ಬೆಂಗಳೂರು: “ಸ್ಪೀಕರ್ ರಮೇಶ್ ಕುಮಾರ್ ಕೂಡಲೇ ಶಾಸಕರ ರಾಜೀನಾಮೆ ಅಂಗೀಕರಿಸಬೇಕು. ಪಕ್ಷದ ಮುಂದಿನ ನಿಲುವಿನ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕರು ಸಲ್ಲಿಸಿದ ರಾಜೀನಾಮೆಯಲ್ಲಿ ವ್ಯತ್ಯಾಸವಿದ್ದರೆ ಅದನ್ನು ತಿದ್ದಿ ಅಂಗೀಕರಿಸಬೇಕಾಗಿತ್ತು. ಹಾಗೆಂದು ನಾನು ಸ್ಪೀಕರ್ ಅವರ ತೀರ್ಮಾನ ಪ್ರಶ್ನೆ ಮಾಡುವುದಿಲ್ಲ. ಜನರ ಭಾವನೆ ಗೌರವಿಸುವುದಾಗಿ ಸ್ಪೀಕರ್ ಹೇಳಿದ್ದಾರೆ. ಜನರ ಭಾವನೆಗೆ ಸ್ಪಂದಿಸಲು ಇದೇನು ಚುನಾವಣೆಯೇ?
ಇದೇ ಬೇರೆ, ಚುನಾವಣೆಯೇ ಬೇರೆ. ಈಗಾಗಲೇ ಜನ ತೀರ್ಪು ಹೇಳಿದ್ದಾರೆ ಎಂದರು. ಸ್ಪೀಕರ್ ಅವರು ಶಾಸಕರ ರಾಜೀನಾಮೆ ಅಂಗೀಕಾರವನ್ನು ಮುಂದೂಡುವ ತಂತ್ರ ನಡೆಸುತ್ತಿದ್ದಾರೆಯೇ ಎಂದು ಕೆಲ ಕಾನೂನು ತಜ್ಞರು ಹೇಳುತ್ತಿದ್ದಾರೆ. ಹಾಗಾಗಿ ತಕ್ಷಣ ಶಾಸಕರ ರಾಜೀನಾಮೆ ಅಂಗೀಕರಿಸಬೇಕು ಎಂದು ಹೇಳಿದರು.
ಸ್ಪೀಕರ್ ಸಿಗದೆ ಬಿಜೆಪಿ ನಿಯೋಗ ವಾಪಸ್: ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆ ಸಂಬಂಧ ಸ್ಪೀಕರ್ ವ್ಯಕ್ತಪಡಿಸಿದ ನಿಲುವು ಕುರಿತಂತೆ ಚರ್ಚಿಸಲು ಬಿಜೆಪಿ ಹಿರಿಯ ನಾಯಕರ ನಿಯೋಗ ಮಂಗಳವಾರ ಸ್ಪೀಕರ್ ಭೇಟಿಗೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ವಿಧಾನಸೌಧದಲ್ಲಿನ ಸ್ಪೀಕರ್ ಕಚೇರಿಗೆ ಮಧ್ಯಾಹ್ನ 3.30ರ ಹೊತ್ತಿಗೆ ಬಿಜೆಪಿ ಶಾಸಕರಾದ ಅರವಿಂದ ಲಿಂಬಾವಳಿ, ಜೆ.ಸಿ.ಮಾಧುಸ್ವಾಮಿ, ಬಸವರಾಜ ಬೊಮ್ಮಾಯಿ, ಎನ್.ರವಿಕುಮಾರ್, ಅರವಿಂದ ಬೆಲ್ಲದ್ ಇತರರ ನಿಯೋಗ ತೆರಳಿತು. ಆ ಹೊತ್ತಿಗೆ ಸ್ಪೀಕರ್ ಕಚೇರಿಯಿಂದ ಹೊರಗೆ ಹೋಗಿದ್ದರು. ಸುಮಾರು ಒಂದು ಗಂಟೆ ಕಾಲ ಕಚೇರಿಯಲ್ಲಿ ಕಾದ ಬಿಜೆಪಿ ನಿಯೋಗ ಬಳಿಕ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕಡೆಗೆ ತೆರಳಿತು.