Advertisement

ಹತ್ತಂಕದಿಂದ ಆತಂಕ ದೂರ: ಅಶ್ವಿ‌ನ್‌

05:26 AM Apr 18, 2019 | mahesh |

ಮೊಹಾಲಿ: ಮಂಗಳವಾರ ರಾತ್ರಿ ತವರಿನಂಗಳದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 12 ರನ್‌ ಗೆಲುವು ಸಾಧಿಸಿದ ಬಳಿಕ ಪ್ರತಿಕ್ರಿಯಿಸಿದ ಕಿಂಗ್ಸ್‌ ಇಲೆವೆನ್‌ ತಂಡದ ನಾಯಕ ಆರ್‌. ಅಶ್ವಿ‌ನ್‌, 10 ಅಂಕ ಗಳಿಸಿದ ಖುಷಿಯನ್ನು ಹಂಚಿಕೊಂಡರು.

Advertisement

“ನಾವು ಸರಿಯಾದ ಸಮಯದಲ್ಲಿ 10 ಅಂಕ ಗಳಿಸಿ ಅಗ್ರ ನಾಲ್ಕರಲ್ಲಿದ್ದೇವೆ. ಒಂದು ಹಂತದ ಆತಂಕ ದೂರಾಗಿದೆ. ಇಲ್ಲಿ ಮೊತ್ತವನ್ನು ಉಳಿಸಿಕೊಳ್ಳುವುದು ಕಷ್ಟ. ಸೆಕೆಂಡ್‌ ಬ್ಯಾಟಿಂಗ್‌ ಮಾಡುವವರಿಗೆ ಈ ಪಿಚ್‌ ಉತ್ತಮ ನೆರವು ನೀಡುವುದು ವಾಡಿಕೆ. ನಿಜಕ್ಕಾದರೆ ನಮಗೆ 10-15 ರನ್ನುಗಳ ಕೊರತೆ ಕಾಡಿತ್ತು. ಆದರೆ ಅರ್ಶ್‌ದೀಪ್‌ ಮೊದಲ ಸ್ಪೆಲ್‌ನಲ್ಲಿ ಅಮೋಘ ಬೌಲಿಂಗ್‌ ಪ್ರದರ್ಶಿಸಿದರು’ ಎಂಬುದಾಗಿ ಅಶ್ವಿ‌ನ್‌ ಹೇಳಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌ 6 ವಿಕೆಟಿಗೆ 182 ರನ್‌ ಗಳಿಸಿದರೆ, ರಾಜಸ್ಥಾನ್‌ 7 ವಿಕೆಟಿಗೆ 170 ರನ್‌ ಮಾಡಲಷ್ಟೇ ಶಕ್ತವಾಯಿತು.

ಬಿನ್ನಿ ಪ್ರಯತ್ನ ವ್ಯರ್ಥ
ರಾಜಸ್ಥಾನದ ಅಗ್ರ ಕ್ರಮಾಂಕದ ಆಟಗಾರರು ಉತ್ತಮ ಹೋರಾಟ ಸಂಘಟಿಸಿದರೂ ರನ್‌ಗತಿಯಲ್ಲಿ ವೇಗವಿರಲಿಲ್ಲ. ಹೀಗಾಗಿ ಕೆಳ ಸರದಿಯ ಮೇಲೆ ಒತ್ತಡ ಬಿತ್ತು. ಕೊನೆಯಲ್ಲಿ ಸ್ಟುವರ್ಟ್‌ ಬಿನ್ನಿ 11 ಎಸೆತಗಳಿಂದ 33 ರನ್‌ ಸಿಡಿಸಿದರೂ ಪ್ರಯೋಜನವಾಗಲಿಲ್ಲ (2 ಬೌಂಡರಿ, 3 ಸಿಕ್ಸರ್‌). ಅಂತಿಮ ಓವರ್‌ನಲ್ಲಿ 23 ರನ್‌ ತೆಗೆಯುವ ಕಠಿನ ಸವಾಲು ಎದುರಾಯಿತು. ಇದಕ್ಕೆ ಮೊಹಮ್ಮದ್‌ ಶಮಿ ಅವಕಾಶ ಕೊಡಲಿಲ್ಲ. ಮೊದಲ ಎಸೆತದಲ್ಲೇ ಶ್ರೇಯಸ್‌ ಗೋಪಾಲ್‌ ಔಟಾದರು. ಮುಂದಿನದು ಡಾಟ್‌ ಬಾಲ್‌. ಉಳಿದ 4 ಎಸೆತಗಳಲ್ಲಿ ಬಿನ್ನಿ 10 ರನ್‌ ಹೊಡೆದರು (2, 2, 2, 4).  ಆರಂಭಕಾರ ರಾಹುಲ್‌ ತ್ರಿಪಾಠಿ 50 ರನ್‌ ಹೊಡೆ ದರೂ ಇದಕ್ಕೆ 45 ಎಸೆತ ತೆಗೆದುಕೊಂಡರು. ಸಿಡಿ ಸಿದ್ದು 4 ಬೌಂಡರಿ ಮಾತ್ರ. ಇದು 8 ಪಂದ್ಯಗಳಲ್ಲಿ ರಾಜ ಸ್ಥಾನ್‌ ರಾಯಲ್ಸ್‌ಗೆ ಎದುರಾದ 6ನೇ ಸೋಲು. ಅಂಕಪಟ್ಟಿಯಲ್ಲಿ ಅದು ಆರ್‌ಸಿಬಿಗಿಂತ ಒಂದು ಸ್ಥಾನ ಮೇಲಿದೆ.

ಬಟ್ಲರ್‌ಗೆ ಪ್ರತ್ಯೇಕ ಯೋಜನೆ
“ಅಪಾಯಕಾರಿ ಜಾಸ್‌ ಬಟ್ಲರ್‌ ವಿರುದ್ಧ ನಾವು ಪ್ರತ್ಯೇಕ ಯೋಜನೆ ರೂಪಿಸಿದ್ದೆವು. ಇದನ್ನು ಅರ್ಶ್‌ದೀಪ್‌ ಯಶಸ್ವಿಗೊಳಿಸಿದರು. ಅವರು ಚೆಂಡನ್ನು ಎರಡೂ ರೀತಿಯಲ್ಲಿ ಸ್ವಿಂಗ್‌ ಮಾಡಿದ್ದು ಪವರ್‌ ಪ್ಲೇ ಅವಧಿಯಲ್ಲಿ ಲಾಭ ತಂದಿತು. ಚೆನ್ನೈನ ದೀಪಕ್‌ ಚಹರ್‌ ಇದೇ ರೀತಿಯ ಬೌಲಿಂಗ್‌ ನಡೆಸಿ ಯಶಸ್ಸು ಕಾಣುತ್ತಿದ್ದಾರೆ. ಮುಜೀಬ್‌ ಕೂಡ ಜಾಣ್ಮೆಯ ಬೌಲಿಂಗ್‌ ಪ್ರದರ್ಶಿಸಿದರು’ ಎಂದುದಾಗಿ ಅಶ್ವಿ‌ನ್‌ ಹೇಳಿದರು.

Advertisement

ಸಂಕ್ಷಿಪ್ತ ಸ್ಕೋರ್‌: ಪಂಜಾಬ್‌-6 ವಿಕೆಟಿಗೆ 182. ರಾಜಸ್ಥಾನ್‌-7 ವಿಕೆಟಿಗೆ 170 (ತ್ರಿಪಾಠಿ 50, ಬಿನ್ನಿ ಔಟಾಗದೆ 33, ಸ್ಯಾಮ್ಸನ್‌ 27, ರಹಾನೆ 26, ಬಟ್ಲರ್‌ 23, ಆರ್‌. ಅಶ್ವಿ‌ನ್‌ 24ಕ್ಕೆ 2, ಅರ್ಶ್‌ದೀಪ್‌ 43ಕ್ಕೆ 2, ಶಮಿ 46ಕ್ಕೆ 2). ಪಂದ್ಯಶ್ರೇಷ್ಠ: ಆರ್‌. ಅಶ್ವಿ‌ನ್‌.

ಕ್ಯಾಪ್‌ ಪಡೆದು ಹೊರಬಿದ್ದ ಹೆನ್ರಿಕ್ಸ್‌
ಪಂಜಾಬ್‌ ಈ ಪಂದ್ಯಕ್ಕಾಗಿ ಡೇವಿಡ್‌ ಮಿಲ್ಲರ್‌ ಬದಲು ಮೊಸಸ್‌ ಹೆನ್ರಿಕ್ಸ್‌ ಅವರನ್ನು ಆಡಿಸಲು ನಿರ್ಧರಿಸಿತ್ತು. ಹೆನ್ರಿಕ್ಸ್‌ಗೆ ಕ್ಯಾಪ್‌ ಕೂಡ ನೀಡಲಾಗಿತ್ತು. ಅಷ್ಟರಲ್ಲಿ ಗಾಯಾಳಾದ ಅವರು ಆಡುವ ಬಳಗದಿಂದ ಹೊರಗುಳಿಯುವ ಸಂಕಟಕ್ಕೆ ಸಿಲುಕಿದರು. ಮಿಲ್ಲರ್‌ ಪುನಃ ಒಳಬಂದರು!

2 ಸಿಕ್ಸರ್‌ಗಳ ಸಂಗತಿ
“ಗೆಲುವು ಕೇವಲ 2 ಸಿಕ್ಸರ್‌ಗಳ ಸಂಗತಿಯಾಗಿತ್ತು’ ಎಂದವರು ಪರಾಜಿತ ರಾಜಸ್ಥಾನ್‌ ತಂಡದ ನಾಯಕ ಅಜಿಂಕ್ಯ ರಹಾನೆ. “ಈ ಟ್ರ್ಯಾಕ್‌ನಲ್ಲಿ 182 ರನ್‌ ಬೆನ್ನಟ್ಟುವುದು ಅಸಾಧ್ಯವೇನೂ ಆಗಿರಲಿಲ್ಲ. ಇದು ಕೇವಲ 2 ಸಿಕ್ಸರ್‌ಗಳ ಸಂಗತಿಯಾಗಿತ್ತು. ಹೀಗಾಗಿ ಈ ಸೋಲಿಗೆ ಯಾರೂ ಭಾರೀ ಟೀಕೆ ಮಾಡಬೇಕಾದ ಅಗತ್ಯವಿಲ್ಲ’ ಎಂದರು.

ಎಕ್ಸ್‌ಟ್ರಾ ಇನ್ನಿಂಗ್ಸ್‌
ಪಂಜಾಬ್‌ ಕಳೆದ 5 ಪಂದ್ಯಗಳಲ್ಲಿ ರಾಜಸ್ಥಾನ್‌ ವಿರುದ್ಧ 4ನೇ ಜಯ ಸಾಧಿಸಿತು. ಇತ್ತಂಡಗಳ ನಡುವಿನ ಕಳೆದ 7 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ತಂಡವೇ 6 ಸಲ ಗೆದ್ದು ಬಂದಿತು.

ಆರ್‌. ಅಶ್ವಿ‌ನ್‌ ಐಪಿಎಲ್‌ನಲ್ಲಿ ಕೇವಲ 2ನೇ ಸಲ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಅಶ್ವಿ‌ನ್‌ ಔಟಾಗದೆ 17 ರನ್‌ ಮಾಡುವುದರ ಜತೆಗೆ 24 ರನ್ನಿಗೆ 2 ವಿಕೆಟ್‌ ಉರುಳಿಸಿದರು. ಅಶ್ವಿ‌ನ್‌ ಮೊದಲ ಸಲ ಪಂದ್ಯಶ್ರೇಷ್ಠರೆನಿಸಿದ್ದು 2010ರ ಕೆಕೆಆರ್‌ ಎದುರಿನ ಪಂದ್ಯದಲ್ಲಿ. ಆಗ ಅವರು ಚೆನ್ನೈ ತಂಡವನ್ನು ಪ್ರತಿನಿಧಿಸುತ್ತಿದ್ದರು. ಆ ಪಂದ್ಯದಲ್ಲಿ ಅಶ್ವಿ‌ನ್‌ 16 ರನ್ನಿಗೆ 3 ವಿಕೆಟ್‌ ಉರುಳಿಸಿದ್ದರು.

ಅಶ್ವಿ‌ನ್‌ ಕೇವಲ 4 ಎಸೆತಗಳಲ್ಲಿ 17 ರನ್‌ ಹೊಡೆದರು. ಸ್ಟ್ರೈಕ್‌ರೇಟ್‌ 425. ಇದು ಅತ್ಯುತ್ತಮ ಸ್ಟ್ರೈಕ್‌ರೇಟ್‌ನ ಜಂಟಿ ದಾಖಲೆ. ಕಳೆದ ವರ್ಷ ಚೆನ್ನೈ ವಿರುದ್ಧ ರಶೀದ್‌ ಖಾನ್‌ ಕೂಡ 4 ಎಸೆತಗಳಿಂದ 17 ರನ್‌ ಹೊಡೆದಿದ್ದರು.

ಸ್ಟುವರ್ಟ್‌ ಬಿನ್ನಿ 11 ಎಸೆತಗಳಿಂದ 33 ರನ್‌ ಮಾಡಿ ಅಜೇಯರಾಗಿ ಉಳಿದರು. ಸ್ಟ್ರೈಕ್‌ರೇಟ್‌ 300. ಇದು ರಾಜಸ್ಥಾನ್‌ ಪರ ದಾಖಲಾದ 2ನೇ ಅತ್ಯುತ್ತಮ ಸ್ಟ್ರೈಕ್‌ರೇಟ್‌ ಆಗಿದೆ (ಕನಿಷ್ಠ 10 ಎಸೆತಗಳ ಮಾನದಂಡ). ಕ್ರಿಸ್‌ ಮಾರಿಸ್‌ ಮತ್ತು ಕೆ. ಗೌತಮ್‌ ಜಂಟಿ ದಾಖಲೆ ಹೊಂದಿದ್ದಾರೆ (309.09).

ಆ್ಯಶrನ್‌ ಟರ್ನರ್‌ ಗೋಲ್ಡನ್‌ ಡಕ್‌ ಸಂಕಟಕ್ಕೆ ಸಿಲುಕಿದರು. ಇದರೊಂದಿಗೆ ಅವರು ಸತತ 3 ಟಿ20 ಪಂದ್ಯಗಳಲ್ಲಿ ಸೊನ್ನೆಗೆ ಔಟಾದಂತಾಯಿತು. ಇದಕ್ಕೂ ಮುನ್ನ ಬಿಬಿಎಲ್‌ ಸರಣಿಯ ಕೊನೆಯ ಪಂದ್ಯದಲ್ಲಿ ಹಾಗೂ ಭಾರತದೆದುರಿನ ವಿಶಾಖಪಟ್ಟಣ ಟಿ20 ಪಂದ್ಯದಲ್ಲಿ ಖಾತೆ ತೆರೆಯಲು ವಿಫ‌ಲರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next