Advertisement

ರಾಜ್ಯದ 22 ತಾಲೂಕುಗಳಲ್ಲಿ ತೌಖ್ತೇಯಿಂದ ಅನಾಹುತ : ಹಾನಿ ಸಮೀಕ್ಷೆಗೆ ಸಚಿವ ಅಶೋಕ್‌ ಸೂಚನೆ

02:31 AM May 18, 2021 | Team Udayavani |

ಮಂಗಳೂರು/ಸಸಿಹಿತ್ಲು : ತೌಖ್ತೇ ಚಂಡಮಾರುತದಿಂದಾಗಿ ರಾಜ್ಯದ 22 ತಾಲೂಕುಗಳ 121 ಗ್ರಾಮಗಳಲ್ಲಿ ಹಾನಿ ಸಂಭವಿಸಿದೆ. ರಸ್ತೆ, ಬೆಳೆ, ಮನೆ, ವಿದ್ಯುತ್‌ ಇಲಾಖೆ ಸೇರಿದಂತೆ ಒಟ್ಟು ಹಾನಿಯ ಬಗ್ಗೆ ಜಿಲ್ಲಾವಾರು ಸಂಪೂರ್ಣ ವರದಿಯನ್ನು ಸರಕಾರಕ್ಕೆ ಕೂಡಲೇ ನೀಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಜತೆಗೆ ನಷ್ಟ ಅನುಭವಿಸಿದವರಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ.

Advertisement

ಚಂಡಮಾರುತದ ಹಿನ್ನೆಲೆಯಲ್ಲಿ ಸಮಸ್ಯೆ ಅನುಭವಿಸಿದ ದ.ಕ. ಜಿಲ್ಲೆಗೆ ಸೋಮವಾರ ಭೇಟಿ ನೀಡಿದ ಅವರು, ಸಸಿಹಿತ್ಲು ಕಡಲ್ಕೊರೆತ ಪ್ರದೇಶವನ್ನು ಪರಿಶೀಲಿಸಿ ಎನ್‌ಎಂಪಿಟಿ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು.

ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ 58.7 ಮಿ.ಮೀ. ವಾಡಿಕೆ ಮಳೆಯಾದರೆ ಈ ಬಾರಿ ಮೇಯಲ್ಲಿ ಬರೋಬ್ಬರಿ 219.5 ಮಿ.ಮೀ. ಮಳೆಯಾಗಿದೆ. ಚಂಡಮಾರುತ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 6 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು 168 ಮಂದಿ ಆಶ್ರಯ ಪಡೆಯುತ್ತಿದ್ದಾರೆ. 182 ಕುಟುಂಬಗಳಿಗೆ ಸಮಸ್ಯೆ ಆಗಿದ್ದು ಅವರಿಗೆ ತಲಾ 10 ಸಾವಿರ ರೂ. ಪರಿಹಾರ ಒದಗಿಸುವಂತೆ ಸೂಚಿಸಲಾಗಿದೆ. ದ.ಕ., ಉಡುಪಿ, ಉ.ಕ.ಜಿಲ್ಲಾಧಿಕಾರಿಗಳ ಬಳಿ ಒಟ್ಟು 106 ಕೋ.ರೂ. ಇದ್ದು ಇದನ್ನು ಪರಿಹಾರ ನೆಲೆಯಲ್ಲಿ ಬಳಸಲು ಸೂಚಿಸಲಾಗಿದೆ ಎಂದರು.

ನೀರು ನುಗ್ಗಿದ ಮನೆಗೆ 10,000 ರೂ., ಭಾಗಶಃ ಹಾನಿಯಾದ ಮನೆಗೆ 1 ಲಕ್ಷ ರೂ. ಹಾಗೂ ಪೂರ್ಣ ಹಾನಿಯಾದ ಮನೆಗೆ 5 ಲಕ್ಷ
ರೂ. ಪರಿಹಾರ ನೀಡಲಾಗುವುದು ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್‌ಕುಮಾರ್‌, ಶಾಸಕರಾದ ಡಿ. ವೇದವ್ಯಾಸ ಕಾಮತ್‌, ಡಾ| ವೈ. ಭರತ್‌
ಶೆಟ್ಟಿ, ಉಮಾನಾಥ ಕೋಟ್ಯಾನ್‌, ಮೇಯರ್‌ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿ ಕಾರಿ ಡಾ| ರಾಜೇಂದ್ರ ಕೆ.ವಿ., ಜಿ.ಪಂ. ಸಿಇಒ ಡಾ| ಕುಮಾರ್‌ ಉಪಸ್ಥಿತರಿದ್ದರು.

Advertisement

ತನಿಖಾ ಆಯೋಗ ರಚನೆ; 10 ಲಕ್ಷ ರೂ. ಪರಿಹಾರ
ಸಚಿವ ಆರ್‌. ಅಶೋಕ್‌ ಮಾತನಾಡಿ, ಅರಬ್ಬಿ ಸಮುದ್ರದಲ್ಲಿ ಟಗ್‌ ದುರಂತ ಪ್ರಕರಣದ ಸಂಪೂರ್ಣ ತನಿಖೆಗಾಗಿ ದ.ಕ. ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ತನಿಖಾ ಆಯೋಗ ರಚಿಸಲು ಸೂಚಿಸಲಾಗಿದೆ. ಆಯೋಗವು ತನಿಖೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಲಿದೆ. ಪ್ರಕರಣದ ಬಗ್ಗೆ ಸಂಬಂಧಪಟ್ಟ ಕಂಪೆನಿಗಳು ಆರೋಪ ಪ್ರತ್ಯಾರೋಪ ಮಾಡುತ್ತಿವೆ. ಹೀಗಾಗಿ ಘಟನೆ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ. ವರದಿಯ ಬಳಿಕ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಮೃತಪಟ್ಟವರ ಕುಟುಂಬಕ್ಕೆ ಎಂಆರ್‌ಪಿಎಲ್‌ ವತಿಯಿಂದ ತಲಾ 10 ಲಕ್ಷ ರೂ. ಪರಿಹಾರ ನೀಡಲು ಸೂಚಿಸಲಾಗಿದೆ. ಮುಳುಗಡೆಯಾದ ಬೋಟ್‌ನಲ್ಲಿರುವ 20 ಸಾವಿರ ಲೀ. ಡೀಸೆಲ್‌ ಅನ್ನು ತತ್‌ಕ್ಷಣವೇ ಹೊರತೆಗೆದು ನೀರು ಕಲುಷಿತ ಆಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದರು.

ಕರಾವಳಿ: ಹಾನಿ ಪ್ರಮಾಣ
ದ.ಕ. ಜಿಲ್ಲೆಯ 28 ಗ್ರಾಮಗಳಲ್ಲಿ ಹಾನಿ ಸಂಭವಿಸಿದ್ದು, ಇಬ್ಬರು ಮೃತ ಪಟ್ಟಿದ್ದಾರೆ. 63 ಮನೆಗಳಿಗೆ ಭಾಗಶಃ, 24 ಮನೆಗಳಿಗೆ ಪೂರ್ಣ ಪ್ರಮಾಣದ ಹಾನಿ ಸಂಭವಿಸಿದೆ. ಉಡುಪಿ ಜಿಲ್ಲೆಯ 32 ಗ್ರಾಮಗಳಲ್ಲಿ ಹಾನಿ ಸಂಭವಿಸಿದ್ದು, ಓರ್ವ ಮೃತಪಟ್ಟಿದ್ದಾರೆ. 90 ಮನೆಗಳು ಭಾಗಶಃ, 7 ಮನೆಗಳು ಪೂರ್ಣ ಹಾನಿಗೀಡಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next