ಮೀನುಗಳ ರಾಜ ಒಮ್ಮೆ ಭೀಕರ ಕಾಯಿಲೆಗೆ ತುತ್ತಾಗಿತ್ತು. ಯಾವ ಕಾಯಿಲೆ ಯಾರಿಗೂ ತಿಳಿಯಲಿಲ್ಲ. ಮೀನುಗಳು ತಮ್ಮ ರಾಜನ ಕಾಯಿಲೆ ಗುಣಪಡಿಸಲು ಸಮುದ್ರದಲ್ಲಿರುವ ಎಲ್ಲಾ ವೈದ್ಯರನ್ನು ಕರೆಸಿ ತೋರಿಸಿದವು. ವೈದ್ಯರಿಗೂ ಕಾಯಿಲೆ ಯಾವುದೆಂದು ತಿಳಿಯಲೇ ಇಲ್ಲ. ಚಿಂತಾಕ್ರಾಂತ ಮೀನುಗಳ ಮಾತನ್ನು ಆಮೆ ಮರೆಯಲ್ಲಿ ಕೇಳಿಸಿಕೊಂಡಿತು. ಒಡನೆಯೇ ಆ ಕಾಯಿಲೆ ಗುಣ ಪಡಿಸುವ ರಹಸ್ಯ ತನಗೆ ಗೊತ್ತಿದೆಯೆಂದು ಹೇಳಿತು. ಮೀನುಗಳ ಸಂತಸಕ್ಕೆ ಪಾರವೇ ಇರಲಿಲ್ಲ. ಪರಿಹಾರ ಏನೆಂದು ಒಕ್ಕೊರಳಿನಿಂದ ಕೇಳಿದಾಗ ಆಮೆ “ಜೀವಂತ ಮೊಲದ ಕಣ್ಣನ್ನು ನುಂಗಿದರೆ ನಿಮ್ಮ ರಾಜನ ಕಾಯಿಲೆ ಗುಣವಾಗುತ್ತೆ’ ಅಂದಿತು.
ನಿಜ ಏನೆಂದರೆ ಆಮೆಗೆ ಯಾವುದೇ ವೈದ್ಯ ವಿದ್ಯೆ ಗೊತ್ತಿರಲಿಲ್ಲ. ಸುಮ್ಮನೆ ಇಷ್ಟು ದಿನ ತನ್ನನ್ನು ಆಲಕ್ಷಿಸುತ್ತಿದ್ದ ಮೀನುಗಳ ಮುಂದೆ ತಾನು ಬುದ್ಧಿವಂತ ಎನ್ನಿಸಿಕೊಳ್ಳಲು ಆ ಸುಳ್ಳನ್ನು ಹೇಳಿತ್ತು. ವಿಷಯ ರಾಜನನ್ನು ತಲುಪಿ ರಾಜ ಆ ಪರಿಹಾರವನ್ನು ನಿಜವೆಂದು ನಂಬಿ ಆಮೆಯನ್ನು ಕರೆತರಲು ಸೇವಕರಿಗೆ ಆಜ್ಞಾಪಿಸಿದ. ಈಗ ಆಮೆಗೆ ಭಯ ಶುರುವಾಯಿತು. ಅದಕ್ಕೇ ತಪ್ಪಿಸಿಕೊಳ್ಳುವ ನಾಟಕವಾಡಿತಾದರೂ ಮುಂದೊಂದು ದಿನ ಮೀನು ರಾಜನ ಆಸ್ಥಾನಕ್ಕೆ ಹೋಗಲೇಬೇಕಾಯಿತು.
ಆಮೆಯನ್ನು ಬರಮಾಡಿಕೊಂಡ ರಾಜ ಅದರಾತಿಥ್ಯದಿಂದ ಅದನ್ನು ಸಂತೃಪ್ತಪಡಿಸಿದ. ನಂತರ ಮೊಲವೊಂದನ್ನು ಹಿಡಿದು ತಂದು ತನ್ನ ಕಾಯಿಲೆಯನ್ನು ನೀನೇ ಗುಣಪಡಿಸಬೇಕೆಂದು ಕೇಳಿಕೊಂಡ. ಆಮೆ ಹೇಳಿದ ಸುಳ್ಳು ಅದನ್ನೇ ಸುತ್ತಿಕೊಂಡಿತ್ತು. ಇಷ್ಟೆಲ್ಲಾ ಆದಮೇಲೆ ತಾನು ಸುಳ್ಳು ಹೇಳಿದ ವಿಚಾರ ತಿಳಿದರೆ ಜೀವಸಹಿತ ಬಿಡುವುದಿಲ್ಲವೆಂದು ಆಮೆಗೆ ಖಚಿತವಾಗಿತ್ತು. ಕಾಯಿಲೆ ಗುಣವಾಗುತ್ತದೋ, ಬಿಡುತ್ತದೋ, ಒಟ್ಟಿನಲ್ಲಿ ನಿಜಕ್ಕೂ ಆಮೆ ಒಂದು ಮೊಲವನ್ನು ಹಿಡಿದು ತರಲೇ ಬೇಕಿತ್ತು. ಅದಕ್ಕಾಗಿ ಸಮುದ್ರ ದಡದ ಬಳಿಯೇ ಒಂದು ವನವಿತ್ತು. ಅಲ್ಲಿ ವಾಸವಿದ್ದ ಮೊಲದ ಜೊತೆ ಆಮೆ ಗೆಳೆತನ ಬೆಳೆಸಲು ಮುಂದಾಯಿತು.
ಸಮುದ್ರದ ಮಧ್ಯದಲ್ಲಿ ಒಂದು ಪುಟ್ಟ ದ್ವೀಪ ಇದೆಯೆಂದೂ, ಅಲ್ಲಿನ ಕಾಡಿನಲ್ಲಿ ಆಹಾರ ಯಥೇಚ್ಚವಾಗಿ ಸಿಗುವುದೆಂದು ಹೇಳಿ ಮೊಲವನ್ನು ಪುಸಲಾಯಿಸಿತು. ಮೊಲ ಮೊದ ಮೊದಲು ಆಮೆ ಜೊತೆ ಬರಲು ಒಪ್ಪಲಿಲ್ಲ. ಆದರೆ ಆಮೆ ತನ್ನ ಬೆನ್ನ ಮೇಲೆ ಸುರಕ್ಷಿತವಾಗಿ ಕರೆದೊಯ್ಯುವೆನೆಂದು ಹೇಳಿದಾಗ ಬರಲು ಒಪ್ಪಿತು. ದ್ವೀಪಕ್ಕೆ ಕರೆದೊಯ್ಯುತ್ತೇನೆಂದು ಹೇಳಿ ಮೀನುರಾಜನ ಬಳಿಗೆ ಕರೆದುಕೊಂಡು ಹೋದಾಗ ಮೊಲಕ್ಕೆ ಇಲ್ಲೇನೋ ಷಡ್ಯಂತ್ರ ಇರುವುದು ಗಮನಕ್ಕೆ ಬಂದಿತ್ತು. ಮೀನುಗಳಾಡುತ್ತಿದ್ದ ಪಿಸುಮಾತು ಕೇಳಿ ಮೊಲಕ್ಕೆ ಪೂರ್ತಿ ವಿಷಯ ತಿಳಿಯಿತು. ತಪ್ಪಿಸಿಕೊಳ್ಳಲು ಒಂದು ಉಪಾಯವನ್ನೂ ಹೂಡಿತು.
ಆಮೆ, ಮೊಲವನ್ನು ರಾಜನಿಗೆ ಪರಿಚಯಿಸಿಕೊಡುವಾಗ ಮೊಲ ಕುರುಡನಂತೆ ನಾಟಕವಾಡಿತು. ಮೀನು ರಾಜ “ಯಾಕೆ? ಏನಾಯ್ತು?’ ಎಂದು ಕೇಳಿದಾಗ ಮೊಲಸ ಅಂದಿತು “ನನ್ನ ನಿಜವಾದ ಕಣ್ಣುಗಳನ್ನು ಕಾಡಿನಲ್ಲಿಯೇ ಬಿಟ್ಟುಬಂದಿದ್ದೇನೆ. ಈಗ ಧರಿಸಿರುವುದು ಗಾಜಿನ ನಕಲಿ ಕಣ್ಣುಗಳು’. ಈಗ ಆಮೆಗೆ ಪೀಕಲಾಟಕ್ಕಿಟ್ಟುಕೊಂಡಿತು. ಮೀನುಗಳೆಲ್ಲ ಹತಾಶರಾಗಿ ಆಮೆಯ ಮೇಲೆ ತಿರುಗಿಬಿದ್ದವು. ಈ ಮೊಲದಿಂದ ಪ್ರಯೋಜನವಿಲ್ಲವೆಂದು ಆಮೆ ಅದನ್ನು ತೀರಕ್ಕೆ ಬಿಟ್ಟುಬಂದಿತು. ತೀರ ತಲುಪುತ್ತಲೇ ಮೊಲ ಬದುಕಿದೆಯಾ ಬಡಜೀವವೇ ಎನ್ನುವಂತೆ ಶರವೇಗದಲ್ಲಿ ಓಡಿ ಕಾಡೊಳಗೆ ಮರೆಯಾಯಿತು. ಅಷ್ಟರಲ್ಲಿ ಆಮೆಗೆ ತಾನು ಮೋಸ ಹೋಗಿದ್ದೇನೆಂದು ಗೊತ್ತಾಗಿತ್ತು!
– ಜಯಪ್ರಕಾಶ್ ಬಿರಾದಾರ್