ರಬಕವಿ-ಬನಹಟ್ಟಿ: ಕೇಂದ್ರ ಸರ್ಕಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಮುಖಂಡ ರಾಹುಲ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯದ ವಿಚಾರಣೆ ಕ್ರಮವನ್ನು ಖಂಡಿಸಿ ರಬಕವಿ ಬನಹಟ್ಟಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಕ್ರಮ ಹಣ ವರ್ಗಾವಣೆಯ ಆರೋಪದಡಿಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಲಯ ನೋಟೀಸ್ ಜಾರಿ ಮಾಡಿದೆ. ಈಗಾಗಲೇ ರಾಹುಲ್ ಗಾಂಧಿ ವಿರುದ್ಧ ವಿಚಾರಣೆಯನ್ನು ಆರಂಭಿಸಿದೆ. ಇವರಿಬ್ಬರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಪ್ರತಿಭಟನೆಯನ್ನು ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತ ಸೂರಜ ಅವಟಿ ತಿಳಿಸಿದರು.
ಈ ಸಂದರ್ಭದಲ್ಲಿ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿಯನ್ನು ತಡೆದು, ನಾನು ರಾಹುಲ ಗಾಂಧಿ ನನ್ನನ್ನು ಬಂಧಿಸಿ ಎಂದು ಘೋಷಣೆ ಕೂಗುತ್ತಿದ್ದಂತೆ ಸಿಪಿಐ ಜೆ.ಕರುಣೇಶಗೌಡ ಮತ್ತು ಪಿಎಸ್‌ಐ ಸುರೇಶ ಮಂಟೂರ ನೇತೃತ್ವದ ಪೊಲೀಸ್ ತಂಡ ಅವರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದ ಘಟನೆ ನಡೆಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ಸಂಜೀವ ಜೋತಾವರ, ರಿಯಾಜ್ ಫಣಿಬಂದ್, ಹಾಫೀಜ್ ಮುಲ್ಲಾ, ಸಾಧಿಕ ಜಕಾತಿ ಸೇರಿದಂತೆ ಅನೇಕರು ಇದ್ದರು.
ಇದನ್ನೂ ಓದಿ : ಚಾಮರಾಜಪೇಟೆ ಮೈದಾನ: ಮುಂದುವರಿದ ಒಡೆತನ ವಿವಾದ