Advertisement

ಅಶ್ವಿ‌ನ್‌ಗೆ ಗಾಯ; ಭಾರತಕ್ಕೆ ಆತಂಕ

06:00 AM Jul 28, 2018 | Team Udayavani |

ಚೇಮ್ಸ್‌ಫೋರ್ಡ್‌: ಅತ್ತ ಲೆಗ್‌ಸ್ಪಿನ್ನರ್‌ ಆದಿಲ್‌ ರಶೀದ್‌ ನಿವೃತ್ತಿ ತೊರೆದು ಮರಳಿ ಇಂಗ್ಲೆಂಡ್‌ ಟೆಸ್ಟ್‌ ತಂಡವನ್ನು ಸೇರಿಕೊಂಡರೆ, ಇತ್ತ ಭಾರತದ ಪ್ರಧಾನ ಸ್ಪಿನ್ನರ್‌ ಆರ್‌. ಅಶ್ವಿ‌ನ್‌ ಗಾಯಾಳಾಗಿ ಟೆಸ್ಟ್‌ ಸರಣಿಗೂ ಮೊದಲೇ ಆತಂಕ ಮೂಡಿಸಿದ್ದಾರೆ. ಅಭ್ಯಾಸದ ವೇಳೆ ಬಲಗೈಗೆ ಪೆಟ್ಟು ಮಾಡಿಕೊಂಡ ಅಶ್ವಿ‌ನ್‌ ಎಸೆಕ್ಸ್‌ ವಿರುದ್ಧದ ಅಭ್ಯಾಸ ಪಂದ್ಯದಿಂದ ದೂರವೇ ಉಳಿದಿದ್ದಾರೆ. 

Advertisement

ಸರಣಿಯ ಮೊದಲ ಟೆಸ್ಟ್‌ ಪಂದ್ಯ ಆ. ಒಂದರಿಂದ ಆರಂಭವಾಗಲಿದ್ದು, ಅಶ್ವಿ‌ನ್‌ ಗಾಯಾಳಾಗಿರುವುದು ತಂಡದ ಆಡಳಿತ ಮಂಡಳಿಯ ಚಿಂತೆಗೆ ಕಾರಣವಾಗಿದೆ. ಈಗಾಗಲೇ ಜಸ್‌ಪ್ರೀತ್‌ ಬುಮ್ರಾ ಮತ್ತು ಭುವನೇಶ್ವರ್‌ ಕುಮಾರ್‌ ಗಾಯಾಳಾಗಿ ಸರಣಿಯಿಂದ ಹೊರಗುಳಿದಿರುವುದರಿಂದ ಟೀಮ್‌ ಇಂಡಿಯಾ ಬೌಲಿಂಗ್‌ ಸಮಸ್ಯೆ ಯನ್ನು ಎದುರಿಸುತ್ತಿದೆ. ಈ ಸಾಲಿಗೆ ಅಶ್ವಿ‌ನ್‌ ಸೇರಿದರೆ ಟೀಮ್‌ಇಂಡಿಯಾದ ಬೌಲಿಂಗ್‌ ವಿಭಾಗ ಇನ್ನಷ್ಟು ದುರ್ಬಲ ಗೊಳ್ಳಲಿದೆ. ಕುಲದೀಪ್‌ ಪ್ರಧಾನ ಸ್ಪಿನ್ನರ್‌ ಸದ್ಯ ಟೆಸ್ಟ್‌ ಪಂದ್ಯಗಳಲ್ಲಷ್ಟೇ ಸ್ಥಾನ ಪಡೆಯುತ್ತಿರುವ ಆರ್‌. ಅಶ್ವಿ‌ನ್‌ ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ಭಾರತವನ್ನು ಅಗ್ರ ಸ್ಥಾನಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇತ್ತೀಚೆಗೆ ಅತೀ ಕಡಿಮೆ ಟೆಸ್ಟ್‌ಗಳಲ್ಲಿ 300 ವಿಕೆಟ್‌ ಕಿತ್ತ ದಾಖಲೆಗೂ ಪಾತ್ರರಾಗಿದ್ದರು. ಸದ್ಯ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಮತ್ತು ಲೆಗ್‌ಸ್ಪಿನ್ನರ್‌ ಚಾಹಲ್‌ ಇರುವು ದರಿಂದ ಭಾರತ ಸಮಾಧಾನ ಪಡಬಹುದು. ಜಡೇಜ ಕೂಡ ಗಮನಾರ್ಹ ಸ್ಪಿನ್‌ ದಾಳಿ ಸಂಘ ಟಿಸುತ್ತಿದ್ದಾರೆ.

ಸ್ವಿಂಗ್‌ ಟ್ರ್ಯಾಕ್‌: ನಡೆದೀತೇ ಸ್ಪಿನ್‌ ?
ಇಂಗ್ಲೆಂಡ್‌ ಟ್ರ್ಯಾಕ್‌ಗಳು ಸ್ವಿಂಗ್‌ ಬೌಲಿಂಗಿಗೆ ಹೆಚ್ಚಿನ ನೆರವು ನೀಡು ವುದರಿಂದ ಇಬ್ಬರಿಗಿಂತ ಹೆಚ್ಚು ಸ್ಪಿನ್ನರ್‌ಗಳಿಗೆ ಅವಕಾಶ ಲಭಿಸುವ ಸಾಧ್ಯತೆ ಇಲ್ಲ. ಅಶ್ವಿ‌ನ್‌ ಎಜ್‌ಬಾಸ್ಟನ್‌ನ ಪ್ರಥಮ ಟೆಸ್ಟ್‌ಗೆ ಲಭ್ಯರಾಗದೇ ಹೋದಲ್ಲಿ ಕುಲದೀಪ್‌-ಚಾಹಲ್‌ ಭಾರತದ ಸ್ಪಿನ್‌ ದಾಳಿಯನ್ನು ನಿಭಾಯಿಸುವ ಸಾಧ್ಯತೆ ಹೆಚ್ಚಿದೆ. ಅಶ್ವಿ‌ನ್‌ ಗೈರಲ್ಲಿ ಕುಲದೀಪ್‌ ಅವರೇ ಟೀಮ್‌ ಇಂಡಿಯಾದ ಪ್ರಧಾನ ಸ್ಪಿನ್ನರ್‌ ಆಗಲಿದ್ದಾರೆ. ಅಶ್ವಿ‌ನ್‌ ಗಾಯಕ್ಕೆ ಸಂಬಂಧಿಸಿದಂತೆ ಈ ವರೆಗೆ ತಂಡದ ಆಡಳಿತ ಮಂಡಳಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಸಂಘಟಿತ ಬೌಲಿಂಗ್‌ ದಾಳಿ ಅಗತ್ಯ: ಮದನ್‌ಲಾಲ್‌
“ವೇಗಿಗಳು ಕ್ಲಿಕ್‌ ಆಗಬೇಕು, ತಂಡವಾಗಿ ಆಡಬೇಕು… ಆಗಷ್ಟೇ ಇಂಗ್ಲೆಂಡ್‌ ನೆಲದಲ್ಲಿ ಟೆಸ್ಟ್‌ ಪಂದ್ಯಗಳನ್ನು ಗೆಲ್ಲಲು ಸಾಧ್ಯ’ ಎಂಬುದಾಗಿ ಮಾಜಿ ವೇಗಿ, 1983ರ ವಿಶ್ವಕಪ್‌ ಹೀರೋ ಮದನ್‌ಲಾಲ್‌ ಹೇಳಿದ್ದಾರೆ. “ಕೀ ಬೌಲರ್‌ಗಳಾದ ಭುವನೇಶ್ವರ್‌ ಹಾಗೂ ಬುಮ್ರಾ ಈ ಸರಣಿಯಲ್ಲಿ ಆಡುತ್ತಿಲ್ಲ. ಹೀಗಾಗಿ ಇಶಾಂತ್‌, ಶಮಿ ಮತ್ತು ಉಮೇಶ್‌ ಯಾದವ್‌ ಪಾತ್ರ ನಿರ್ಣಾಯಕವಾಗಲಿದೆ. ಭಾರತದ ಬೌಲರ್‌ಗಳೆಲ್ಲರೂ ಸಂಘಟಿತ ದಾಳಿ ನಡೆಸಬೇಕು. 5 ದಿನಗಳ ಟೆಸ್ಟ್‌ ಪಂದ್ಯವನ್ನು ಕೇವಲ ಒಬ್ಬರಿಂದ ಅಥವಾ ಇಬ್ಬರಿಂದ ಗೆಲ್ಲಿಸಿಕೊಡಲು ಸಾಧ್ಯವಿಲ್ಲ’ ಎಂಬುದಾಗಿ ಮದನ್‌ಲಾಲ್‌ ಅಭಿಪ್ರಾಯಪಟ್ಟಿದ್ದಾರೆ.

“ಸಂಘಟಿತ ಹಾಗೂ ಸ್ಥಿರವಾದ ಬೌಲಿಂಗ್‌ ದಾಳಿಯನ್ನು ಭಾರತ ಕಾಯ್ದುಕೊಂಡು ಬರಬೇಕಾಗಿದೆ. ಒಂದು ಅವಧಿಯಲ್ಲಿ ಬೌಲಿಂಗ್‌ ಹಿನ್ನಡೆ ಕಂಡರೂ ಅದು ವ್ಯತಿರಿಕ್ತ ಪರಿಣಾಮ ಬೀರಲಿದೆ’ ಎಂದು 67ರ ಹರೆಯದ ಮದನ್‌ಲಾಲ್‌ ಎಚ್ಚರಿಸಿದ್ದಾರೆ. “81 ಟೆಸ್ಟ್‌ಗಳ ಅನುಭವಿ ಇಶಾಂತ್‌ ಭಾರತದ ಬೌಲಿಂಗ್‌ ವಿಭಾಗವನ್ನು ಯಶಸ್ವಿಯಾಗಿ ಮುನ್ನಡೆಸಬೇಕಿದೆ. 2014ರ ಇಂಗ್ಲೆಂಡ್‌ ಪ್ರವಾಸದ ವೇಳೆ ಭಾರತದ ಜಯದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಸಸೆಕ್ಸ್‌ ಕೌಂಟಿ ಪರ ಉತ್ತಮ ಪ್ರದರ್ಶನವನ್ನೂ ನೀಡಿದ್ದಾರೆ’ ಎಂದರು ಮದನ್‌ಲಾಲ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next