Advertisement

ಕರ್ನಾಟಕ ಜರ್ಮನ್‌ ತಾಂತ್ರಿಕ ತರಬೇತಿಸಂಸ್ಥೆ ಶೀಘ್ರ ಪ್ರಾರಂಭ

12:49 PM Jan 28, 2017 | |

ದಾವಣಗೆರೆ: ಮಾಹಿತಿ ತಂತ್ರಜ್ಞಾನ, ಕೈಗಾರಿಕಾ ಪಾರ್ಕ್‌ ಮಾದರಿಯಲ್ಲಿ ದಾವಣಗೆರೆಯಲ್ಲಿ ಕರ್ನಾಟಕ ಜರ್ಮನ್‌ ತಾಂತ್ರಿಕ ತರಬೇತಿ ಸಂಸ್ಥೆ ಪ್ರಾರಂಭಿಸಲಾಗುವುದು ಎಂದು ವೃತ್ತಿ ತರಬೇತಿ  ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ. 

Advertisement

ಶುಕ್ರವಾರ  ಬಾಷಾನಗರದ ಮಿಲ್ಲತ್‌ ಐಟಿಐ ಮತ್ತು ಡಾ| ಜಾಕೀರ್‌ ಹುಸೇನ್‌ ಪ್ರಥಮ ದರ್ಜೆ ಕಾಲೇಜುನಲ್ಲಿ ಡಿಗ್ರಿ, ಡಿಪೊಮೋ ಮತ್ತು ಐಟಿಐ ನಂತರ  ದೊರಕುವ ಅವಕಾಶಗಳು ಕುರಿತು ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿಗಮದಿಂದ ಈಗಾಗಲೇ  ಬೆಂಗಳೂರು, ಕಲಬುರುಗಿ, ಬೆಳಗಾವಿ, ತುಮಕೂರು ಮತ್ತು ಹುಬ್ಬಳ್ಳಿಯಲ್ಲಿ ಕರ್ನಾಟಕ ಜರ್ಮನ್‌ ತಾಂತ್ರಿಕ ತರಬೇತಿ ಸಂಸ್ಥೆ ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ  ದಾವಣಗೆರೆ ಒಳಗೊಂಡಂತೆ ಎಲ್ಲಾ ಕಡೆ ಚಿಂತನೆ ಇದೆ. 

ದಾವಣಗೆರೆಯಲ್ಲಿ ನಿಗಮದಿಂದ ಮಾಹಿತಿ  ಕಾರ್ಯಾಗಾರ ನಡೆಸಲಾಗುವುದು ಎಂದು ತಿಳಿಸಿದರು. ಕರ್ನಾಟಕ ಜರ್ಮನ್‌ ತಾಂತ್ರಿಕ ತರಬೇತಿ ಸಂಸ್ಥೆಗೆ ಬೇಕಾದಂತಹ 10 ಎಕರೆ ಜಾಗ ಒದಗಿಸುವ ಬಗ್ಗೆ ಜಿಲ್ಲಾಡಳಿತ ಸಕರಾತ್ಮಕವಾಗಿ ಪ್ರತಿಕ್ರಿಯಿಸಿದೆ.

ಜರ್ಮನ್‌ ತಾಂತ್ರಿಕ ತರಬೇತಿ ಸಂಸ್ಥೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಎಸ್‌. ಮಲ್ಲಿಕಾರ್ಜುನ್‌, ಸಮಾಜ ಕಲ್ಯಾಣ  ಇಲಾಖೆ ಸಚಿವ ಎಚ್‌. ಆಂಜನೇಯ ಅತೀವ ಉತ್ಸುಕರಾಗಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ  ದಿಗ್ಗಜ ಕಂಪನಿಗಳಾದ ಇನ್ಫೋಸಿಸ್‌, ಟೆಕ್‌ ಮಹೀಂದ್ರಾ ಇತರೆ ಹಾಗೂ ಮೆಕ್ಯಾನಿಕಲ್‌ ಕ್ಷೇತ್ರದ ಹೆಸರಾಂತ ಕಂಪನಿಗಳಿಗೆ ಉದ್ಯೋಗ  ತರಬೇತಿ ಪಾರ್ಕ್‌ ಸ್ಥಳವಕಾಶ ನೀಡಲಾಗುವುದು. 

Advertisement

ಆ ಕಂಪನಿಗಳು ದಾವಣಗೆರೆ ಮತ್ತು ಸುತ್ತಮುತ್ತಲಿನ ಜಿಲ್ಲೆಯ  ವಿದ್ಯಾರ್ಥಿಗಳಿಗೆ ತರಬೇತಿ  ನೀಡಲಿವೆ. ತರಬೇತಿ ಅವಧಿಯಲ್ಲಿ ವಿದ್ಯಾರ್ಥಿಗಳ ಆಸಕ್ತಿ ಆಧಾರದಲ್ಲಿ ತಮ್ಮ ಕಂಪನಿಗಳಲ್ಲಿ ಉದ್ಯೋಗದ ಅವಕಾಶ  ಮಾಡಿಕೊಡಲಿವೆ ಎಂದು  ತಿಳಿಸಿದರು. 

ಯುವ ಜನಾಂಗದ ಸಬಲತೆಗೆ ಅಗತ್ಯವಾಗಿರುವ ವೃತ್ತಿ ತರಬೇತಿ, ಕೌಶಲ್ಯ ಒದಗಿಸುವತ್ತ ಸಾಕಷ್ಟು ಉತ್ಸಾಹ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ 3 ತಿಂಗಳ ಹಿಂದೆ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮವನ್ನು ತಮ್ಮ ಅಧೀನದಲ್ಲಿಟ್ಟುಕೊಂಡಿದ್ದಾರೆ.

15ರಿಂದ  40 ವಯೋಮಾನದ ಯುವ ಜನಾಂಗಕ್ಕೆ ಇನ್ನು ಮುಂದೆ ಆಯಾಯ ಕ್ಷೇತ್ರದಲ್ಲಿನ ಅತ್ಯುನ್ನತ ಪರಣಿತ  ತಂತ್ರಜ್ಞರು, ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಒದಗಿಸುವ ವ್ಯವಸ್ಥೆ ಮಾಡಲಾಗುವುದು. ತರಬೇತಿ ಕೊಡುವ ಬಗ್ಗೆ ಟೊಯೋಟಾ, ನ್ಫೋಸಿಸ್‌, ಟೆಕ್‌  ಮಹೀಂದ್ರಾ ಇತರೆ ಪ್ರತಿಷ್ಠಿತ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. 

ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ ಪೂರೈಸಿ, ಪ್ರಮಾಣಪತ್ರ ಪಡೆದುಕೊಂಡ ನಂತರ ಎಲ್ಲರೂ  ಉದ್ಯೋಗವಕಾಶಗಳತ್ತ ಗಮನ ಹರಿಸುತ್ತಾರೆ. ಸೂಕ್ತ ಉದ್ಯೋಗ ದೊರೆಯದೇ ಹೋದಲ್ಲಿ ನಿರುದ್ಯೋಗಳಾಗಿ ಇತರೆ ವಿಚಾರದತ್ತ ಗಮನ  ಹರಿಸುತ್ತಾರೆ. 

ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ ಮಾಡಿಕೊಂಡಿರುವರಿಗೆ ಅಗತ್ಯ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ  ನಿಗಮದಿಂದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಉದ್ಯೋಗಮೇಳ ನಡೆಸಲಾಗುತ್ತಿದೆ. ಮೇಳಕ್ಕೆ ಪೂರ್ವಭಾವಿಯಾಗಿ ತಾಲೂಕು ಕೇಂದ್ರದಲ್ಲಿ ಕಾರ್ಯಾಗಾರ ಆಯೋಜಿಸಿ, ಸಂದರ್ಶನದ  ಸಿದ್ಧತೆ, ಎದುರಿಸುವ ಬಗೆ ಒಳಗೊಂಡಂತೆ ಎಲ್ಲಾ ಪೂರ್ವ ಸಿದ್ಧತಾ ತರಬೇತಿ ನೀಡಲಾಗುವುದು ಎಂದು ತಿಳಿಸಿದರು. 

ಸ್ವಯಂ ಉದ್ಯೋಗ ಪ್ರಾರಂಭಿಸುವಂತಹವವರಿಗೆ ಸಹ ನಿಗಮದಿಂದ ಪ್ರತಿಯೊಂದು ವಿಚಾರದ ಬಗ್ಗೆ ಸೂಕ್ತ  ಮಾರ್ಗದರ್ಶನ, ಸಲಹೆ, ಸಹಕಾರ ನೀಡಲಾಗುತ್ತಿದೆ. ವಿದೇಶದಲ್ಲಿ ಉನ್ನತ ವ್ಯಾಸಂಗ, ತರಬೇತಿ ಬಯಸುವರಿಗೆ 3 ವರ್ಷದ ನಂತರ ಕಡಿಮೆ  ಬಡ್ಡಿ ದರದಲ್ಲಿ ತೀರುವಳಿ ಮಾಡುವ ಸಾಲ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು. 

ಮಿಲ್ಲತ್‌ ಕೈಗಾರಿಕಾ ತರಬೇತಿ ಕೇಂದ್ರ ಗೌರವ ಕಾರ್ಯದರ್ಶಿ ಸೈಯದ್‌ ಸೈಪುಲ್ಲಾ ಅಧ್ಯಕ್ಷತೆ ವಹಿಸಿದ್ದರು. ನಗರಪಾಲಿಕೆ ಮಾಜಿ ಸದಸ್ಯ ಎನ್‌.ಕೆ. ಇಸ್ಮಾಯಿಲ್‌, ಸಹಕಾರ ಇಲಾಖೆ ನಿವೃತ್ತ  ಉಪ ನಿಬಂಧಕ ಮುಸ್ತಾಕ್‌ ಅಹಮ್ಮದ್‌, ಗೋವಿಂದರಾಜ್‌, ಜಿಲ್ಲಾ ಉದ್ಯೋಗಾಧಿಕಾರಿ ಜಿ.ಜೆ. ರುದ್ರಣ್ಣಗೌಡ, ಎಚ್‌. ಮಲ್ಲೇಶ್‌, ಹನುಮಂತಪ್ಪ,  ಬುಳಸಾಗರದ ಸಿದ್ದರಾಮಣ್ಣ ಇತರರು ಇದ್ದರು. ಐಟಿಐ ಪ್ರಾಚಾರ್ಯ ಜಬೀವುಲ್ಲಾ ಸ್ವಾಗತಿಸಿದರು. ಫರಾನ ನಿರೂಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next