Advertisement
1960ರ ದಶಕಕ್ಕಿಂತಲೂ ಮುಂಚೆಯೇ ಇಲ್ಲಿನ ಸರ್ಕಾರಿ ಭೂಮಿಯನ್ನು ರೈತರು ಸಹಕಾರಿ ಇಲಾಖೆ ಮೂಲಕ ನೋಂದಾಯಿಸಿಕೊಂಡು ಅದರಲ್ಲಿ ಕೃಷಿ ಮಾಡಿಕೊಂಡು ಬಂದಿದ್ದಾರೆ. 560 ಎಕರೆ ಜಮೀನಿನಲ್ಲಿ ಬಡ ರೈತರು ಉಳುಮೆ ಮಾಡುತ್ತಿದ್ದು, ಇಂದಿಗೂ ಆ ಜಮೀನುಗಳು ಅವರ ಹೆಸರಿಗೆ ವರ್ಗಾವಣೆ ಆಗುತ್ತಿಲ್ಲ.
ಬೆಳೆವಿಮೆಯಂತೂ ಇವರಿಗೆ ಕನಸಿನ ಮಾತು. ಪ್ರಧಾನಿ ನರೇಂದ್ರ ಮೋದಿ ಅವರ ಬಹು ಮಹತ್ವಾಕಾಂಕ್ಷಿ ಯೋಜನೆ ವರ್ಷಕ್ಕೆ 6 ಸಾವಿರ ರೂ. ನೀಡುವ ಹಣ ಈ ರೈತರಿಗೆ ಲಭಿಸುತ್ತಲೇ ಇಲ್ಲ. ಅದರಂತೆ ರಾಜ್ಯ ಸರ್ಕಾರದ 4 ಸಾವಿರ ರೂ. ಕೂಡ ಇಲ್ಲ.ಇದು ಹೋಗಲಿ ಗ್ರಾಪಂಗಳಲ್ಲಿನ ನರೇಗಾ ಯೋಜನೆ ಅಡಿಯ ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಕಿರು ಸೇತುವೆಗಳ ನಿರ್ಮಾಣ ಯಾವ ಸೌಲಭ್ಯವೂ ಇವರಿಗೇ ಇಲ್ಲವಾಗಿದೆ.
Related Articles
ಈ ವಿಚಾರವನ್ನು ಗಲಗಿನಗಟ್ಟಿ ಗ್ರಾಮಸ್ಥರು 2012ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಧಾರವಾಡ ಜಿಲ್ಲೆಯವರೇ ಆದ ಜಗದೀಶ ಶೆಟ್ಟರ ಅವರ ಗಮನಕ್ಕೆ ತಂದಿದ್ದರು. ಸಿಎಂ ಶೆಟ್ಟರ ಅವರು ಕೂಡ ಆಗ ಈ ವಿಚಾರವನ್ನು ಕ್ಯಾಬಿನೆಟ್ ಮುಂದಿಟ್ಟು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಕೂಡ ಮಾಡಿದ್ದರು. ಆದರೆ ಸಹಕಾರ ಕಾಯಿದೆ ಮತ್ತು ಕೃಷಿ ಕಾಯಿದೆಗಳಲ್ಲಿನ ತಿದ್ದುಪಡಿ ಇದಕ್ಕೆ ಅನಿವಾರ್ಯವಾಗಿತ್ತು. ಅಷ್ಟರಲ್ಲಿ ಶೆಟ್ಟರ ಸಿಎಂ ಸ್ಥಾನದಿಂದ ಕೆಳಗಿಳಿದರು.
Advertisement
ಮಾಜಿ ಸಚಿವ ಸಂತೋಷ್ ಲಾಡ್ ಕೂಡ ಕಲಘಟಗಿ ಶಾಸಕರಾಗಿದ್ದಾಗ ಅವರ ವ್ಯಾಪ್ತಿಯ ಗಲಿಗಿನಗಟ್ಟಿಯ ಗ್ರಾಮಸ್ಥರು ಈ ಬಗ್ಗೆ ಮನವಿ ಮಾಡಿದ್ದರು. ಅವರು ತಮ್ಮ ಕೈಲಾದ ಪ್ರಯತ್ನ ಮಾಡಿ ಕಾನೂನು ತೊಡಕು ಬಿಡಿಸಲು ಯತ್ನಿಸಿದರು. ಈಗಿನ ಶಾಸಕರಾಗಿರುವ ಸಿಎಂ ನಿಂಬಣ್ಣವರ ಕೂಡ ಇದಕ್ಕೆ ಪ್ರಯತ್ನ ನಡೆಸಿದ್ದಾರೆ.
ಇದೀಗ ಹುಬ್ಬಳ್ಳಿಯವರೇ ಆದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾರೆ. ವಿಧಾನ ಪರಿಷತ್ತಿಗೆ ಧಾರವಾಡ ಜಿಲ್ಲಾ ಕ್ಷೇತ್ರದಿಂದಲೇ ಆಯ್ಕೆಯಾಗಿದ್ದ ಅವರಿಗೆ ಗಲಗಿನಗಟ್ಟಿ ಗ್ರಾಮ ಕೂಡ ಪರಿಚಯವೇ. ಅದರಂತೆ ಈ ಗ್ರಾಮದ ಪಹಣಿ ಸಮಸ್ಯೆ ಕೂಡ ಪರಿಚಯ. ಹೀಗಾಗಿ ಸಿಎಂ ಬೊಮ್ಮಾಯಿ ಅವರು ಇತ್ತ ಗಮನಹರಿಸಿ ತಮ್ಮ ಸಮಸ್ಯೆಗೆ ಪರಿಹಾರ ನೀಡಲಿ ಎನ್ನುವ ಮನವಿ ಗ್ರಾಮಸ್ಥರದ್ದಾಗಿದೆ. ಸಕಾರಕ್ಕೆ ನೂರಾರು ಬಾರಿ ಗ್ರಾಮಸ್ಥರುಮನವಿ ಕೊಟ್ಟು ಕೊಟ್ಟು ಸುಸ್ತಾಗಿ ಹೋಗಿದ್ದಾರೆ. ಏನಿದು ಸೊಸೈಟಿ ಚೇರ್ಮನ್?
ಗಲಗಿನಗಟ್ಟಿ ಸಾವಿರ ಜನಸಂಖ್ಯೆಗೂ ಕಡಿಮೆ ಇರುವ ಹಳ್ಳಿ. ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಬಿಟ್ಟರೆ ಈ ಊರಿಗೆ ಸರ್ಕಾರಿ ಸೌಲಭ್ಯಗಳು ಅಷ್ಟಕ್ಕಷ್ಟೇ. ಇಂತಿಪ್ಪ ಕಾಡಿಗೆ ಅಂಟಿಕೊಂಡಿರುವ ಹಳ್ಳಿಯ ಭೂಮಿಯನ್ನು 1964ಕ್ಕೂ ಮುಂಚೆಯೇ ಕೃಷಿ ಸಹಕಾರ ಸಂಘ ಸ್ಥಾಪಿಸಿ ಸಂಘಕ್ಕೆ ಪಡೆದು ಉಳುಮೆ ಮಾಡಿ ರೈತರು ಬದುಕು ಕಟ್ಟಿಕೊಂಡಿದ್ದರು.ಕಾಲಾಂತರದಲ್ಲಿ ಊಳುವವನೆ ಹೊಲದೊಡೆಯ ಕಾನೂನು ಬಂದು ಹೋಯಿತು. ಸೊಸೈಟಿ ಭೂಮಿ ಸತತ ದಶಕಗಳ ಕಾಲ ಉಳುಮೆ ಮಾಡಿದರೂ ರೈತರ ಪರ ಆಗಲೇ ಇಲ್ಲ. ಇಂದಿಗೂ ಅವರ ಪಹಣಿ ಪತ್ರಗಳಲ್ಲಿ ಸರ್ಕಾರಿ ಜಮೀನು ಎಂದೇ ಉಲ್ಲೇಖವಾಗುತ್ತಿದ್ದು, ಈ ಭೂಮಿಯ ಮೇಲೆ ದಶಕಗಳ ಕಾಲ ಉಳುಮೆ ಮಾಡಿದ ರೈತರ ಹೆಸರು ಸ್ವಂತ ಹಕ್ಕು ಉಲ್ಲೇಖವಾಗುತ್ತಲೇ ಇಲ್ಲ. ಇಚ್ಛಾಶಕ್ತಿ ಕೊರತೆ
ಸರ್ಕಾರ ರಾಜ್ಯದ ಪ್ರತಿಯೊಬ್ಬ ಪಹಣಿದಾರನಿಗೂ ಮನೆ ಮನೆಗೆ ಹೋಗಿ ಕಂದಾಯ ಇಲಾಖೆಯ ಪಹಣಿ ಪತ್ರ, ಜಾತಿ, ಆದಾಯ ಪ್ರಮಾಣ ಪತ್ರ ಅಷ್ಟೇ ಅಲ್ಲ ನಕ್ಷೆಗಳನ್ನು ಸಹ ನೀಡುತ್ತಿದೆ. ಆದರೆ 50 ವರ್ಷಗಳ ಕಾಲ ಭೂಮಿಯನ್ನು ಉಳುಮೆ ಮಾಡಿದ್ದರೂ ಇವರ ಪಹಣಿ ಪತ್ರಗಳಲ್ಲಿ ಇಂದಿಗೂ ಮಾಲೀಕರು ಚೇರ್ಮನ್ ಗಲಗಿನಗಟ್ಟಿ ಫಾರ್ಮಿಂಗ್ ಕೋ ಸೊಸೈಟಿ ಎಂದೇ ಇದೆ. ರಾಜಕೀಯ ಇಚ್ಛಾಶಕ್ತಿ ಇದ್ದರೆ ಸರ್ಕಾರಕ್ಕೆ ಇದೇನು ದೊಡ್ಡ ಕೆಲಸವಲ್ಲ. ತಾಂಡಾಗಳನ್ನೇ ಗ್ರಾಮಗಳನ್ನಾಗಿ ಮಾಡುವ, ಜುಮ್ಮಾಬಾನೆ,ಅರಣ್ಯ ಭೂಮಿ ಸಕ್ರಮ, ಇನಾಂ ಭೂಮಿ ಮರು ವಿತರಣೆಯಂತಹ ಕಾರ್ಯ ಸರ್ಕಾರದಿಂದ ನಡೆದಿರುವಾಗ ಈ ಸಮಸ್ಯೆಗೂ ಪರಿಹಾರ ಸಿಕ್ಕಬಹುದು ಎನ್ನುವ ಆಶಾಭಾವದಲ್ಲಿದ್ದಾರೆ ಈ ರೈತರು. ನಮ್ಮ ಅಜ್ಜ, ಮುತ್ತಜ್ಜ ಮುಗಿದು ತಂದೆಯವರ ಕಾಲವೂ ಮುಗಿಯಿತು. ಇದೀಗ ನಾವು ಕೃಷಿ ಮಾಡಿ ಜೀವನ ಮಾಡುತ್ತಿದ್ದೇವೆ. ನಮಗೂ ಇದು ಸ್ವಂತ ಜಮೀನು ಎನ್ನಿಸುತ್ತಲೇ ಇಲ್ಲ. ಯಾವಾಗ ಸರ್ಕಾರ ಇದನ್ನು ಕಿತ್ತುಕೊಳ್ಳುತ್ತದೆ ಎನ್ನುವ ಆತಂಕ ಕಾಡುತ್ತಿದೆ.
ಶಿವಾನಂದ ಗೌಳಿ, ಗಲಗಿನಗಟ್ಟಿ ಯುವ ರೈತ. ಡಾ|ಬಸವರಾಜ ಹೊಂಗಲ್