ಬೆಂಗಳೂರು: ಆರೆಸ್ಸೆಸ್ ಕಾರ್ಯಕರ್ತ ಆರ್. ರುದ್ರೇಶ್ ಹತ್ಯೆ ಪ್ರಕರಣದ 5ನೇ ಆರೋಪಿ ಆಸೀಂ ಶರೀಫ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ಆಗಸ್ಟ್ 1ಕ್ಕೆ ತೀರ್ಪು ಕಾಯ್ದಿರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ತನ್ನ ವಿರುದ್ಧ ಮಾಡಿರುವ ಆರೋಪಗಳನ್ನು ಕೈಬಿಡುವಂತೆ ಕೋರಿ ಆಸೀಂ ಶರೀಫ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎನ್.ಕೆ. ಸುಧೀಂದ್ರರಾವ್ ವಾದ-ಪ್ರತಿವಾದ ಆಲಿಸಿದ ಬಳಿಕ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿ ಶುಕ್ರವಾರ ಆದೇಶಿಸಿದರು.
ವಿಚಾರಣೆ ವೇಳೆ ವಾದ ಮಂಡಿಸಿದ ಎನ್‌ಐಎ ವಕೀಲರು, ಈಗಾಗಲೇ ಆರೋಪಿಯ ಮನವಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯ ತಳ್ಳಿ ಹಾಕಿದೆ. ಅಲ್ಲದೇ ಆರೋಪಿ ತಾನು ಪಾಪುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ಸದಸ್ಯ ಎಂದು ಒಪ್ಪಿಕೊಂಡಿದ್ದಾನೆ. ಮೇಲಾಗಿ ಫೋನ್ ಕರೆ ಮತ್ತು ಎಸ್‌ಎಂಎಸ್‌ಗಳನ್ನು ಸಹ ಒಪ್ಪಿಕೊಂಡಿದ್ದಾನೆ. ಜತೆಗೆ ತನಗೆ ಪಥಸಂಚಲನದ ಬಗ್ಗೆ ಮಾಹಿತಿ ಇತ್ತು. ಆರೋಪಿ ಆಸೀಂ ಶರೀಫ್ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಸೈಯದ್ ಇಸ್ಮಾಯಿಲ್‌ನೊಂದಿಗೆ ಸಂಪರ್ಕ ಹೊಂದಿದ್ದ. ರುದ್ರೇಶ್ ಬಗ್ಗೆ ಆತನಿಗೆ ವೈಯುಕ್ತಿಕ ದ್ವೇಷ ಇರಲಿಲ್ಲ. ಆತನ ಸಂಘಟನೆ ಮತ್ತು ಸಿದ್ಧಾಂತಕ್ಕಾಗಿ ಕೊಲೆ ಮಾಡಲಾಗಿದೆ. ಇದೊಂದು ಪೂರ್ವಯೋಜಿತ ಕೃತ್ಯ. ಹಾಗಾಗಿ ಆರೋಪಿತನ ವಿರುದ್ಧದ ಆರೋಪಗಳನ್ನು ಕೈಬಿಡಬಾರದು ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು.
ಆರೆಸ್ಸೆಸ್ ಪಥಸಂಚಲನ ಮುಗಿಸಿಕೊಂಡು ಸ್ನೇಹಿತರೊಂದಿಗೆ ಮಾತನಾಡುತ್ತ ಶಿವಾಜಿನಗರದ ಕಾಮರಾಜ್ ರಸ್ತೆಯಲ್ಲಿ ನಿಂತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಮುಸುಕಧಾರಿಗಳು ಮಾರಕಾಸ್ತ್ರಗಳಿಂದ ಹಲ್ಲೆಗೈದು 2016ರ ಅ.16ರಂದು ರುದ್ರೇಶ್‌ನನ್ನು ಹತ್ಯೆ ಮಾಡಿದ್ದರು. ಈ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಬಳಿಕ ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸಲಾಗಿತ್ತು. ವಿಚಾರಣೆ ನಡೆಸಿದ ಎನ್‌ಐಎ ದೋಷಾರೂಪಣ ಪಟ್ಟಿ ಸಲ್ಲಿಸಿತ್ತು. ತನ್ನ ವಿರುದ್ಧ ಎನ್‌ಎಐ ಮಾಡಿರುವ ಆರೋಪಗಳನ್ನು ಕೈಬಿಡುವಂತೆ ಆಸೀಂ ಶರೀಫ್ ಸಲ್ಲಿಸಿದ ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯ ತಳ್ಳಿ ಹಾಕಿತ್ತು. ಇದನ್ನು ಪ್ರಶ್ನಿಸಿ ಆತ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಶುಕ್ರವಾರ ವಿಚಾರಣೆ ಪೂರ್ಣಗೊಳಿಸಿದ ಹೈಕೋರ್ಟ್ ನ್ಯಾಯಪೀಠ, ತೀರ್ಪು ಕಾಯ್ದಿರಿಸಿತು.