ಬೆಂಗಳೂರು: ಸಿದ್ದರಾಮಯ್ಯ ಮತ್ತು ಅಶೋಕ್ ಪಟ್ಟಣ್ ನ ಪಿಸು ಮಾತುಗಳು ಮಾಧ್ಯಮಗಳಿಂದ ಗೊತ್ತಾಗಿದೆ. ಪಾದಯಾತ್ರೆಯನ್ನು ಡಿ ಕೆ ಶಿವಕುಮಾರ್ ವ್ಯಯಕ್ತಿಕ ವರ್ಚಸ್ಸಿಗಾಗಿ ಮಾಡಿದ್ದಾರೆ. ಇದರ ಬಗ್ಗೆ ನಾವು ಕೇಳಿದಾಗ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದಿದ್ದರು. ಆದರೆ ಈಗ ಇವರ ಮಾತಿಂದಲೇ ಅವರ ಜಗಳ ಬೀದಿಗೆ ಬಂದಿದೆ ಎಂದು ಸಚಿವ ಆರ್. ಅಶೋಕ್ ಟೀಕೆ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ರಾಜ್ಯದ ಎಲ್ಲಾ ಕ್ಷೇತ್ರ ಗಳನ್ನು ಹಾಳು ಮಾಡುತ್ತಿದ್ದಾರೆಂಬ ಮಾತು ಸಿದ್ದರಾಮಯ್ಯರಿಂದಲೇ ಗೊತ್ತಾಗಿದೆ . ಇವರ ಈ ಒಳ ಜಗಳ ಬೇಗುದಿಯಿಂದ ಕಾಂಗ್ರೆಸ್ ನಲುಗಿ ಹೋಗಿದೆ. ತಿರುಕನ ಕನಸು ಕಾಣುವ ಅವರು ಈ ಒಳ ಜಗಳದಿಂದ ಆಚೆ ಬಂದರೆ ಸಾಕು ಎಂದರು.
ಬಿಜೆಪಿಯ ರಾಮದಾಸ್ ಹಾಗೂ ಪ್ರತಾಪ್ ಸಿಂಹ ನಡುವೆ ಜಟಾಪಟಿಯ ಬಗ್ಗೆ ಮಾತನಾಡಿದ ಅಶೊಕ್, “ಅದು ಅಭಿವೃದ್ಧಿಯ ಜಗಳವೇ, ಹೊರತು ಪಕ್ಷದದ ಜಗಳವಲ್ಲ” ಎಂದರು. ನಿಮ್ಮ ಪಕ್ಷದಲ್ಲಿ ಒಳ ಜಗಳವಿಲ್ಲವೇ, ಸಚಿವರ ಮೇಲೆ ನಿಮ್ಮ ಶಾಸಕರು ದೂರು ಕೊಟ್ಟಿದ್ದಾರೆಂಬ ಪ್ರಶ್ನೆಗೆ ಅಶೋಕ್ ಮೌನವಾದರು.
ಇದನ್ನೂ ಓದಿ:ಮೈಸೂರಿನಲ್ಲಿ ನಡೆದಿದ್ದು ಅಭಿವೃದ್ದಿ ಚರ್ಚೆಯಷ್ಟೇ; ಸಂಸದ-ಶಾಸಕರ ಜಟಾಪಟಿಗೆ ಸಿಎಂ ಸಮರ್ಥನೆ
ವೆಹಿಕಲ್ ಟೋಯಿಂಗ್ ವಿಚಾರದಲ್ಲಿ ಪೊಲೀಸರು, ಜನಸಾಮಾನ್ಯರ ನಡುವೆ ಘರ್ಷಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಾಧ್ಯಮಗಳಲ್ಲಿ ಹಲವು ಪ್ರಕರಣಗಳನ್ನು ನೋಡಿದ್ದೇವೆ. ಕೆಲವೆಡೆ ಟೋಯಿಂಗ್ ಮಾಡುವ ವಿಚಾರದಲ್ಲಿ ಬೇಕಾಬಿಟ್ಟಿ ಆಡುತ್ತಿದ್ದಾರೆ. ಈಗಾಗಲೇ ರವಿಕಾಂತೇಗೌಡ ಜೊತೆ ಮಾತುಕತೆ ನಡೆಸಿದ್ದೇವೆ. ಸೋಮವಾರ ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇವೆ. ಬೆಂಗಳೂರಿನಲ್ಲಿ ಆಗುತ್ತಿರುವ ಘಟನೆಗಳ ಬಗ್ಗೆ ಸೂಕ್ತ ನಿರ್ದೇಶನ ಕೊಡುತ್ತೇವೆ ಎಂದರು.