ರಬಕವಿ-ಬನಹಟ್ಟಿ: ಮಗನಿಗೆ ಮೂರು ದಿವಸ ಆತ್ರಿ ಊಟ ಮಾಡಿಲ್ಲ. ಇಟ್ಟುಕೊಂಡಿದ್ದ ಬಿಸ್ಕಿಟ್ ಮತ್ತು ಚಾಕಲೇಟ್ ಕೂಡಾ ಮುಗದಾವ್ರಿ. ಗುರುವಾರ ಸಂಜೆ ಯಾವುದೊ ಒಂದು ತರಕಾರಿ ಸೂಪ್ ಕೊಟ್ಟಾರಿ. ಅಷ್ಟರ ಮ್ಯಾಲ ನಮ್ಮ ಮಗಾ ಅದಾನ್ರಿ ಎಂದು ಉಕ್ರೇನ್ ನಲ್ಲಿರುವ ನಾವಲಗಿಯ ಕಿರಣ ಸವದಿಯವರ ತಾಯಿ ಮಹಾದೇವಿ ಸವದಿ ಪತ್ರಿಕೆಯ ಜೊತೆಗೆ ತಮ್ಮ ಅಳಲನ್ನು ಹಂಚಿಕೊಂಡರು.
ಶುಕ್ರವಾರ ನಾವಲಗಿ ಗ್ರಾಮದ ಕಿರಣ ಸವದಿಯವರ ಮನೆಗೆ ಪತ್ರಕರ್ತರು ಭೇಟಿ ನೀಡಿದ ಸಂದರ್ಭದಲ್ಲಿ ಅವರು ಪತ್ರಕರ್ತರ ಜೊತೆಗೆ ಮಾತನಾಡಿದರು.
ಯುದ್ಧ ಪ್ರಾರಂಭವಾದಾಗಿನಿಂದ ಮಗನದೆ ಚಿಂತೆಯಾಗಿದೆ. ಪ್ರತಿ ಗಂಟೆಗೆ ಒಂದು ಸಲಾ ಫೋನ್ ಮಾಡಿ ಮಾತನಾಡುತ್ತಾನೆ. ಫೋನ್‌ನಲ್ಲಿ ಅವನ ಮುಖಾ ನೋಡಿದ ಕೂಡಲೇ ತಾಯಿ ಕಣ್ಣಲ್ಲಿ ನೀರು ತುಂಬುತ್ತದೆ.
ಇದೇ ಸಂದರ್ಭದಲ್ಲಿ ತಂದೆ ಲಕ್ಷ್ಮಣ ಮಗನ ಜೊತೆ ಮಾತನಾಡುತ್ತ, ತಮ್ಮ ದೇವರ ಧ್ಯಾನ ಮಾಡು, ಅವನ ಮೇಲೆ ಭಾರ ಹಾಕು. ಅವನೆ ಕಾಪಾಡಾತ್ತಾನೆ ಧೈರ್ಯದಿಂದ ಇರು ಎಂದು ಮಗನಿಗೆ ತಿಳಿಸಿದರು.
ಮಧ್ಯರಾತ್ರಿಯವರೆಗೂ ಟಿ.ವಿ. ಮೂಲಕ ಯುದ್ಧದ ಪರಿಸ್ಥಿತಿಯನ್ನು ಮನೆಯವರು ಕುಳಿತುಕೊಂಡು ನೋಡುತ್ತಾರೆ. ದಿನನಿತ್ಯ ಮನೆಗೆ ಭೇಟಿಯಾಗಲು ಬರುವ ಹತ್ತಾರು ಜನರಿಗೆ ಮಗನ ಬಗ್ಗೆ ಹೇಳುತ್ತಾರೆ. ಮನೆಯ ಜನರಿಗೆ ಊಟ ರುಚಿ ಹತ್ತುತ್ತಿಲ್ಲ. ಎಲ್ಲ ಮಕ್ಕಳು ಸುರಕ್ಷೀತವಾಗಿ ಬರಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದು ತಂದೆ ಲಕ್ಷ್ಮಣ ತಿಳಿಸಿದರು.
ಇದನ್ನೂ ಓದಿ : ಪಾವಗಡ : ಪ್ರೋತ್ಸಾಹಧನ ನೀಡಲು ಹಣಕ್ಕೆ ಬೇಡಿಕೆ ಇಟ್ಟ ವ್ಯಕ್ತಿ ಎಸಿಬಿ ಬಲೆಗೆ