ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣೆ ಆಡಳಿತಾರೂಢ ಬಿಜೆಪಿಗೂ ಪ್ರತಿಪಕ್ಷ ಕಾಂಗ್ರೆಸ್ ಗೂ ಪ್ರತಿಷ್ಠೆಯ ಕದನವಾಗಿದೆ. ಎರಡೂ ಪಕ್ಷಗಳು ಶತಾಯಗತಾಯ ಆರ್.ಆರ್.ನಗರದಲ್ಲಿ ಗೆಲುವು ಸಾಧಿಸಲು ತಯಾರಿ ನಡೆಸುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ನೇರವಾಗಿ ಅಖಾಡಕ್ಕೆ ಇಳಿದಿದ್ದು, ನಾನೇ ಅಭ್ಯರ್ಥಿ ಎಂದು ತಿಳಿದು ಮತ ಹಾಕಿ ಎಂದು ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದಾರೆ.
ಯಾರಿಗೆ ಕೈ ಟಿಕೆಟ್
ತುಮಕೂರಿನ ಶಿರಾ ಕ್ಷೇತ್ರದಲ್ಲಿ ಟಿ.ಬಿ ಜಯಚಂದ್ರಗೆ ಟಿಕೆಟ್ ನೀಡಿರುವ ಕಾಂಗ್ರೆಸ್ ಸದ್ಯ ಆರ್.ಆರ್. ನಗರ ಕ್ಷೇತ್ರದತ್ತ ಸಂಪೂರ್ಣ ಗಮನಹರಿಸಿದೆ. ಹಿರಿಯ ನಾಯಕ ರಾಮಲಿಂಗಾರೆಡ್ಡಿ ನೇತೃತ್ವದಲ್ಲೇ ಸಮಿತಿ ಮಾಡಿರುವ ಕೈ ಪಡೆ ಅಭ್ಯರ್ಥಿ ಅಂತಿಮಗೊಳಿಸುವ ಬಗ್ಗೆ ಚರ್ಚೆ ನಡೆಸುತ್ತಿದೆ. ಇಂದು ನಡೆದ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಡಿಕೆ ಸುರೇಶ್, ಚೆಲುವರಾಯಸ್ವಾಮಿ, ಟಿಕೆಟ್ ಆಕಾಂಕ್ಷಿ ಬಾಲಕೃಷ್ಣ ಇದ್ದರು.
ಇದನ್ನೂ ಓದಿ:ಆರ್.ಆರ್ ನಗರಕ್ಕೆ ಕೈ ಅಭ್ಯರ್ಥಿ ಬಹುತೇಕ ಅಂತಿಮ: ಕುತೂಹಲ ಕೆರಳಿಸಿದ ಹಿರಿಯ ನಾಯಕರ ಸಭೆ
ಮಾಗಡಿ ಬಾಲಕೃಷ್ಣ ಅವರನ್ನೇ ಆರ್.ಆರ್. ನಗರ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಲಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇಂದಿನ ಸಭೆಯಲ್ಲಿ ಬಾಲಕರಷ್ಣ ಅಲ್ಲದೆ ರಕ್ಷಾ ರಾಮಯ್ಯ ಮತ್ತು ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಪತ್ನಿ ಕುಸುಮಾ ರವಿ ಬಗ್ಗೆಯೂ ಚರ್ಚೆಯಾಗಿದೆ.
ಸದ್ಯ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಇಬ್ಬರೂ ಬೆಳಗಾವಿ ಪ್ರವಾಸದಲ್ಲಿದ್ದು, ಶನಿವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ನಂತರ ರಾಮಲಿಂಗ ರೆಡ್ಡಿ ಸಮಿತಿ ಜೊತೆ ಚರ್ಚಿಸಿ ಅಭ್ಯರ್ಥಿಯ ಬಗ್ಗೆ ಅಂತಿಮ ನಿರ್ಧಾರ ಮಾಡಬಹುದು.