ತಿ.ನರಸೀಪುರ: ಸೋಮನಾಥಪುರ ಗ್ರಾಮದಲ್ಲಿ ಗಡಿ ರೇಖೆ ಗುರುತಿಸುವಲ್ಲಿ ಆಗಿರುವ ವ್ಯತ್ಯಾಸದಿಂದ ಸಮಸ್ಯೆ ಎದುರಾಗಿದ್ದು, ಪುರಾತತ್ವ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಸಭೆ ಕರೆದು ಶೀಘ್ರ ಸಮಸ್ಯೆ ಬಗೆಹರಿಸುವುದಾಗಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಭರವಸೆ ನೀಡಿದರು.
ತಾಲೂಕಿನ ಸೋಮನಾಥಪುರದಲ್ಲಿ ಪುರಾತತ್ವ ಇಲಾಖೆ ಪ್ರಾಚೀನ ಸ್ಮಾರಕ ಚನ್ನಕೇಶವ ದೇವಾಲಯದ ಅಕ್ಕಪಕ್ಕದಲ್ಲಿರುವ ನಿವಾಸಿಗಳ ಶಿಥಿಲಾವಸ್ಥೆಯಲ್ಲಿರುವ ಮನೆಗಳ ದುರಸ್ತಿ ಹಾಗೂ ಮನೆಗಳ ನಿರ್ಮಾಣಕ್ಕೆ ಅನುಮತಿ ನೀಡದಂತೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ, ಶಿಥಿಲಾವಸ್ಥೆಯಲ್ಲಿರುವ ಎಲ್ಲಾ ಮನೆಗಳನ್ನು ಪರಿಶೀಲಿಸಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ ಕೂಡಲೇ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.
ನಕ್ಷೆ ನೋಡಿ ಗುರುತಿಸಿ: ನಮಗಿರುವ ಮಾಹಿತಿ ಪ್ರಕಾರ ಪುರಾತತ್ವ ಇಲಾಖೆಗೆ 1 ಎಕರೆ 17 ಗುಂಟೆ ಮಾತ್ರ ಸೇರಿದೆ. ಉಳಿದಿದ್ದು ರಾಜ್ಯ ಸರ್ಕಾರಕ್ಕೆ ಸೇರಿರುವ ಬಿ. ಖರಾಬು ಜಮೀನಾಗಿದೆ. ಆದರೆ ಕಂದಾಯ ಇಲಾಖೆಯನ್ವಯ 1.17 ಎಕರೆ ಮಾತ್ರ ಇದೆ.
ಸರ್ಕಾರಿ ಜಮೀನು ನಕ್ಷೆ ತೋರಿ ಗಡಿ ಭಾಗವನ್ನು ಗುರುತಿಸಲು ಅಗತ್ಯ ಎಲ್ಲಾ ಸೂಚನೆಗಳನ್ನು ನೀಡುತ್ತೇವೆ. 100 ಮೀಟರ್ ವ್ಯಾಪ್ತಿಯೊಳಗೆ ಇದೆ ಎಂದು ಹೇಳಲು ಅಗತ್ಯ ದಾಖಲೆಗಳಿರಬೇಕಿತ್ತು. ಆದರೆ ನೀವೇ ಸರ್ಕಾರಿ ಜಮೀನನ್ನು ಸೇರಿಸಿ ಹೆಚ್ಚವರಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಈ ಸಮಸ್ಯೆ ಉಂಟಾಗಿದೆ ಎಂದು ಪುರಾತತ್ವ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.
ಸಭೆ: ಈ ಬಗ್ಗೆ ಪ್ರಾದೇಶಿಕ ಆಯುಕ್ತರು, ಮೈಸೂರು ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳನ್ನು ಕರೆದು ಸಭೆ ಮಾಡಲಾಗುವುದು ಹಾಗೂ ನಮ್ಮ ಜಾಗವನ್ನು ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಶಾಸಕ ಅಶ್ವಿನ್ ಕುಮಾರ್ ಮಾತನಾಡಿ, ದೇವಾಲಯ ಯಾವ ಸರ್ವೆ ನಂಬರ್‌ನಲ್ಲಿದೆ ಎಂಬುದನ್ನು ಖಚಿತಪಡಿಸಬೇಕಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸರ್ವೆ ನಂಬರ್ ಯಾವುದರಲ್ಲಿದೆ ಎಂಬುದನ್ನು ಕೂಡಲೇ ಪತ್ತೆ ಮಾಡಿ ತಹಶೀಲ್ದಾರ್ ಹಾಗೂ ಕಂದಾಯಾಧಿಕಾರಿಗಳು ವರದಿ ನೀಡಬೇಕು. 15 ದಿನಗಳೊಳಗೆ ಕಂಪ್ಯೂಟರ್ ಆರ್‌ಟಿಸಿ ಸಿದ್ಧಪಡಿಸಿದರೆ ಸಭೆ ಕರೆಯುವುದಾಗಿ ತಿಳಿಸಿದರು.
ಈ ವೇಳೆ ಪುರಾತತ್ವ ಇಲಾಖೆ ಅಧೀಕ್ಷಕಿ ಕೆ.ಮೂರ್ತೇಶ್ವರಿ, ತಾಪಂ ಇಒ ಡಾ.ನಂಜೇಶ್, ಸೋಮನಾಥಪುರ ಗ್ರಾಪಂ ಅಧ್ಯಕ್ಷ ಮಂಜೇಶ್‌ಗೌಡ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವಯ್ಯ, ತಾಪಂ ಇಒ ಸದಸ್ಯರಾದ ಸುರೇಶ್, ಮುಖಂಡರಾದ ದಯಾನಂದ್ ಪಟೇಲ್, ಸುರೇಶ್, ಜಯ್‌ಕುಮಾರ್, ರಾಮಾನುಜ, ಜಯಪಾಲ ಭರಣಿ, ಪ್ರೀತಂ ಮತ್ತಿತರರಿದ್ದರು.