ಮೈಸೂರು: ನಾಯಕತ್ವ ಬದಲಾವಣೆ ವಿಚಾರವು ರಾಜ್ಯದಲ್ಲಿ ಮಾತ್ರ ಗಿರಿಗಿಟ್ಲೆ ಹೊಡೆಯುತ್ತಿದೆ. ದೆಹಲಿ ನಾಯಕರ ಮುಂದೆ ನಾಯಕತ್ವ ಬದಲಾವಣೆ ವಿಚಾರವೇ ಇಲ್ಲ ಎಂದು ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಯಾವುದೇ ತಪ್ಪು ಮಾಡದೆ ಅವರನ್ನು ಬದಲಾಯಿಸುವುದು ಸರಿಯಲ್ಲ. ಈ ಬಗ್ಗೆ ಕೇಂದ್ರದ ಐವರು ನಾಯಕರನ್ನು ಭೇಟಿ ಮಾಡಿದ್ದೇನೆ. ಅವರು ಈ ವಿಚಾರರವನ್ನು ನಿರಾಕರಿಸಿದ್ದಾರೆ ಎಂದರು.
ಒಕ್ಕಲಿಗರ ನಿಗಮ ಪ್ರಾಧಿಕಾರ ರಚನೆ ವಿಚಾರ ಗಾಳಿಯಲ್ಲಿ ಹೊಡೆದ ಗುಂಡಲ್ಲ, ನಿಜವಾದ ಗುಂಡು. ನಾನು ಈ ಬಗ್ಗೆ ಸಿಎಂ ಅವರ ಜತೆ ಚರ್ಚೆ ಮಾಡಿದ್ದೇನೆ. ಯಡಿಯೂರಪ್ಪ ಅವಧಿಯಲ್ಲೇ ಒಕ್ಕಲಿಗರ ಪ್ರಾಧಿಕಾರ ಆಗಲಿದೆ. ಈ ಸಂಬಂಧ ಸಮಾಜದ ಮುಖಂಡರು, ಸ್ವಾಮೀಜಿಗಳು, ಸಂಘ ಸಂಸ್ಥೆಯವರು ನನ್ನ ಜತೆ ಮಾತನಾಡಿದ್ದಾರೆ. ಈ ವಿಚಾರಕ್ಕೆ ನಾನು ಬದ್ದನಾಗಿದ್ದೇನೆ ಎಂದರು.
ಇದನ್ನೂ ಓದಿ:ಡಿಸಿ ರೋಹಿಣಿ ಸಿಂಧೂರಿ- ಶಾಸಕರ ಮುನಿಸಿಗೆ ಬಲಿಯಾದ ಜನಸ್ಪಂದನ ಕಾರ್ಯಕ್ರಮ!
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಅವರು, ಮುನಿರತ್ನ, ಎಂಟಿಬಿ ನಾಗರಾಜ್, ಶಂಕರ ಸೇರಿ ಹಲವರು ತ್ಯಾಗ ಮಾಡಿದ್ದಾರೆ. ಅದರಿಂದ ನಮ್ಮ ಸರ್ಕಾರ ಬಂದಿದೆ. ಅವರನ್ನು ಮಂತ್ರಿ ಮಾಡಬೇಕಾಗಿರುವುದು ನಮ್ಮ ಕರ್ತವ್ಯ. ಈ ಬಗ್ಗೆ ಯಡಿಯೂರಪ್ಪ ತೀರ್ಮಾನ ಮಾಡುತ್ತಾರೆ. ನಾವೂ ಸಹ ಹೈಕಮಾಂಡ್ ನಿರ್ದೇಶನಕ್ಕೆ ಕಾಯುತ್ತಿದ್ದೇವೆ ಎಂದು ಅಶೋಕ್ ಹೇಳಿದರು.