Advertisement

ರಾ.ಹೆ. ಸಮಸ್ಯೆ ತತ್‌ಕ್ಷಣ ಬಗೆಹರಿಸಿ: ಶೋಭಾ ಸೂಚನೆ

01:09 AM Jun 15, 2023 | Team Udayavani |

ಮಣಿಪಾಲ: ಹೆದ್ದಾರಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಏಜೆನ್ಸಿ, ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಸಭೆ ನಡೆಸಿ, ವರದಿ ಸಲ್ಲಿಸಬೇಕು ಎಂದು ಸಂಸದರೂ ಆದ ಕೇಂದ್ರ ಕೃಷಿ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಂಕ್ಷನ್‌ ಸರಿಯಾಗಿ ರೂಪಿಸಿಲ್ಲ. ಇದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ರಸ್ತೆಯ ಉಸ್ತುವಾರಿ ಐಆರ್‌ಬಿ ಸಂಸ್ಥೆಗೆ ನೋಟಿಸ್‌ ಜಾರಿ ಮಾಡಬೇಕು. ಕಳಪೆ ಕಾಮಗಾರಿ ಕಂಡುಬಂದಲ್ಲಿ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸುವುದು ಖಚಿತ ಎಂದರು.

ಬ್ಲ್ಯಾಕ್ ಸ್ಪಾಟ್‌
ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಹೆದ್ದಾರಿಯಲ್ಲಿರುವ ಬ್ಲ್ಯಾಕ್ ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಕೋಟ ಜಂಕ್ಷನ್‌ ಸೇರಿ ದಂತೆ ಜಿಲ್ಲೆಯ ಹೆದ್ದಾರಿಯುದ್ದಕ್ಕೂ ಗುರುತಿಸಿರುವ ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಈಗಾಗಲೇ 70 ಅಧಿಕ ಅಪಘಾತಗಳಾಗಿ 12 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಪೊಲೀಸರು ಸೂಚಿಸಿರುವ ಎಲ್ಲ ಕಾರ್ಯ ವಿಧಾನಗಳನ್ನು ತತ್‌ಕ್ಷಣವೇ ಜಾರಿ ಮಾಡಿ,ವರದಿ ಸಲ್ಲಿಸಬೇಕು. 5 ಕಡೆ ಸ್ಕೈವಾಕರ್‌ ನಿರ್ಮಿಸಿ, ಅದಕ್ಕೆ ಎಸ್ಕಲೇಟರ್‌ ಅಳವಡಿ ಸುವ ಬಗ್ಗೆಯೂ ತೀರ್ಮಾನಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

15 ದಿನಗಳಲ್ಲಿ ಕಾರ್ಯಾರಂಭ
ಮಲ್ಪೆ-ಆದಿಉಡುಪಿ ರಸ್ತೆ ವಿಸ್ತರಣೆ 3.7 ಕಿ.ಮೀ. ಭೂ ಸ್ವಾಧೀನಕ್ಕೆ ಸಂಬಂಧಿ ಸಿದಂತೆ ಕಡತಗಳನ್ನು ಕುಂದಾಪುರ ಉಪವಿಭಾಗಾಧಿಕಾರಿ ಕಚೇರಿಗೆ ಸಲ್ಲಿಸಿದ್ದೇವೆ. ಇಂದ್ರಾಳಿ ಸೇತುವೆಗೆ ಸಂಬಂಧಿಸಿ ದಂತೆ 485 ಟನ್‌ ಸ್ಟೀಲ್‌ ಗರ್ಡರ್‌ ನಿರ್ಮಾಣವಾಗಬೇಕಿದೆ. ಡಿಸೆಂಬರ್‌ ವೇಳೆಗೆ ಸಿದ್ಧವಾಗಲಿದೆ ಎಂದು ಹೆದ್ದಾರಿ ಅಧಿಕಾರಿಗಳು ಮಾಹಿತಿ ನೀಡಿದರು.

Advertisement

ಡಿಸಿ ಕೂರ್ಮಾ ರಾವ್‌ ಎಂ., ಜಿ.ಪಂ.ಸಿಇಒ ಪ್ರಸನ್ನ ಎಚ್‌., ಎಸ್‌ಪಿ ಅಕ್ಷಯ್‌ ಹಾಕೇ ಮಚ್ಚೀಂದ್ರ, ತರಬೇತಿ ನಿರತ ಐಎಎಸ್‌ ಅಧಿಕಾರಿ ಯತೀಶ್‌ ಇದ್ದರು.

ನೀರಿನ ಸಮಸ್ಯೆ ಮಾಹಿತಿ
ಜಿಲ್ಲೆಯ ಹಲವು ಗ್ರಾ.ಪಂ.ಗಳಲ್ಲಿ ನೀರಿನ ಸಮಸ್ಯೆಯಿದೆ. ವರ್ಗ-1ರಲ್ಲಿರುವ ಅನುದಾನ ಬಳಸಿಕೊಂಡು ಟ್ಯಾಂಕರ್‌ ಮೂಲಕ ನೀರ ಪೂರೈಕೆಸಲಾಗುತ್ತಿದೆ. ಕೆಲವು ಗ್ರಾ.ಪಂ.ಗಳಲ್ಲಿ ಅನುದಾನ ಕೊರತೆಯಿದೆ. ರಾಜ್ಯ ಸರಕಾರ ಬರ ಘೋಷಣೆ ಮಾಡದೆ ಅನುದಾನವು ಬರುತ್ತಿಲ್ಲ. ನೀರಿನ ಪೂರೈಕೆಗೂ ಕೆಲವು ಕಡೆಗಳಲ್ಲಿ ಸಮಸ್ಯೆಯಾಗುತ್ತಿದೆ ಎಂದು ಜಿ.ಪಂ. ಸಿಇಒ ಪ್ರಸನ್ನ ಎಚ್‌. ಅವರು ಮಾಹಿತಿ ನೀಡಿದರು. ಈ ಬಗ್ಗೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿ ಅನುದಾನದ ಅಗತ್ಯಗಳನ್ನು ಮನವರಿಕೆ ಮಾಡಿಕೊಡುವಂತೆ ಸಚಿವರು ಸೂಚನೆ ನೀಡಿದರು.

ಬಂದರು ಅಭಿವೃದ್ಧಿ
ಜಿಲ್ಲೆಯ ಹೆಜಮಾಡಿ ಕೋಡಿ ಮೀನುಗಾರಿಕೆ ಬಂದರು ಅಭಿವೃದ್ಧಿ ಕಾಮಗಾರಿ ಶೇ. 61ರಷ್ಟು ಪೂರ್ಣಗೊಂಡಿದೆ. ವಿವಿಧ ಬಂದರುಗಳಲ್ಲಿ ಡ್ರೆಜ್ಜಿಂಗ್‌ ನಡೆಸಿದ್ದೇವೆ. ಸಾಸ್ತಾನದ ಕೋಡಿ ಕನ್ಯಾನದಲ್ಲಿ 15 ಲಕ್ಷ ರೂ. ಕಾಮಗಾರಿ ಸಂಬಂಧಿಸಿದಂತೆ ಕಡತವನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ. ಆದಷ್ಟು ಬೇಗ ಒಪ್ಪಿಗೆ ಪಡೆಯಲಿದ್ದೇವೆ. ಅನುದಾನದ ಕೊರತೆಯಿಂದ ಕೆಲವೊಂದು ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಸೀಮೆಎಣ್ಣೆಯನ್ನು ಆದಷ್ಟು ಬೇಗ ನಾಡದೋಣಿ ಮಾಲಕರಿಗೆ ಸಿಗುವಂತೆ ಮಾಡಬೇಕು ಎಂದು ಸಚಿವರು ಎಚ್ಚರಿಕೆ ನೀಡಿದರು.

ಸಿಸಿಟಿವಿ ಅಳವಡಿಸಿ
ಕೊಂಕಣ ರೈಲ್ವೆಯಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗುತ್ತಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸಿಸಿಟಿವಿ ಅಳವಡಿಸುವಂತೆ ಈ ಹಿಂದೆಯೇ ನಿರ್ದೇಶಿಸಲಾಗಿತ್ತು. ಆದರೆ ಈ ವರೆಗೂ ಕ್ರಮ ಆಗಿಲ್ಲ. ಇತ್ತೀಚೆಗೆ ಎಷ್ಟು ಪ್ರಕರಣಗಳು ನಡೆದಿವೆ ಮತ್ತು ಅದರಲ್ಲಿ ಎಷ್ಟು ಬೇಧಿಸಲಾಗಿದೆ ಎಂಬ ಮಾಹಿತಿಯನ್ನು ನೀಡಬೇಕು ಹಾಗೂ ಸಿಸಿಟಿವಿ ಅಳವಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಮತ್ತು ಪೊಲೀಸ್‌ ಫೋರ್ಸ್‌ ಹೆಚ್ಚಿಸಬೇಕು ಎಂದು ಕೊಂಕಣ ರೈಲ್ವೇಯ ಅಧಿಕಾರಿಗಳಿಗೆ ಸಚಿವೆ ಶೋಭಾ ಕರಂದ್ಲಾಜೆ ಸೂಚಿಸಿದರು.

ಸಭೆಯಲ್ಲಿ ಹೊಸ ಶಾಸಕರು
ಸಭೆಯಲ್ಲಿ ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಕುಂದಾಪುರ
ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಹಾಗೂ ಬೈಂದೂರಿನ ಗುರುರಾಜಶೆಟ್ಟಿ ಗಂಟಿಹೊಳೆ ಭಾಗವಹಿಸಿ ತಮ್ಮ ಕ್ಷೇತ್ರ ವ್ಯಾಪ್ತಿಯ ಸಮಸ್ಯೆಗ ಳನ್ನು ಮುಂದಿಟ್ಟು, ಪರಿಹಾರ ಕಂಡು ಕೊಳ್ಳುವ ಪ್ರಯತ್ನ ಮಾಡಿದರು.

ಪಿಎಂ ಸ್ವನಿಧಿಯಲ್ಲಿ ರಾಜ್ಯಕ್ಕೆ ಪ್ರಥಮ
ಪಿಎಂ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲಸೌಲಭ್ಯ ಒದಗಿಸಲಾಗುತ್ತಿದೆ. 3,049 ಅರ್ಜಿ ಬಂದಿದ್ದು, 3,856 ವ್ಯಾಪಾರಿಗಳಿಗೆ ಸಾಲಸೌಲಭ್ಯ ಒದಗಿಸಿದ್ದೇವೆ. ಶೇ. 129ರಷ್ಟು ಸಾಧನೆ ಮಾಡಿದ್ದೇವೆ. 2,420 ಮೀನುಗಾರಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ನೀಡಿದ್ದೇವೆ. 35 ಸಾವಿರಕ್ಕೂ ಅಧಿಕ ರೈತರಿಗೆ ಕ್ರೆಡಿಟ್‌ ಕಾರ್ಡ್‌ ನೀಡಿದ್ದೇವೆ. 25.28 ಕೋ.ರೂ. ಸಾಲವನ್ನು ಇದರಡಿಯಲ್ಲಿ ವಿತರಿಸಲಾಗಿದೆ ಎಂದು ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಪಿ.ಎಂ. ಪಿಂಜಾರ ತಿಳಿಸಿದರು.

ಭಾರತ-ಪಾಕಿಸ್ಥಾನವಲ್ಲ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪಿಡಬ್ಲೂéಡಿ, ಸಣ್ಣ ನೀರಾವರಿ ಸಹಿತ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಇಲಾಖೆಗಳು ಭಾರತ – ಪಾಕಿಸ್ಥಾನ ವಲ್ಲ. ಒಬ್ಬರಿಗೊಬ್ಬರು ದ್ವೇಷ ಸಾಧನೆ ಮಾಡದೇ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಒಟ್ಟಾರೆ ಯಾಗಿ ಜನರಿಗೆ ಅನುಕೂಲ ಮಾಡಿ ಕೊಡಬೇಕು. ಯಾರೋ ಒಬ್ಬರು ಇಬ್ಬರಿಗೆ ಅನುಕೂಲ ಮಾಡಿ ಕೊಡುವ ನೆಪದಲ್ಲಿ ಜನರಿಗೆ ಸಮಸ್ಯೆ ಮಾಡುವು ದನ್ನು ಸಹಿಸುವುದಿಲ್ಲ. ಎಷ್ಟು ಸಾಧ್ಯವೋ ಅಷ್ಟು ಹೊಂದಾಣಿಕೆಯಿಂದ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸಚಿವೆ ಶೋಭಾ ಸೂಚಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next