ಪುಣೆ: “ನಿಮ್ಮ ಮಕ್ಕಳಿಗೆ ವಿದ್ಯಾರ್ಥಿ ವೇತನ ಬೇಕೇ? ಹಾಗಾದರೆ ನೀವು ಮದ್ಯಪಾನ ತ್ಯಜಿಸಿ’ -ಇಂಥದ್ದೊಂದು ವಿಶೇಷ ಯೋಜನೆಯನ್ನು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಕರ್ಮಾಲ ತಾಲೂಕಿನಲ್ಲಿ ಆರಂಭಿಸಲಾಗಿದೆ.
ಮದ್ಯಪಾನ ವರ್ಜಿಸುವುದಾಗಿ ಈ ಸ್ವಾತಂತ್ರ್ಯ ದಿನದಂದು ಪ್ರಮಾಣ ಮಾಡುವ ಪೋಷಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವುದಕ್ಕೆ ತಾಲೂಕು ಪಂಚಾಯಿತಿ ಸಿದ್ಧವಾಗಿದ್ದು, ಇದಕ್ಕೆ ಹಲವು ಎನ್‌ಜಿಒಗಳು ಸಾಥ್ ಕೊಟ್ಟಿವೆ.
ಮದ್ಯಪಾನ ಮಾಡುತ್ತಿರುವವರು ಆ.15ರಂದು ಗ್ರಾಮದ ಜನತೆಯೆದುರು ಪ್ರಮಾಣ ಸ್ವೀಕರಿಸಬೇಕು. ಅವರು ಒಂದು ವರ್ಷದ ಕಾಲ ಮದ್ಯ ಸೇವನೆ ಮಾಡದೇ ಹೋದರೆ 2023ರ ಆ.15ರಂದು ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡಲಾಗುವುದು ಎಂದು ಬ್ಲಾಕ್ ಅಭಿವೃದ್ಧಿ ಅಧಿಕಾರಿ ಮನೋಜ್ ರಾವತ್ ತಿಳಿಸಿದ್ದಾರೆ.
ಇದನ್ನೂ ಓದಿ:ಶೀಘ್ರವೇ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಸಭೆ: ಸಿಎಂ ಬಸವರಾಜ ಬೊಮ್ಮಾಯಿ
ತಾಲೂಕಿನ 105 ಗ್ರಾಮಗಳಲ್ಲಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಅನೇಕರು ಪ್ರಮಾಣ ಸ್ವೀಕರಿಸಲು ಸಿದ್ಧರಾಗಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.