ರಬಕವಿ-ಬನಹಟ್ಟಿ: ಒಂದು ಸಮುದಾಯದ ಮತಗಳನ್ನು ಪಡೆಯುವ ನಿಟ್ಟಿನಲ್ಲಿ ನೀಚ ಕಾಂಗ್ರೆಸ್ ಸರ್ಕಾರ ತಲೆ ತಲಾಂತರದಿಂದ ಉಳುಮೆ ಮಾಡುತ್ತಿದ್ದ ರೈತರ ಜಮೀನನ್ನು ವಶಪಡಿಸಿಕೊಂಡು ಅವರ ಬದುಕಿನ ರೊಟ್ಟಿಯನ್ನು ಕಸಿದುಕೊಳ್ಳುತ್ತಿದೆ. ತಾಲೂಕಿನ ಒಂದು ಗುಂಟೆ ಜಾಗೆಯನ್ನು ಬಿಟ್ಟು ಕೊಡುವುದಿಲ್ಲ. ನಾವು ರೈತರ ಬೆಂಬಲವಾಗಿ ನಿಂತುಕೊಳ್ಳುತ್ತೇವೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಅವರು ಅ.29ರ ಮಂಗಳವಾರ ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ನಡೆದ ರೈತರ ಸಭೆಯಲ್ಲಿ ಮಾತನಾಡಿದರು.
ಸರ್ಕಾರ, ಸಚಿವರು ಹಾಗೂ ಅಧಿಕಾರಿಗಳು ಯಾವುದೆ ರೈತರಿಗೆ ನೊಟೀಸ್ ನೀಡಿಲ್ಲ ಎಂದು ಹೇಳುತ್ತಿದ್ದರೂ ತೇರದಾಳ 420 ಎಕರೆಯ 110 ರೈತರಿಗೆ ನೊಟೀಸ್ ನೀಡಿದೆ. ಕಾಂಗ್ರೆಸ್ ಸರ್ಕಾರ ಮತ ರಾಜಕಾರಣ ಮತ್ತು ರೈತರಿಗೆ ದ್ರೋಹ ಮಾಡುತ್ತಿದೆ. ತೇರದಾಳದ ನೂರಾರು ರೈತರು 2018 ರಿಂದ ಬೆಂಗಳೂರಿನ ವಕ್ಫ್ ಬೋರ್ಡ್ ಗೆ ತಮ್ಮ ಜಮೀನುಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಅಲೆದಾಡುತ್ತಿವೆ. ಆದಷ್ಟು ಬೇಗನೆ ವಕ್ಫ್ ಬೋರ್ಡ್ ಮತ್ತು ಕಾನೂನನ್ನು ರದ್ದು ಮಾಡಬೇಕು. ಸರ್ಕಾರ ರೈತರ ಜಮೀನುಗಳಿಗೆ ಬೇಲಿ ಹಾಕಿ ದಿಗ್ಬಂಧನ ಹಾಕುತ್ತಿರುವುದು ಖೇದಕರ ಸಂಗತಿಯಾಗಿದೆ. ಸರ್ಕಾರ ರೈತರ ಜಮೀನುಗಳನ್ನು ವಶಪಡಿಸಿಕೊಳ್ಳಲು ಮುಂದಾದರೆ ರಕ್ತ ಹರಿದರೂ ಚಿಂತೆಯಿಲ್ಲ ರೈತರ ಜಮೀನನ್ನು ಬಿಟ್ಟುಕೊಡುವುದಿಲ್ಲ ಎಂದು ಶಾಸಕ ಸಿದ್ದು ಸವದಿ ಎಚ್ಚರಿಕೆ ನೀಡಿದರು.
ವಕ್ಫ್ ಮಂಡಳಿಗೆ ಮತಗಳ ಓಲೈಕೆ: ದೇಶದಲ್ಲಿ 1990ರ ಅವಧಿಯಲ್ಲಿ 1.06 ಲಕ್ಷ ಎಕರೆಯಷ್ಟು ಹೊಂದಿದ್ದ ಭೂಮಿಯು ಇದೀಗ 2024 ಕ್ಕೆ 9.06 ಲಕ್ಷ ಎಕರೆಯಷ್ಟು ಭೂಮಿಯನ್ನು ಹೊಂದಿ. ಕೇವಲ ಮುಸ್ಲಿಂ ಸಮುದಾಯದ ಮತಗಳ ಓಲೈಕೆಗಾಗಿ ಕಾಂಗ್ರೆಸ್ ನೀಚ ಕೆಲಸಕ್ಕಿಳಿದು ರೈತರ ನ್ಯಾಯಯುತ ಜಮೀನು ಕಸಿದುಕೊಳ್ಳುವ ಸ್ವಾರ್ಥ ರಾಜಕಾರಣ ವಿರೋಧಿಸುತ್ತೇನೆಂದು ಸವದಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ತೇರದಾಳದ ರೈತ ಭೂಪಾಲ ಮಾನಗಾವಿ ಮಾತನಾಡಿ, 2018 ರಿಂದ ಬೆಂಗಳೂರಿಗೆ ಹೋಗಿ ಬರುತ್ತಿದ್ದೇವೆ. ನಮಗೆ ವಕ್ಫ್ ಬೋರ್ಡ್ ನಿಂದ ನೊಟೀಸ್ ಬಂದಿವೆ. ನಾವು ತಲೆ ತಲಾಂತರದಿಂದ ಉಳುಮೆಯನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಮತ್ತೊರ್ವ ರೈತ ಹುಸೇನ್ ಇನಾಮದಾರ ಮಾತನಾಡಿ, ನಮ್ಮದು 120 ಎಕರೆ ಜಮೀನು ಇದ್ದು 64 ಜನ ಸಹೋದರರು ಇದ್ದೇವೆ. ನಮ್ಮ ನಮಗೂ ಕೂಡಾ ನೊಟೀಸು ಬಂದಿವೆ ಎಂದು ತಿಳಿಸಿದರು.
ಶ್ರೀಶೈಲ ಬೀಳಗಿ, ಧರೆಪ್ಪ ಉಳ್ಳಾಗಡ್ಡಿ, ಸುರೇಶ ಅಕ್ಕಿವಾಟ, ಗಂಗಪ್ಪ ಉಳ್ಳಾಗಡ್ಡಿ, ಪರಶುರಾಮ ಗಾಡಿವಡ್ಡರ, ನಿಂಗಪ್ಪ ಜಕ್ಕನ್ನವರ, ನೇಮಣ್ಣ ಶೇಡಬಾಳ, ಪ್ರಭು ಬಡಿಗೇರ ಸೇರಿದಂತೆ ತೇರದಾಳದ ಅನೇಕ ರೈತರು ಇದ್ದರು.