Advertisement

ವಸತಿ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಿ

01:22 PM Jun 15, 2019 | Team Udayavani |

ಬೆಂಗಳೂರು: ‘ರಾಜ್ಯದಲ್ಲಿ ವಸತಿ ಹೀನರಿಗೆ ವಸತಿ ಕಲ್ಪಿಸುವ ಗುರಿಯಡಿ ಕಾಲಮಿತಿಯಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕು’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.

Advertisement

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸತತ ಎರಡನೇ ದಿನ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹತ್ತಾರು ವರ್ಷಗಳಿಂದ ಬಡವರಿಗೆ ಮನೆ ನಿರ್ಮಿಸಿಕೊಡುವ ಕೆಲಸ ಆಗುತ್ತಲೇ ಇದೆ. ಆದರೆ, ನಿರ್ವಸತಿಕರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಹುಡುಕಿ ಎಂದು ಹೇಳಿದರು.

ಎಸ್‌ಸಿಪಿ-ಟಿಎಸ್‌ಪಿ ಯೋಜನೆ ಸೇರಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಸತಿ ಯೋಜನೆಗಳನ್ನು ಸೇರಿ ಒಂದು ವರ್ಷ ಹತ್ತು ಸಾವಿರ ಕೋಟಿ ರೂ.ವರೆಗೆ ವೆಚ್ಚ ಮಾಡಿದರೂ ಪರವಾಗಿಲ್ಲ. ಬಡವರಿಗೆ ಎಷ್ಟು ಮನೆಗಳ ಅಗತ್ಯ ಇದೆಯೋ ಅಷ್ಟು ಕಟ್ಟಿಕೊಡಿ ಎಂದು ಸೂಚಿಸಿದರು.

ಜಮೀನು ಗುರುತಿಸಿ: ದೇವರಾಜ ಅರಸು ವಸತಿ ಯೋಜನೆಯಡಿ ಶೋಷಿತ ವರ್ಗದವರಿಗೆ ವಸತಿ ಸೌಲಭ್ಯ ಮಂಜೂರು ಮಾಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆ ಸಮಿತಿಯು ಹೆಚ್ಚಿನ ಆಸಕ್ತಿ ವಹಿಸಬೇಕು . ಮುಖ್ಯಮಂತ್ರಿಗಳ ಬಹುಮಹಡಿ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ಕೂಡಲೇ ಜಮೀನು ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನದ ಶೇ.75 ರಷ್ಟು ಬಿಡುಗಡೆ ಮಾಡಲಾಗುವುದು. ಕೂಡಲೇ ಅಲ್ಪಾವಧಿ ಟೆಂಡರ್‌ ಕರೆದು ಕಾಮಗಾರಿಗಳಿಗೆ ಚಾಲನೆ ನೀಡುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ಮುಖ್ಯಮಂತ್ರಿಯವರ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಗಳಿಗೆ ಮಂಜೂರಾದ 4,080 ಕಾಮಗಾರಿಗಳಲ್ಲಿ 765 ಪೂರ್ಣಗೊಂಡಿವೆ. 1,939 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಉಳಿದ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಎಂದು ಮುಖ್ಯಮಂತ್ರಿಯವರು ಸೂಚಿಸಿದರು.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರಧಾನಮಂತ್ರಿಯವರ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ತಪ್ಪದೆ ನಡೆಸುವಂತೆ ಸೂಚಿಸಿದರು. ಹೈದರಾಬಾದ್‌ -ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಯೋಜನೆಗಳು ಸಕಾಲದಲ್ಲಿ ಪೂರ್ಣಗೊಳಿಸಲು ಅನುವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ತುರ್ತಾಗಿ ಭರ್ತಿ ಮಾಡುವ ಅಗತ್ಯವಿರುವ ಹುದ್ದೆಗಳಿಗೆ ನಿವೃತ್ತ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ಹೇಳಿದರು.

ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೂ ಅನುದಾನ ಮೀಸಲಿಡಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಕಂದಾಯ ಸಚಿವ ಆರ್‌.ವಿ.ದೇಶಪಾಡೆ, ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ, ಕೃಷಿ ಸಚಿವ ಶಿವಶಂಕರರೆಡ್ಡಿ, ಎಂ.ಟಿ.ಬಿ.ನಾಗರಾಜ್‌ , ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಉಪಸ್ಥಿತರಿದ್ದರು.

ಮಾಧ್ಯಮಗಳ ಮೇಲೆ ಮತ್ತೆ ಅಸಮಾಧಾನ

ಸಾಲ ಮನ್ನಾ ಯೋಜನೆಯನ್ನು ಅತ್ಯಂತ ಪಾರದರ್ಶಕವಾಗಿ ಜಾರಿಗೊಳಿಸಿದ್ದರೂ ರಾಷ್ಟ್ರೀಕೃತ ಬ್ಯಾಂಕ್‌ಗಳ ಅಚಾತುರ್ಯಕ್ಕೂ ರಾಜ್ಯ ಸರ್ಕಾರವನ್ನೇ ಮಾಧ್ಯಮಗಳು ಹೊಣೆ ಮಾಡಿ ಸುದ್ದಿ ಪ್ರಕಟಿಸುತ್ತಿವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ನಗರಾಭಿವೃದ್ಧಿ ಇಲಾಖೆಯು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾಧ್ಯಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಸರ್ಕಾರ ಪಾರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿದೆ. ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಲ ಮನ್ನಾ ಯೋಜನೆಯನ್ನು ಒಂದು ವರ್ಷದಲ್ಲಿ ವ್ಯವಸ್ಥಿತವಾಗಿ ಕೈಗೊಂಡರೂ ಟೀಕೆ ಟಿಪ್ಪಣಿ ಕೇಳಿಬರುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಮಾಹಿತಿ ನೀಡುವಲ್ಲಿ ತೋರಿದ ಅಚಾತುರ್ಯಕ್ಕೂ ರಾಜ್ಯ ಸರ್ಕಾರವನ್ನೇ ಹೊಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಸಾಲ ಮನ್ನಾ ವಿಚಾರದಲ್ಲಿ ಹಣ ದುರ್ಬಳಕೆಯಾಗಬಾರದು, ಸಾಲ ಮನ್ನಾ ಹಣ ಮಧ್ಯವರ್ತಿಗಳಿಗೆ ಹೋಗಬಾರದೆಂಬ ಕಾರಣಕ್ಕೆ ಎಚ್ಚರ ವಹಿಸಿ ವ್ಯವಸ್ಥಿತವಾಗಿ ಜಾರಿಗೊಳಿಸಲಾಗುತ್ತಿದೆ. ದೇಶದಲ್ಲೇ ಕರ್ನಾಟಕದಲ್ಲಿ ಪಾರದರ್ಶಕವಾಗಿ ಸಾಲ ಮನ್ನಾ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದರೂ ನಮ್ಮ ಮಾಧ್ಯಮಗಳಿಗೆ ಅದನ್ನು ಗುರುತಿಸುವ ಹೃದಯ ವೈಶಾಲ್ಯತೆ ಇಲ್ಲ. ನಮ್ಮ ಸರ್ಕಾರದ ಪ್ರಾಮಾಣಿಕ ಕೆಲಸವನ್ನು ಗುರುತಿಸುವ ಬದಲಿಗೆ ಯಾರೋ ಮಾಡಿದ ತಪ್ಪಿಗೆ ಸರ್ಕಾರವನ್ನು ಹೊಣೆ ಮಾಡುವುದು ನಡೆದಿದೆ ಎಂದು ಬೇಸರ ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next