ಬೆಂಗಳೂರು: ರಾಜ್ಯದ ಮೂರು ವಿಧಾನ ಸಭಾ ಕ್ಷೇತ್ರಗಳ ಉಪಚುನಾವಣೆ ಯಲ್ಲಿ ಕಾಂಗ್ರೆಸ್ ಹಣದ ಹೊಳೆ ಹರಿಸಿ ವಿಜಯ ಸಾಧಿಸಿದೆ. ಜೊತೆಗೆ ಜನರು ಕೂಡ ಅಭಿವೃದ್ಧಿಯಿಂದ ವಂಚಿತರಾಗುತ್ತೇವೆ ಎಂಬ ದೃಷ್ಟಿಯಿಂದ ಕಾಂಗ್ರೆಸ್ಗೆ ಮತ ಹಾಕಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 3 ಕ್ಷೇತ್ರಗಳ ಉಪಚುನಾವಣೆಯಲ್ಲಿ ಜನರು ನೀಡಿದ ತೀರ್ಪಿಗೆ ತಲೆಬಾಗುತ್ತೇನೆ. ಶಿಗ್ಗಾವಿ, ಚನ್ನಪಟ್ಟಣದಲ್ಲಿ ಕೊನೇ ಗಳಿಗೆಯಲ್ಲಿ ಅಭ್ಯರ್ಥಿಯನ್ನು ತೀರ್ಮಾನಿಸ ಲಾಗಿತ್ತು. ಇದು ನಮಗೆ ನಕಾರಾತ್ಮಕವಾಗಿ ಪರಿಣಮಿಸಿದೆ. ಸಂಡೂರಿನಲ್ಲಿ ಉತ್ತಮ ಸ್ಪರ್ಧೆ ನೀಡಲಾಗಿದೆ ಎಂದರು.
ನಿಖೀಲ್ ಕುಮಾರಸ್ವಾಮಿ 2 ಬಾರಿ ಸೋತಿದ್ದಾರೆ ಎಂಬ ಅನುಕಂಪವಿದ್ದು, ಈ ಬಾರಿ ಗೆಲ್ಲುವ ನಿರೀಕ್ಷೆ ಇತ್ತು. ಪಾಪ ನಿಖೀಲ್ ಅವರ ಅದೃಷ್ಟವೇ ಸರಿಯಿಲ್ಲ. ಏನೇ ಆದರೂ ಜನರ ಮತವನ್ನು ಸ್ವೀಕರಿಸಲೇಬೇಕು ಎಂದು ನುಡಿದರು.
ಇದು ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಅವರ ಗೆಲುವಲ್ಲ. ಈ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಣದ ಹೊಳೆ ಹರಿಸಿದೆ. ಅಧಿಕಾರಿಗಳು, ಗುತ್ತಿಗೆದಾರರು ಸರ್ಕಾರದ ಪರವಾಗಿ ಕೆಲಸ ಮಾಡಿದ್ದಾರೆ. ಜನರು ಕೂಡ ಅಭಿವೃದ್ಧಿಯಿಂದ ವಂಚಿತರಾಗುತ್ತೇವೆ ಎಂಬ ಭಯದಿಂದ ಮತ ಹಾಕುತ್ತಾರೆ ಎಂದರು.
ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಯಶಸ್ಸು ದೊರೆತಿದೆ. ಜಾರ್ಖಂಡ್ನಲ್ಲಿ ಮತ ಗಳಿಕೆ ಕಡಿಮೆಯಾಗಿದೆ. ಒಟ್ಟಾರೆಯಾಗಿ ಜನರ ಅಭಿಪ್ರಾಯವನ್ನು ಗೌರವಿಸುತ್ತೇವೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮುಸ್ಲಿಮರಿಗೆ ಮೀಸಲಾತಿ ಕೊಡುವ ಬಗ್ಗೆ ಹೇಳಿತ್ತು. ಆದರೆ ಜನರು ಅವರನ್ನು ತಿರಸ್ಕರಿಸಿದ್ದಾರೆ
ಎಂದರು.