Advertisement
ಸಾಂಸ್ಕೃತಿಕ ಕಲಾ ಕೇಂದ್ರ ರಂಗಮನೆಯಲ್ಲಿ ಯಕ್ಷ ಸಂಭ್ರಮ ವರ್ಷಾಧಾರೆಯ ನಡುವೆ ವಿಜೃಂಭಿಸಿತು. ರಂಗಮನೆಯ ಅಮ್ಮ ವನಜಾ ಜಯರಾಮ ನೆನಪಿನಲ್ಲಿ ಕೊಡಮಾಡುವ ಪ್ರಶಸ್ತಿಗೆ ಈ ಬಾರಿಗೆ ಆಯ್ಕೆಯಾದವರು ಲೀಲಾವತಿ ಬೈಪಾಡಿತ್ತಾಯ ಅವರು. ಪ್ರಾರಂಭದಲ್ಲಿ ಲೀಲಾವತಿ ಬೈಪಾಡಿತ್ತಾಯ ಅವರು ಪಾರಂಪರಿಕ ಶೈಲಿಯಲ್ಲಿ ಯಕ್ಷಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಮದ್ದಲೆಯಲ್ಲಿ ಹರಿನಾರಾಯಣ ಬೈಪಾಡಿತ್ತಾಯ ಸಹಕರಿಸಿದರು.
ಬೇಡನೊಬ್ಬ ದಾರಿಹೋಕರನ್ನು ತಡೆದು ಹಿಂಸಿಸಿ ಅವರಲ್ಲಿದ್ದ ಹಣ ವಸ್ತುಗಳನ್ನು ದರೋಡೆ ಮಾಡುತ್ತಿದ್ದ. ಆ ದಾರಿಯಲ್ಲಿ ಬಂದ ಸಪ್ತರ್ಷಿಯೊಬ್ಬರನ್ನು ಹಣಕ್ಕಾಗಿ ಪೀಡಿಸಿದಾಗ ಅವರು ದರೋಡೆ, ಹಿಂಸೆ ಮಾಡುವುದು ಪಾಪದ ಕಾರ್ಯ. ಈ ಪಾಪದ ಫಲವನ್ನು ನಿಮ್ಮ ಮನೆಯವರು ಹಂಚಿಕೊಳ್ಳುತ್ತಾರೆಯೇ ಎಂದು ಪ್ರಶ್ನಿಸುತ್ತಾರೆ. ಇದನ್ನು ತಿಳಿದುಕೊಂಡು ಬರಲು ಬೇಡ ಮನೆಗೆ ಬಂದು ಪತ್ನಿಯಲ್ಲಿ ಕೇಳಿದಾಗ ಪಾಪಪುಣ್ಯದ ಪಾಲು ಅವರವರಿಗೆ ಸೇರಿದ್ದು. ನಿಮ್ಮ ಪಾಪವನ್ನು ನಾನು ಹೊರಲು ಸಾಧ್ಯವಿಲ್ಲವೆಂದು ಖಡಾಖಂಡಿತವಾಗಿ ಹೇಳಿಬಿಟ್ಟಳು. ಇದರಿಂದ ಭ್ರಮನಿರಸನಗೊಂಡ ಬೇಡ ಸಪ್ತರ್ಷಿ ಬಳಿ ತನ್ನನ್ನು ಸನ್ಮಾರ್ಗದಲ್ಲಿ ನಡೆಸುವಂತೆ ಬೇಡಿಕೊಳ್ಳುತ್ತಾನೆ ರಾಮನಾಮ ತಾರಕ ಮಂತ್ರವನ್ನು ಸಪ್ತರ್ಷಿಯು ಆತನಿಗೆ ಉಪದೇಶಿಸುತ್ತಾರೆ.
Related Articles
Advertisement
ಮುಂದೆ ಶ್ರೀರಾಮಚಂದ್ರನ ಪಟ್ಟಾಭಿಷೇಕ,ಅಗಸನ ಆಪಾದನೆ, ಸೀತಾ ಪರಿತ್ಯಾಗ, ವಾಲ್ಮೀಕಿ ಮುನಿಯ ಆಶ್ರಮದಲ್ಲಿ ತುಂಬು ಗರ್ಭಿಣಿ ಸೀತೆ ಆಶ್ರಯ ಪಡೆಯುವುದು. ಲವ – ಕುಶರ ಜನನ ಹೀಗೆ ಪ್ರಸಂಗ ಮುಂದುವರಿದು ಭೂಗರ್ಭ ಸಂಜಾತೆ ಸೀತೆ ಮತ್ತೆ ಭೂಗರ್ಭದೊಳಗೆ ಐಕ್ಯವಾಗುವುದರೊಂದಿಗೆ ಪ್ರಸಂಗ ಅಂತ್ಯಗೊಳ್ಳುತ್ತದೆ.
ಬೊಟ್ಟಿಕೆರೆ ಪುರುಷೋತ್ತಮ ಪೂಂಜ ರಚಿಸಿದ ಮಾನಿಷಾದ ಯಕ್ಷಗಾನ ಪ್ರಸಂಗವನ್ನು ಯಕ್ಷ ಗುರು ರಾಕೇಶ್ ರೈ ಅಡ್ಕ ಅವರ ನಿರ್ದೇಶನದಲ್ಲಿ ಮಂಗಳೂರಿನ ಸನಾತನ ಯಕ್ಷಾಲಯದ ಮಹಿಳಾ ಕಲಾವಿದೆಯರು ಮನೋಜ್ಞವಾಗಿ ಪ್ರಸ್ತುತಪಡಿಸಿದರು.
ರಾಮಾಯಣದ ಕಥನ ಕಾವ್ಯದ ನಾಯಕಿ ಸೀತಾಮಾತೆ ತುಂಬು ಗರ್ಭಿಣಿಯಾಗಿ ಅದರ ನೋವು ನಲಿವನ್ನು ಅನುಭವಿಸುತ್ತಾ ಮಹಿಮಾ ರಾವ್ ತನ್ನ ಆಂಗಿಕ ಅಭಿನಯ ಮತ್ತು ಅರ್ಥಗರ್ಭಿತ ಮಾತಿನೊಂದಿಗೆ ಗಮನ ಸೆಳೆದರು. ಕಥಾ ನಾಯಕ ಸೀತಾರಾಮನಾಗಿ ವೃಂದಾ ಕೊನ್ನೀರ್ ಮೊದಲು ಉಲ್ಲಾಸ ತುಂಬಿ, ಉತ್ತರಾರ್ಧದಲ್ಲಿ ರಾಜಾರಾಮನಾಗಿ ಗಾಂಭೀರ್ಯದಿಂದ ಪಾತ್ರ ಪೋಷಣೆ ಮಾಡಿದರು. ವಾಲ್ಮೀಕಿಯಾಗಿ ಸಾವಿತ್ರಿ ಎಸ್.ರಾವ್, ಲವಣಾಸುರನಾಗಿ ಕಾವ್ಯ ಎನ್.ಶೆಟ್ಟಿ, ಲಕ್ಷ್ಮಣನಾಗಿ ಸತ್ಯಾಜೀವನ್,ಮಾಲತಿ ವಿ.ರಾವ್ ಶತ್ರುಘ್ನನಾಗಿ ಮನೋಜ್ಞವಾಗಿ ಅಭಿನಯಿಸಿದರು.ರೂಕ್ಷನಾಗಿ ವಸುಂಧರಾ ಹರೀಶ್ ಮತ್ತು ದಿಶಾ ಶೆಟ್ಟಿ, ವಿಕ್ಷಿಪ್ತ ಪಾತ್ರದಲ್ಲಿ ಕಾವ್ಯಶ್ರೀ, ಕಿರಾತರಾಗಿ ಅಭಿನವಿ ಹೊಳ್ಳ, ಸಮನ್ವಿತಾ, ಕಾವ್ಯಶ್ರೀ, ಕಾವ್ಯ ಎನ್.ಶೆಟ್ಟಿ, ಸ್ಪೈರಿಣಿಯಾಗಿ ವಿಂಧ್ಯಾ ಆಚಾರ್ಯ, ಬ್ರಹ್ಮನಾಗಿ ಶ್ರೇಯಾ ರಾವ್, ಸಪ್ತರ್ಷಿಯಾಗಿ ಕಾವ್ಯಶ್ರೀ, ಕ್ರೌಂಚ ಪಕ್ಷಿಗಳಾಗಿ ಅಭಿನವಿ ಹೊಳ್ಳ, ಸಮನ್ವಿತಾ, ಬೇಟೆಗಾರನಾಗಿ ಸುರೇಖಾ, ಭದ್ರನಾಗಿ ಕಾವ್ಯಶ್ರೀ, ಲವನಾಗಿ ಅಭಿನವಿ ಹೊಳ್ಳ, ಕುಶನಾಗಿ ಸಮನ್ವಿತಾ, ಋಷಿಗಳಾಗಿ ಸುರೇಖಾ, ಕಾವ್ಯಶ್ರೀ ಪಾತ್ರಗಳಿಗೆ ಜೀವ ತುಂಬಿದರು.ಭಾಗವತರಾಗಿ ಗಿರೀಶ್ ರೈ ಕಕ್ಕೆಪದವು. ಚಂಡೆಯಲ್ಲಿ ಮುರಾರಿ ಕಡಂಬಳಿತ್ತಾಯ, ಮದ್ದಳೆಯಲ್ಲಿ ನೆಕ್ಕರೆಮೂಲೆ ಗಣೇಶ್ ಭಟ್, ಚಕ್ರತಾಳದಲ್ಲಿ ಅಭಿಜಿತ್ ಬಂಟ್ವಾಳ ಸಹಕರಿಸಿದರು.
ಗಂಗಾಧರ ಮಟ್ಟಿ ಸುಳ್ಯ