ದಾವಣಗೆರೆ: ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಸಾರ್ವಜನಿಕರ ಮನವಿಗಳಿಗೆ ತ್ವರಿತವಾಗಿ ಸ್ಪಂದಿಸುವ ಮೂಲಕ ಸಮಸ್ಯೆ ಪರಿಹರಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ಸೂಚಿಸಿದರು. ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜನಸ್ಪಂದನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನಸ್ಪಂದನ ಸಭೆಯ ಮೂಲಕ ಅನೇಕ ಸಮಸ್ಯೆಗಳು ಸ್ಥಳದಲ್ಲಿಯೇ ಇತ್ಯರ್ಥವಾಗುತ್ತವೆ. ಅಲ್ಲದೆ ಅಧಿಕಾರಿಗಳ ಕಾರ್ಯವೈಖರಿಯೂ ತಿಳಿಯುತ್ತದೆ. ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಉದ್ದೇಶದಿಂದ ಜನಸ್ಪಂದನಾ ಸಭೆಯನ್ನು ಪುನರಾರಂಭಿಸಲಾಗಿದೆ ಎಂದರು.
ಜಗಳೂರು ತಾಲೂಕಿನ ಗಡಿ ಭಾಗದ ಚಿಕ್ಕ ಮಲ್ಲನಹೊಳೆ ಗ್ರಾಮದ ವ್ಯಕ್ತಿಯೊಬ್ಬರು ಗ್ರಾಮದಲ್ಲಿ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳಿವೆ. ನ್ಯಾಯ ಬೆಲೆ ಅಂಗಡಿ ಹೊರತುಪಡಿಸಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ, ಬಸ್ ತಂಗುದಾಣ, ಗ್ರಂಥಾಲಯ, ಸಮುದಾಯ ಭವನ, ಚೆಕ್ ಡ್ಯಾಂ ರಿಪೇರಿ, ಬ್ಯಾಂಕ್ ಶಾಖೆ ಸೇರಿದಂತೆ ಅಗತ್ಯ ಸೌಲಭ್ಯ ಗ್ರಾಮಕ್ಕೆ ಒದಗಿಸುವಂತೆ ಕೋರಿ ಸಲ್ಲಿಸಿದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಗ್ರಾಮಕ್ಕೆ ತಾವೇ ಖುದ್ದಾಗಿ ಭೇಟಿ ನೀಡಿ, ಪರಿಶೀಲನೆ ನಡೆಸಲಾಗುವುದು. ಗ್ರಾಮಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸಲು ಅಗತ್ಯ ಕ್ರಮ ಜರುಗಿಸುವ ಭರವಸೆ ನೀಡಿದರು.
ಚನ್ನಗಿರಿ ತಾಲೂಕಿನ ಕರೆಕಟ್ಟೆ ಗ್ರಾಮದ ವೃದ್ಧರೊಬ್ಬರು, ಭತ್ತದ ಅಂಗಡಿ ಮಾಲೀಕನೊಬ್ಬ ಭತ್ತ ಖರೀದಿಸಿ ಹಣ ನೀಡದೆ ಮೋಸ ಮಾಡಿದ್ದು, ನ್ಯಾಯ ದೊರಕಿಸುವಂತೆ ಮನವಿ ಮಾಡಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ರಕ್ಷಣಾಧಿಕಾರಿ ಜೊತೆ ಚರ್ಚಿಸಿ, ನ್ಯಾಯ ದೊರಕಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಚನ್ನಗಿರಿ ತಾಲೂಕಿನ ಸೋಮಲಾಪುರ ಗ್ರಾಮಕ್ಕೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ಕಲ್ಪಿಸುವಂತೆ ಗ್ರಾಮದ ಮುಖಂಡರೊರ್ವರು ಮಾಡಿದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಕೂಡಲೇ ಸೋಮಲಾಪುರ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಾರಿಗೆ ಸಂಸ್ಥೆ ವಿಭಾಗದ ಮುಖ್ಯಸ್ಥರಿಗೆ ಸೂಚಿಸಿದರು.
ದಾವಣಗೆರೆಯ ರವೀಂದ್ರನಾಥ್ ಬಡಾವಣೆಯ ನಿವಾಸಿಯೊಬ್ಬರು, ಬಡಾವಣೆಯಲ್ಲಿ ರಸ್ತೆಗಳು, ಪಾರ್ಕ್‌ಗಳು ಹಾಳಾಗಿವೆ. ಅಭಿವೃದ್ಧಿಗೆ ಮನವಿ ಮಾಡಿದರು. ಬಡಾವಣೆಯ ಸಮಸ್ಯೆಗಳನ್ನು ಸರ್ಕಾರ ಬಿಡುಗಡೆ ಮಾಡುವ ಅನುದಾನಕ್ಕೆ ಅನುಗುಣವಾಗಿ ಹಂತ ಹಂತವಾಗಿ ಅನುದಾನ ಒದಗಿಸಿ ಅಭಿವೃದ್ಧಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭರವಸೆ ನೀಡಿದರು. ಹರಿಹರದ ವಿದ್ಯಾರ್ಥಿಯೊಬ್ಬರು ಲ್ಯಾಪ್ ಟಾಪ್ ಒದಗಿಸುವಂತೆ ಮನವಿ ಮಾಡಿದರು. ಸರ್ಕಾರದ ಯೋಜನೆ ಯಡಿ ನಗರಸಭೆ ವತಿಯಿಂದ ನೀಡಲಾಗುವ ಸೌಲಭ್ಯದಡಿ ಲ್ಯಾಪ್‌ಟಾಪ್ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಕೋಶ ಯೋಜನಾಧಿಕಾರಿ ಜಿ. ನಜ್ಮಾ ಅವರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ದಾವಣಗೆರೆ ತಾಲೂಕಿನ ಹೂವಿನಮಡು ಗ್ರಾಮದಲ್ಲಿ ಚೌಡೇಶ್ವರಿ ದೇವಸ್ಥಾನದ ಕಟ್ಟಡ ತೆರವುಗೊಳಿಸಿ, ಜಾಗವನ್ನು ಒತ್ತುವರಿ ಮಾಡಿಕೊಂಡು ಅಡಿಕೆ ತೋಟ ನಿರ್ಮಾಣ ಮಾಡಿಕೊಳ್ಳಲಾಗಿದೆ, ಸ್ಥಳ ದೇವಸ್ಥಾನಕ್ಕೆ ಸೇರಿದ್ದು ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡರು. ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಒತ್ತುವರಿಯಾಗಿದ್ದಲ್ಲಿ ಪೊಲೀಸ್ ನೆರವು ಪಡೆದು ತೆರವುಗೊಳಿಸುವಂತೆ ತಹಶೀಲ್ದಾರ್ ಬಸನಗೌಡ ಕೋಟೂರು ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿದೇರ್ಶಕ ಕೆ.ಎಚ್. ವಿಜಯ್‌ಕುಮಾರ್, ಜಿಲ್ಲಾಡಳಿತ ಭವನದಲ್ಲಿ ಶಿಶುಪಾಲನಾ ಕೇಂದ್ರ ತೆರೆಯಲು ಕೊಠಡಿ ಒದಗಿಸುವಂತೆ ಮನವಿ ಮಾಡಿದರು. ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಭವನದಲ್ಲಿ ಶಿಶುಪಾಲನಾ ಕೇಂದ್ರ ತೆರೆಯುವುದು ಒಳ್ಳೆಯ ಕಾರ್ಯವಾಗಿದೆ. ಶೀಘ್ರ ಕೊಠಡಿ ಒದಗಿಸಲಾಗುವುದು ಎಂದರು.
ಮುಖ್ಯಮಂತ್ರಿಗಳ ಪರಿಹಾರ ನಿಧಿ, ಬಸ್ ವ್ಯವಸ್ಥೆ, ಪಹಣಿ, ಜಾತಿ ಪ್ರಮಾಣ ಪತ್ರ ಒದಗಿಸುವುದು ಸೇರಿದಂತೆ ಸಾರ್ವಜನಿಕರಿಂದ ಅನೇಕ ಅಹವಾಲುಗಳನ್ನು ಸ್ವೀಕರಿಸಲಾಯಿತು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಡಾ| ಚನ್ನಪ್ಪ, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಪಿ. ಮುದ್ದಜ್ಜಿ, ದೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ| ಶ್ರೀನಿವಾಸ್ ಚಿಂತಾಲ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು ಭಾಗವಹಿಸಿದ್ದರು.