Advertisement
ವಿದೇಶಿ ಮರಳು ಪರಭಾರೆಗೆ ರೂಪಿಸಿದ್ದ ಮಾರ್ಗ ಸೂಚಿಯಲ್ಲಿ ಆಮದು ಮರಳನ್ನು ಮುಕ್ತವಾಗಿ ಲಾರಿಗಳಲ್ಲಿ ಸಾಗಿಸಲು ಅವಕಾಶ ನೀಡಿರಲಿಲ್ಲ. ಮರಳನ್ನು ಗೋಣಿಚೀಲಗಳಲ್ಲಿ ತುಂಬಿಸಿ ಪ್ಯಾಕ್ ಮಾಡಿ ಸಾಗಿಸಬೇಕು ಎಂದು ಸೂಚಿಸಲಾಗಿತ್ತು. ಇದು ವಿದೇಶಿ ಮರಳು ಸಾಗಾಟ, ಮಾರಾಟಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ಇದೀಗ ಈ ನಿಯಮ ಸರಳಗೊಳಿಸಿ ಗೋಣಿಚೀಲಗಳ ಬದಲು ಲಾರಿಗಳಲ್ಲಿ ಸಗಟು ಮಾರಾಟ ಮಾಡಲು ಸಚಿವ ಸಂಪುಟ ಅನುಮತಿ ನೀಡಿದೆ. ಕೇಂದ್ರ ಸರಕಾರದ ಮುಕ್ತ ಸಾಮಾನ್ಯ ಪರವಾನಿಗೆಯಲ್ಲಿ ಆಮದು ಮಾಡಿಕೊಂಡಿರುವ ಮಲೇಷ್ಯಾ ಮರಳು ನವಮಂಗಳೂರು ಬಂದರಿನಿಂದ ಹೊರಗೆ ಸಾಗಿಸಲು ಕರ್ನಾಟಕದಲ್ಲಿ ನೋಂದಣಿ ಸಮಸ್ಯೆ ಕೂಡ ಎದುರಾಗಿತ್ತು. ಸೆ. 24ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಮರಳು ಸಮಸ್ಯೆ ಕುರಿತಂತೆ ನಡೆಯುವ ಸಭೆಯಲ್ಲಿ ಇದು ಇತ್ಯರ್ಥಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಮರಳು ಅಭಾವ ಹಾಗೂ ಕಡಿಮೆ ದರದಲ್ಲಿ ಗ್ರಾಹಕರಿಗೆ ಮರಳು ಪೂರೈಸುವ ಉದ್ದೇಶದಿಂದ ವಿದೇಶದಿಂದ ಮರಳು ಆಮದು ಮಾಡಿಕೊಳ್ಳುವುದಕ್ಕೆ ಹಿಂದಿನ ಸಿದ್ದರಾಮಯ್ಯ ನೇತೃತ್ವದ ನಿರ್ಧಾರ ಕೈಗೊಂಡಿತ್ತು. ರಾಜ್ಯ ಸರಕಾರದ ನಿರ್ಧಾರದಂತೆ ಮೈಸೂರ್ ಸೇಲ್ಸ್ ಇಂಟರ್ ನೇಶನಲ್ ಸೇರಿದಂತೆ 6 ಸಂಸ್ಥೆಗಳಿಗೆ ಆಮದಿಗೆ ಪರವಾನಿಗೆ ನೀಡಲಾಗಿತ್ತು. ಸರಕಾರದ ತೀರ್ಮಾನದಂತೆ ಮೊತ್ತಮೊದಲ ಬಾರಿಗೆ ಮಂಗಳೂರು ಬಂದರು ಮೂಲಕ ಮಲೇಷ್ಯಾ ದೇಶದಿಂದ 5 ಲಕ್ಷ ಮೆ.ಟನ್ ಮರಳು ಆಮದು ಮಾಡಲು ಸರಕಾರ ಅನುಮತಿ ನೀಡಿ ಮರಳು ಸಾಗಾಟ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಈ ನೆಲೆಯಲ್ಲಿ ಚೆನ್ನೈ ಮೂಲದ ಆಕಾರ್ ಎಂಟರ್‌ಪ್ರೈಸಸ್ ಮೂಲಕ ಮಲೇಷ್ಯಾದಿಂದ ಮೊದಲ ಹಂತದಲ್ಲಿ 52,129 ಮೆ.ಟನ್ ಮರಳು ನವಮಂಗಳೂರು ಬಂದರಿಗೆ ಆಗಮಿಸಿತ್ತು. ಮಲೇಷ್ಯಾದ ಪಿಕೋನ್ ಬಂದರಿನಿಂದ ತೋರ್ ಇನ್ಪಿನಿಟ್ ಹೆಸರಿನ ಹಡಗು ಮರಳು ತುಂಬಿಕೊಂಡು ಡಿ. 5ರಂದು ವೇಳೆಗೆ ನವಮಂಗಳೂರು ಬಂದರಿಗೆ ಬಂದು ತಲುಪಿತ್ತು. ಮರಳನ್ನು ಬಂದರು ಯಾರ್ಡ್ ನಲ್ಲಿ ಸಂಗ್ರಹಿಸಿಡಲಾಗಿತ್ತು. ಇದಾದ ಬಳಿಕ ಇದೇ ಸಂಸ್ಥೆಗೆ ಸುಮಾರು 50,000 ಮೆ.ಟನ್ ಮರಳು ಮಲೇಷ್ಯಾದಿಂದ ನವಮಂಗಳೂರು ಬಂದರಿಗೆ ಆಗಮಿಸಿತ್ತು. ಪರವಾನಿಗೆ ಸಮಸ್ಯೆಯಿಂದಾಗಿ ಹೊರಗಡೆ ಸಾಗಿಸಲು ಸಾಧ್ಯವಾಗಿರಲಿಲ್ಲ. ಮಲೇಶ್ಯಾದಿಂದ ಐಎಸ್‌ಪಿ ಎಂಬ ಸಂಸ್ಥೆ ಈ ವರ್ಷದ ಜೂನ್ ತಿಂಗಳಿನಲ್ಲಿ ಮಲೇಶ್ಯಾದಿಂದ ಸುಮಾರು 50,000 ಮೆ.ಟನ್ ಮರಳು ನವಮಂಗಳೂರು ಬಂದರು ಮೂಲಕ ಮರಳು ಆಮದು ಮಾಡಿಕೊಂಡಿದ್ದು ಬಂದರು ಯಾರ್ಡ್ ನಲ್ಲಿ ಸಂಗ್ರಹಿಸಿಡಲಾಗಿದೆ.
Related Articles
ಈಗ ದಾಸ್ತಾನು ಇರುವ ವಿದೇಶಿ ಮರಳನ್ನು ಕರ್ನಾಟಕ ರಾಜ್ಯಕ್ಕೆ ಮಾತ್ರ ಬಳಸಬೇಕು. ಮುಂದೆ ಆಮದಾಗುವ ಮರಳನ್ನು ಹೊರರಾಜ್ಯಗಳಿಗೆ ಸಾಗಿಸಬಹುದಾಗಿದೆ. ಬೇರೆ ರಾಜ್ಯಗಳಿಗೆ ಮಲೇಷ್ಯಾ ಮರಳು ಸಾಗಿಸಲು ನವಮಂಗಳೂರು ಬಂದರು ಉಪಯೋಗಿಸಲು. ಈಗ ಚೀಲ ಬದಲು ಜಿಪಿಎಸ್ ಅಳವಡಿಸಿ ಲಾರಿಗಳಲ್ಲಿ ಸಾಗಿಸಿ ಮಾರಾಟ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ವಾರ್ಷಿಕವಾಗಿ 35 ಮಿಲಿಯನ್ ಟನ್ ಮರಳು ಬೇಡಿಕೆ ಇದ್ದು, ಇದರಲ್ಲಿ ರಾಜ್ಯದಲ್ಲಿ 9 ಮಿಲಿಯನ್ ಟನ್ ಮರಳು ಲಭ್ಯವಿದೆ.
Advertisement