Advertisement

ಹು-ಧಾ ಪೊಲೀಸ್ರಿಗೆ ಶೀಘ್ರ ವಾರದ ರಜೆ

12:22 PM Aug 01, 2017 | Team Udayavani |

ಹುಬ್ಬಳ್ಳಿ: ಹು-ಧಾ ಮಹಾನಗರ ಪೊಲೀಸ್‌ ಕಮೀಷನರೇಟ್‌ ವ್ಯಾಪ್ತಿಯ ಸಿಬ್ಬಂದಿಗೆ ವಾರದ ರಜೆ (ವೀಕ್ಲಿ ಆಫ್‌)ಮಂಜೂರಾಗಿದ್ದು, ಶೀಘ್ರದಲ್ಲಿಯೇ ಅನುಷ್ಠಾನಗೊಳ್ಳಲಿದೆ ಎಂದು ಹು-ಧಾ ಕಮೀಷನರೇಟ್‌ ನ ನಿವೃತ್ತ ಪೊಲೀಸ್‌ ಆಯುಕ್ತ ಪಾಂಡುರಂಗ ಎಚ್‌. ರಾಣೆ ಹೇಳಿದರು. 

Advertisement

ಕಾರವಾರ ರಸ್ತೆಯ ಹಳೆಯ ಶಹರ ಸಶಸ್ತ್ರ ಮೀಸಲು ಪಡೆ (ಸಿಎಆರ್‌) ಮೈದಾನದಲ್ಲಿ ಸೇವಾ ನಿವೃತ್ತಿ ಹಿನ್ನೆಲೆಯಲ್ಲಿ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ಕವಾಯತು ಮತ್ತು ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. ವಾರದ ರಜೆ ವಿಷಯವಾಗಿ ಸಿಬ್ಬಂದಿಯ ಬಹುದಿನಗಳ ಬೇಡಿಕೆ ತನ್ಮೂಲಕ ಈಡೇರಿದಂತಾಗಿದೆ ಎಂದರು. 

ಮಹಾನಗರ ಪೊಲೀಸ್‌ ಇಲಾಖೆಯಲ್ಲಿ 2,700ಕ್ಕೂ ಅಧಿಕ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರೆಲ್ಲ ಒತ್ತಡದಿಂದ ಕೆಲಸ ಮಾಡಬೇಕಾಗಿದೆ. ಖಾಲಿ ಹುದ್ದೆಗಳ ಭರ್ತಿಗಾಗಿ ಸಿಬ್ಬಂದಿ ನೇಮಕಗೊಳಿಸಿದ್ದು, ಅವರೆಲ್ಲ ತರಬೇತಿ ಪಡೆದು ತಿಂಗಳೊಳಗೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಇದರಿಂದ ಪೊಲೀಸ್‌ ಇಲಾಖೆ ಮತ್ತಷ್ಟು ಬಲಗೊಳ್ಳಲಿದೆ.

ಕವಾಯತು ನಡೆಸಲು ವಿಶಾಲವಾದ ಮೈದಾನದ ಅಗತ್ಯವಿರುವ ಹಿನ್ನೆಲೆಯಲ್ಲಿ 5 ಎಕರೆ ಭೂಮಿ ಮಂಜೂರು ಮಾಡುವಂತೆ ಬೇಡಿಕೆ ಸಲ್ಲಿಸಲಾಗಿತ್ತು. ಅದಕ್ಕೆ ಜಿಲ್ಲಾಧಿಕಾರಿಗಳು ಅನುಮತಿ ಸೂಚಿಸಿದ್ದು, ಶೀಘ್ರದಲ್ಲೇ ಸುಸಜ್ಜಿತ ಮೈದಾನದ ಕಾಮಗಾರಿಗೆ ಚಾಲನೆ ದೊರೆಯಲಿದೆ.

ಜೊತೆಗೆ ಇಲಾಖೆಯ ಸಿಬ್ಬಂದಿ ಮತ್ತು ಅವರ ಕುಟುಂಬ ವರ್ಗದವರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಬೃಹತ್‌ ಕಲ್ಯಾಣ ಭವನ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಅದಕ್ಕಾಗಿ ಜಾಗ ಗುರುತಿಸಲಾಗಿದೆ ಎಂದರು. ಅವಳಿ ನಗರದ ಬಹುತೇಕ ಪೊಲೀಸ್‌ ಠಾಣೆಗಳಿಗೆ ಸ್ವಂತ ಕಟ್ಟಡವಿಲ್ಲ ಹಾಗೂ ಜಾಗದ ಸಮಸ್ಯೆ ಎದುರಿಸುವಂತಾಗಿದೆ.

Advertisement

ಕಾರಣಾಂತರಗಳಿಂದ ನನ್ನ ಸೇವಾವಧಿಯಲ್ಲಿ ಈ ಕೆಲಸ ಈಡೇರಿಸಲು ಆಗದೆ ಬಾಕಿ ಉಳಿದುಕೊಂಡಿದೆ ಎಂದರು. ಕಳೆದ ಎರಡು ವರ್ಷಗಳ ಸೇವೆಯಲ್ಲಿ ಕಮೀಷನರೇಟ್‌ನ ಸಿಬ್ಬಂದಿಯು ಉತ್ತಮ ಸಹಕಾರ, ಬೆಂಬಲ ನೀಡಿದ್ದರಿಂದ ಅವಳಿ ನಗರದಲ್ಲಿ ಶಾಂತಿ ನೆಲೆಸುವಂತೆ ಆಯಿತು ಎಂದು ಹೇಳಿದರು. 

ಪಾಂಡುರಂಗ ಎಚ್‌. ರಾಣೆ ಅವರನ್ನು  ತೆರೆದ ಜೀಪಿನಲ್ಲಿ ಕರೆದೊಯ್ದು ಗೌರವ ವಂದನೆ ಸಲ್ಲಿಸಲಾಯಿತು. ಪೊಲೀಸ್‌ ತಂಡಗಳು ಗೌರವ ಸಮರ್ಪಿಸಿದವು. ಡಿಸಿಪಿಗಳಾದ ರೇಣುಕಾ ಸುಕುಮಾರ, ಬಿ.ಎಸ್‌. ನೇಮಗೌಡ, ಎಸಿಪಿಗಳಾದ ಎನ್‌.ಬಿ. ಸಕ್ರಿ, ಎಚ್‌.ಡಿ. ದಾವೂದ್‌ಖಾನ್‌, ಎಂ.ವಿ. ನಾಗನೂರ, ವಾಸುದೇವರಾವ್‌ ಎನ್‌., ನಿವೃತ್ತ ಪೊಲೀಸ್‌ ಅಧಿಕಾರಿಗಳು, ಇನ್ಸ್‌ಪೆಕ್ಟರ್‌ಗಳು, ಪಿಎಸ್‌ಐಗಳು, ಎಎಸ್‌ಐಗಳು ಹಾಗೂ ಸಿಬ್ಬಂದಿ ಇದ್ದರು.   

Advertisement

Udayavani is now on Telegram. Click here to join our channel and stay updated with the latest news.

Next