ಬೆಂಗಳೂರು: ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ದಿವಾಳಿಯಾಗಿದೆ ಬನ್ನಿ ಬನ್ನಿ ಎಂದು ಆಹ್ವಾನ ನೀಡುತ್ತಿದ್ದಾರೆ. ಅವರ ಪಕ್ಷದಲ್ಲಿ ಸ್ಪರ್ಧೆ ಮಾಡಲು ಅಭ್ಯರ್ಥಿಗಳಿಲ್ಲ. ಹಾಗಾಗಿ ಪಕ್ಷಕ್ಕೆ ಬನ್ನಿ ಬನ್ನಿ ಎಂದು ಅಧ್ಯಕ್ಷರೇ ಕರೆಯುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದರು.
ಡಿಕೆ ಶಿವಕುಮಾರ್ ಹೇಳಿಕೆಯನ್ನು ಗಮನಿಸಿದ್ದೇನೆ. ಅವರ ಹೇಳಿಕೆ ನೋಡಿದರೆ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳೇ ಇಲ್ಲ ಅನಿಸುತ್ತಿದೆ. ಕ್ಯಾಂಡಿಡೇಟ್ ಇಲ್ಲ ಬನ್ನಿ ಎಂದು ಹೇಳಿಕೆ ನೀಡುತ್ತಿದ್ದಾರೆ ಪಾಪ. ಹತಾಶರಾಗಿ ಕರೆಯುತ್ತಿದ್ದಾರೆ. 125 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಾರ್ಟಿಗೆ ಇಂತಹ ಹೀನಾಯ ಪರಿಸ್ಥಿತಿ ಬಂದಿದೆ ಎಂದರು.
ಇದನ್ನೂ ಓದಿ:ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ: ಎರಡು ಹಂತಗಳಲ್ಲಿ ಚುನಾವಣೆ
ಬಿಜೆಪಿಯಲ್ಲಿರುವವರು ಹೋಗಲು ಮನಸ್ಸು ಮಾಡಿದ್ದಾರೆಂಬ ಪ್ರಶ್ನೆಗೆ ಉತ್ತರಿಸಿ, ಇನ್ನೆಂದೂ ಕಾಂಗ್ರೆಸ್ ಹೋಗಬಾರದು ಎಂದು ನಮ್ಮಲ್ಲಿರುವ ಮನಸ್ಸು ಮಾಡಿದ್ದಾರೆ. ಮುದ್ದಹನುಮೇಗೌಡ, ಶಶಿಕುಮಾರ್ ಮುಂತಾದವರು ಬಿಜೆಪಿ ಸೇರ್ಪಡೆ ಆಗಿದ್ದಾರೆ. ಇನ್ನೇನಿದ್ದರೂ ಮುಂದಿನ ದಿನಗಳಲ್ಲಿ ಬಿಜೆಪಿ ಪರ್ವ. 17 ಜನರು ನಮ್ಮೊಂದಿಗೆ ವಿಲೀನವಾಗಿದ್ದಾರೆ. ಕಾಂಗ್ರೆಸ್ ಗೆ 15 ಜನರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇಲ್ಲ. ಅಧಿಕಾರ ಇದ್ದಾಗಲೇ ಉಳಿಸಿಕೊಳ್ಳಲು ಅವರಿಗೆ ಆಗಲಿಲ್ಲ. ಅಧಿಕಾರ ಹೋದಮೇಲೆ ಸಾಧ್ಯವೇ? ಎಂದು ಟಾಂಗ್ ನೀಡಿದರು.
ಹಳೆ ಮೈಸೂರು ಭಾಗ, ಮಂಡ್ಯದಿಂದಲೂ ಮತ್ತಷ್ಟು ಜನ ಪಕ್ಷ ಸೇರ್ಪಡೆ ಆಗಲಿದ್ದಾರೆ. ಬಿಜೆಪಿಗೆ ಎಲ್ಲರೂ ಸೇರುತ್ತಾರೆ. ಯಾರೂ ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಸಮ್ಮನೆ ಅಪಪ್ರಚಾರ ಮಾಡುತ್ತಿದೆ ಎಂದು ಅಶೋಕ್ ಹೇಳಿದರು