ನವದೆಹಲಿ:ಜ್ಞಾನವಾಪಿ ಮಸೀದಿ ಬೆನ್ನಲ್ಲೇ ದೆಹಲಿಯ ಕುತುಬ್ ಮಿನಾರ್‌ನಲ್ಲೂ ಉತ್ಖನನ ನಡೆಸಲು ಕೇಂದ್ರ ಸಂಸ್ಕೃತಿ ಸಚಿವಾಲಯವು ಭಾರತೀಯ ಪುರಾತತ್ವ ಇಲಾಖೆಗೆ ನಿರ್ದೇಶನ ನೀಡಿದೆ ಎಂಬ ಸುದ್ದಿ ಭಾನುವಾರ ಹರಿದಾಡಿದ್ದು, ಅದನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ. ಸದ್ಯಕ್ಕೆ ಅಂತಹ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ.ಕೆ.ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಕುತುಬ್ ಮಿನಾರ್ ಇರುವ ಸ್ಥಳದಲ್ಲಿ ಹಿಂದೆ ಜೈನ ಮತ್ತು ಹಿಂದೂ ದೇಗುಲಗಳಿದ್ದವು ಎಂಬ ಆರೋಪ ಕೇಳಿಬಂದಿತ್ತು. ಶನಿವಾರ ಸಚಿವಾಲಯದ ಕಾರ್ಯದರ್ಶಿ ಗೋವಿಂದ್ ಮೋಹನ್ ಅಲ್ಲಿಗೆ ಭೇಟಿ ನೀಡಿದ್ದರು. ಇದರ ಬೆನ್ನಲ್ಲೇ ಅಲ್ಲಿ ಉತ್ಖನನ ಮತ್ತು ಸಮೀಕ್ಷೆಗೆ ಆದೇಶಿಸಲಾಗಿದೆ ಎಂಬ ಸುದ್ದಿ ಹರಿದಾಡಿತ್ತು.
ಈ ಎಲ್ಲ ಬೆಳವಣಿಗೆಗಳ ನಡುವೆ ಭಾನುವಾರ ಮಾತನಾಡಿರುವ ಗೋವಾ ಸಿಎಂ ಪ್ರಮೋದ್ ಸಾವಂತ್, ಈ ಹಿಂದೆ ನಾಶ ಮಾಡಲಾಗಿದ್ದ ಎಲ್ಲ ದೇವಾಲಯಗಳನ್ನೂ ಮರುಸ್ಥಾಪಿಸಬೇಕು. ನಮ್ಮ ರಾಜ್ಯದಲ್ಲಿ ಪೋರ್ಚುಗೀಸರಿಂದ ನಾಶವಾದ ದೇಗುಲಗಳ ನವೀಕರಣಕ್ಕೆ ಬಜೆಟ್‌ನಲ್ಲೇ ಘೋಷಿಸಿದ್ದೇವೆ ಎಂದಿದ್ದಾರೆ.
ಮತ್ತೊಂದು ಶಿವಲಿಂಗ:
ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಮತ್ತೊಂದು ಶಿವಲಿಂಗವಿದ್ದು, ಅಲ್ಲಿ ಪೂಜೆಗೆ ಅವಕಾಶ ಕೋರಿ ಜಿಲ್ಲಾ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದೇವೆ ಎಂದು ಕಾಶಿ ವಿಶ್ವನಾಥ ದೇಗುಲದ ಮಾಜಿ ಮಹಾಂತ ಕುಲಪತಿ ತಿವಾರಿ ಹೇಳಿದ್ದಾರೆ.