ನಿರ್ದೇಶಕ ಕೆ. ಬಾಲಚಂದರ್ ಅವರ “ಸಿಂಧು-ಭೈರವಿ’ ಚಿತ್ರ ನೆನಪಿರಬಹುದು. ಈ ಚಿತ್ರದಲ್ಲಿನ ಇಬ್ಬರು ನಾಯಕಿಯರಿಗೆ ಸಿಂಧು ಮತ್ತು ಭೈರವಿ ಎಂಬ ಹೆಸರುಗಳನ್ನಿಡಲಾಗಿತ್ತು ಮತ್ತು ಇವೆರೆಡೂ ಹೆಸರುಗಳು ಸಿಂಧು ಮತ್ತು ಭೈರವಿ ಎಂಬ ರಾಗಗಳ ಹೆಸರಾಗಿವೆ. ಈಗ್ಯಾಕೆ ಈ ಚಿತ್ರದ ಕುರಿತು ಮಾತು ಎಂಬ ಪ್ರಶ್ನೆ ಮೂಡುವುದು ಸಹಜ. ನಿರ್ದೇಶಕ ಗಡ್ಡ ವಿಜಿ ಅವರೀಗ ಹೊಸ ಚಿತ್ರಕ್ಕೆ ಅಣಿಯಾಗಿದ್ದಾರೆ.
ತಮ್ಮ ಮುಂದಿನ ಚಿತ್ರಕ್ಕೆ “ಮಧುವಂತಿ ಜೊತೆ ಕೀರವಾಣಿ’ ಎಂದು ನಾಮಕರಣ ಮಾಡಿದ್ದಾರೆ. “ಮಧುವಂತಿ ಮತ್ತು ಕೀರವಾಣಿ’ ಈ ಎರಡು ಹೆಸರುಗಳು ಕೂಡ ಸಂಗೀತಕ್ಕೆ ಸಂಬಂಧಿಸಿದವು. ಇವು ರಾಗಗಳ ಹೆಸರು. ಆ ಹೆಸರನ್ನೇ ಇಟ್ಟುಕೊಂಡು ಒಂದು ಮುದ್ದಾದ ಲವ್‌ಸ್ಟೋರಿ ಹೆಣೆದಿದ್ದಾರೆ ಗಡ್ಡ ವಿಜಿ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಈಗಾಗಲೇ ಗಡ್ಡ ವಿಜಿ ಅವರ “ಮಧುವಂತಿ ಜೊತೆ ಕೀರವಾಣಿ’ ಚಿತ್ರ ಶುರುವಾಗಬೇಕಿತ್ತು.
ಆದರೆ, ಆಗಲಿಲ್ಲ. ಕಾರಣ, ಮೊದಲಿದ್ದ ನಿರ್ಮಾಪಕರು ಅದೇಕೋ ಹಿಂದೆ ಸರಿದರು. ಈಗ ಮತ್ತೂಬ್ಬ ನಿರ್ಮಾಪಕರು ಗಡ್ಡ ವಿಜಿ ಅವರ ಕಥೆ ಕೇಳಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗ ಚುನಾವಣೆ ನಿಗದಿಯಾಗಿರುವುದರಿಂದ, ಅದು ಮುಗಿದ ಬಳಿಕವೇ ಚಿತ್ರಕ್ಕೆ ಚಾಲನೆ ಸಿಗಲಿದೆ ಎಂಬುದು ಗಡ್ಡ ವಿಜಿ ಅವರ ಮಾತು. ಈ ಚಿತ್ರದಲ್ಲಿ ನಾಯಕ, ನಾಯಕಿ ಇಬ್ಬರೂ ಹೊಸಬರೇ ಕಾಣಿಸಿಕೊಳ್ಳಲಿದ್ದು, ಅವರ ಆಯ್ಕೆ ಇನ್ನಷ್ಟೇ ಆಗಬೇಕಿದೆ.
ಉಳಿದಂತೆ ಚಿತ್ರದಲ್ಲಿ ಶಿವಮಣಿ ಇರುತ್ತಾರೆ. ಅವರೊಂದಿಗೆ ಹಿರಿಯ ನಟಿ ಸರಿತಾ ಅವರಿಗೂ ಒಂದು ಪ್ರಮುಖ ಪಾತ್ರವಿದೆ. ಅವರ ಜೊತೆ ಪಾತ್ರ ಕುರಿತು ಮಾತುಕತೆ ನಡೆಯಬೇಕಿದೆ. ಅವರು ಒಪ್ಪಿದರೆ, ಇಲ್ಲೊಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವಿವರ ಕೊಡುವ ಗಡ್ಡ ವಿಜಿ, “ಇದೊಂದು ಪಕ್ಕಾ ಲವ್‌ಸ್ಟೋರಿ. ಕಥೆ ಆರು ಜನರ ಸುತ್ತ ಸಾಗುತ್ತದೆ. ಇದನ್ನು ಒಂದು ಪ್ರಯೋಗ ಎನ್ನಬಹುದು.
ಪಕ್ಕಾ ಕಮರ್ಷಿಯಲ್ ಅಂತಾನೂ ಹೇಳಬಹುದು. ನನ್ನ ನೆಚ್ಚಿನ ಜಾನರ್ ಸಿನಿಮಾ ಇದಾಗಲಿದೆ’ ಎನ್ನುತ್ತಾರೆ ಗಡ್ಡ ವಿಜಿ. ಎಂದಿನಂತೆ ಇಲ್ಲಿಯೂ ನನ್ನ ಹಳೆಯ ತಂಡ ಕೆಲಸ ಮಾಡಲಿದೆ. “ದ್ಯಾವ್ರೇ’ ಚಿತ್ರದಲ್ಲಿ ಸಂಗೀತ ನಿರ್ದೇಶಕರಾಗಿದ್ದ ವೀರ್ ಸಮರ್ಥ್, ಛಾಯಾಗ್ರಾಹಕರಾಗಿದ್ದ ಗುರುಪ್ರಶಾಂತ್ ರೈ ಇಲ್ಲೂ ಕೆಲಸ ಮಾಡಲಿದ್ದಾರೆ. ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ.
ಇದು ಬೇರೆ ರೀತಿಯ ಸಿನಿಮಾ ಆಗಲಿದೆ ಎಂಬ ಗ್ಯಾರಂಟಿ ಕೊಡುತ್ತಾರೆ ಗಡ್ಡವಿಜಿ. ಅಂದಹಾಗೆ, ಗಡ್ಡ ವಿಜಿ ಅವರು ಈ ಹಿಂದೆ ಸುದೀಪ್ ನಿರ್ಮಾಣದ ಧಾರಾವಾಹಿಯೊಂದನ್ನು ಆರಂಭದ ಎಪಿಸೋಡ್‌ಗಳಿಗೆ ನಿರ್ದೇಶನ ಮಾಡಿದ್ದರು. ಅದಾದ ಬಳಿಕ “ಶಿರಾಡಿ ಘಾಟ್’ ಎಂಬ ಹಾರರ್ ಚಿತ್ರವನ್ನೂ ಅವರು ಮಾಡಿದ್ದಾರೆ. ಇನ್ನಷ್ಟು ಪ್ಯಾಚ್ ವರ್ಕ್ ಇಟ್ಟುಕೊಂಡಿರುವ ಅವರು, ಏ.23ರಿಂದ ಶುರುಮಾಡಲಿದ್ದಾರೆ.