ಚಿಕ್ಕಮಗಳೂರು: ಬಹು ದಶಕಗಳಿಂದ ಕಗ್ಗಂಟಾಗಿರುವ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ದರ್ಗಾ ವಿವಾದಕ್ಕೆ ಶೀಘ್ರ ಪರಿಹಾರ ಸಿಗುವ ಮುನ್ಸೂಚನೆ ದೊರೆತಿದ್ದು, ಇದನ್ನು ಶಾಸಕ ಸಿ.ಟಿ.ರವಿ ಹೇಳಿಕೆ ಪುಷ್ಟೀಕರಿಸಿದೆ.
ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್‌ದರ್ಗಾ ವಿವಾದ ಅನೇಕ ವರ್ಷಗಳಿಂದ ನ್ಯಾಯಾಲಯದಲ್ಲಿದ್ದು, ಅರ್ಚಕರ ನೇಮಕ ಸಂಬಂಧ ಇತ್ತೀಚೆಗೆ ಹೈಕೋರ್ಟ್ ಸರ್ಕಾರ ಮಟ್ಟದಲ್ಲಿ ಸಮಸ್ಯೆ ಪರಿಹರಿಸುವಂತೆ ಸೂಚನೆ ನೀಡಿತ್ತು. ಅದರಂತೆ ರಾಜ್ಯ ಸರ್ಕಾರ ಸಚಿವ ಸಂಪುಟ ಸಮಿತಿ ರಚಿಸಿತ್ತು. ಸಮಿತಿ ಜಿಲ್ಲೆಯ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ದರ್ಗಾಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜಿಲ್ಲಾ ಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಾಗಿತ್ತು. ನಂತರ ಯಾವುದೇ ಬೆಳವಣಿಗೆ ಜನರ ಗಮನಕ್ಕೆ ಬಂದಿರಲಿಲ್ಲ.
ಆದರೆ ಮಂಗಳವಾರ ಕಡೂರು ಪಟ್ಟಣದಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆ ಸಮಾರಂಭದಲ್ಲಿ ಶಾಸಕ ಸಿ.ಟಿ. ರವಿ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ದರ್ಗಾ ವಿವಾದ ಪ್ರಸ್ತಾಪಿಸಿ, ಸಿಎಂ ಬಸವರಾಜ ಬೊಮ್ಮಾಯಿ ದತ್ತಪೀಠಕ್ಕೆ ನ್ಯಾಯ ಕೊಡುವ ಕೆಲಸ ಮಾಡಲಿದ್ದಾರೆ. ಇದೇ ವಾರದಲ್ಲಿ ಅಂದರೆ ಶನಿವಾರದೊಳಗೆ ದತ್ತಪೀಠಕ್ಕೆ ನ್ಯಾಯ ಕೊಡುವ ಆದೇಶ ಬರಲಿದೆ ಎಂದರು.
ರಾಮನಿಗೆ (ಅಯೋಧ್ಯೆ) ನ್ಯಾಯ ಕೊಡಿಸುವ ಕೆಲಸ ಮಾಡಿದ್ದು ಬಿಜೆಪಿ ಸರ್ಕಾರ. ಕಾಶಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದು ಬಿಜೆಪಿ ಸರ್ಕಾರ. ಕಾಶ್ಮೀರ, ಉಜ್ಜಯಿನಿ, ಸೋಮನಾಥದ ಪುರಾತನ ದೇವಸ್ಥಾನಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದು ಬಿಜೆಪಿ. ಅದೇ ರೀತಿ ದತ್ತಪೀಠಕ್ಕೆ ಬಿಜೆಪಿ ನ್ಯಾಯ ಕೊಡಿಸಲಿದೆ. ಕಾಂಗ್ರೆಸ್ ಅನ್ಯಾಯ ಮಾಡುವ ಕೆಲಸ ಮಾಡಿದೆ ಎಂದರು.
ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಸಿ.ಟಿ.ರವಿ ವರ್ಷಕ್ಕೊಮ್ಮೆ ದತ್ತಮಾಲೆ ಧರಿಸಿ ಬರುತ್ತಾರೆ. ಮತ್ತೆ ವರ್ಷವಿಡೀ ಮಾಯವಾಗುತ್ತಾರೆ ಎಂಬ ಆರೋಪಕ್ಕೆ ಸಭೆಯಲ್ಲಿ ಪ್ರತಿಕ್ರಿಯಿಸಿದ ಸಿ.ಟಿ.ರವಿ, ನಾನು ವರ್ಷಕ್ಕೊಮ್ಮೆ ದತ್ತಮಾಲೆ ಧರಿಸಿ ಸುಮ್ಮನಾಗುವ ವ್ಯಕ್ತಿಯಲ್ಲ ಎಂದು ತಿರುಗೇಟು ನೀಡಿದರು.