಗಳಿಗೆ, ವಿವಿಧ ಸ್ವಯಂ ಸೇವಾ ಸಂಸ್ಥೆಯಿಂದ 309 ಹಾಗೂ ನಾಯಿಗಳ ಎಬಿಸಿ ಮಾಡುವವರು ಈ ವರ್ಷ 28,864 ನಾಯಿಗಳಿಗೆ ಎಆರ್‌ವಿ ನೀಡಿದ್ದಾರೆ. ಇದರ ಹೊರತಾಗಿ ಅಂದಾಜು 2.50 ಲಕ್ಷ ನಾಯಿಗಳಿಗೆ ಎಆರ್‌ವಿ ನೀಡುವುದು ಬಾಕಿ ಇದೆ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಅಂಕಿ- ಅಂಶಗಳು ಆತಂಕಕ್ಕೆ ಕಾರಣವಾಗಿದೆ.

ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾ ಗಿದ್ದು, ಬಿಬಿಎಂಪಿ ಅಧಿಕಾರಿಗಳು ಹೇಳುವಂತೆ “ನಿರ್ದಿಷ್ಟವಾಗಿ ಇಷ್ಟೇ ನಾಯಿಗಳಿಗೆ ರೇಬಿಸ್‌ ರೋಗ ನಿರೋಧಕ ಚುಚ್ಚುಮದ್ದು ನೀಡಲಾಗಿದೆ ಎಂದು ಹೇಳಲು ಆಗುವುದಿಲ್ಲ. ಚುಚ್ಚುಮದ್ದು ನೀಡಿದ ಮೇಲೆ ನಿರ್ದಿಷ್ಟ ಗುರುತು ಹಾಕುವ ಪ್ರಕ್ರಿಯೆ ಜಾರಿಯಲ್ಲಿಲ್ಲ. ಚುಚ್ಚುಮದ್ದು ಹಾಕಿದ ನಾಯಿಗಳಿಗೆ ಕೆಂಪು, ಹಳದಿ ರೀತಿಯ ಯಾವುದಾದರು ಒಂದು ಬಣ್ಣ ಬಳಿಯಲಾಗುತ್ತದೆ.

Advertisement

ಇದು ಹೆಚ್ಚೆಂದರೆ ಎರಡು ವಾರಗಳ ಕಾಲ ಉಳಿಯಬಹುದು. ಈ ಹಿಂದೆ ನಾಯಿಗಳಿಗೆ ಚಿಪ್‌ ಅಳವಡಿಸುವ ಪ್ರಸ್ತಾವನೆ ಇತ್ತಾದರೂ, ದುಬಾರಿ ಎಂಬ ಕಾರಣಕ್ಕೆ ಆ ಪ್ರಸ್ತಾವನೆ ಕೈಬಿಡಲಾಗಿದೆ’ ಎಂದರು. ಇನ್ನು ಬೊಮ್ಮನಹಳ್ಳಿ ಹಾಗೂ ಪೂರ್ವ ವಲಯದಲ್ಲಿ ಎಬಿಸಿ ಮಾಡಲು ಯಾವುದೇ ಗುತ್ತಿಗೆದಾರರು ಮುಂದೆ ಬಂದಿಲ್ಲ. ಹೀಗಾಗಿ, ಈ ವಲಯಗಳಲ್ಲಿ ಎಬಿಸಿ ಹಾಗೂ ಎಆರ್‌ವಿಗೆ ಹಿನ್ನಡೆ ಆಗಿದೆ. ಈ ಲೋಪ ತಡೆಯಲು ಪಾಲಿಕೆ ಯಾವುದೇ ಕ್ರಮ ಕೈಗೊಂಡಿಲ್ಲ.

ರೇಬಿಸ್‌ ಮತ್ತು ಎಚ್ಚರಿಕೆ ಕ್ರಮಗಳು
ರೇಬಿಸ್‌ನ ಲಕ್ಷಣ: ಹೆಚ್ಚು ಜೊಲ್ಲು ಸುರಿಸುವುದು, ಗಾಳಿ-ನೀರಿಗೆ ಭಯ ಪಡುವುದು.

ಏನು ಮಾಡಬೇಕು: ನಾಯಿ ಕಚ್ಚಿದ ಭಾಗವನ್ನು ಸೋಪಿನಿಂದ ಸ್ವತ್ಛವಾಗಿ ತೊಳೆದುಕೊಳ್ಳಬೇಕು. ರೇಬಿಸ್‌ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು. ಮನೆಯ ಸಾಕು ನಾಯಿಗೂ ಕಡ್ಡಾಯವಾಗಿ ರೇಬಿಸ್‌ ರೋಗ ನಿರೋಧಕ ಚುಚ್ಚುಮದ್ದು ಹಾಕಿಸುವುದು.

ರೋಗ ಖಚಿತವಾದರೆ ನಗರದ ಸಾಂಕ್ರಮಿಕ ರೋಗಗಳ ಆಸ್ಪತ್ರೆ ಅಥವಾ ನಿರ್ದಿಷ್ಟ ಆಸ್ಪತ್ರೆಯಲ್ಲಿ ಮಾತ್ರ ರೋಗಿಯನ್ನು ಚಿಕಿತ್ಸೆಗೆ ದಾಖಲು ಮಾಡಬೇಕು. ಉಳಿದ ಆಸ್ಪತ್ರೆಗಳಲ್ಲಿ ದಾಖಲು ಮಾಡಿದರೆ ಬೇರೆಯವರಿಗೂ ಸೋಂಕು ಹರಡಲಿದೆ.

ನಾಯಿಗಳಿಗೆ ರೇಬಿಸ್‌ ರೋಗ ನಿರೋಧಕ ಚುಚ್ಚುಮದ್ದು ಹಾಕುವುದು ನಿರಂತರ ಪ್ರಕ್ರಿಯೆಯಾ ಗಿದೆ. ಆದ್ಯತೆಯ ಮೇಲೆ ಚುಚ್ಚುಮದ್ದು ನೀಡಲು ಕ್ರಮ ಕೈಗೊಳ್ಳುತ್ತೇವೆ.
-ಬಿ.ಎಚ್‌.ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತ

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next