Advertisement

ಕುಡಿಯುವ ನೀರಿನ ಪಂಪ್‌ಗೆ ಶೀಘ್ರ ವಿದ್ಯುತ್‌ ಸಂಪರ್ಕ

03:20 PM Nov 26, 2017 | |

ನಗರ: ಬೇಸಗೆಯಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆ ನೀಗುವ ಉದ್ದೇಶದಿಂದ ಮೆಸ್ಕಾಂ ಸಹಕರಿಸುವಂತೆ ಕಾರ್ಯಪಾಲಕ ಅಭಿಯಂತರ ನಾರಾಯಣ ಪೂಜಾರಿ ಅವರಿಗೆ ಪುತ್ತೂರು ನಗರಸಭೆ ವತಿಯಿಂದ ಮನವಿ ಸಲ್ಲಿಸಲಾಯಿತು. ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ಹಾಗೂ ಸದಸ್ಯರ ತಂಡ, ಮೆಸ್ಕಾಂ ಕಾರ್ಯಪಾಲಕ ಅಭಿಯಂತರರನ್ನು ಭೇಟಿಯಾಗಿ, ಈ ಬಗ್ಗೆ ಚರ್ಚೆ ನಡೆಸಿದರು.

Advertisement

ಬೇಸಗೆಯಲ್ಲಿ ನಗರಸಭೆ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗುತ್ತದೆ. ಈ ಹೊತ್ತಿನಲ್ಲಿ ಸರಕಾರದ ನಿಯಮವನ್ನು ಬದಿಗಿಟ್ಟು, ತತ್‌ಕ್ಷಣ ವಿದ್ಯುತ್‌ ಸಂಪರ್ಕ ನೀಡಿ ಕುಡಿಯುವ ನೀರಿಗೆ ವ್ಯವಸ್ಥೆ ನೀಡಬೇಕಾಗುತ್ತದೆ. ಕುಡಿಯುವ ನೀರು ಪೂರೈಸುವ ಹಿನ್ನೆಲೆಯಲ್ಲಿ ನಿಯಮಗಳಲ್ಲಿ ಸಡಿಲಿಕೆ ಮಾಡುವಂತೆ ಸರಕಾರವೇ ಆದೇಶ ನೀಡಿದೆ. ಇದರಂತೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಪುತ್ತೂರು ನಗರ ಪ್ರದೇಶದಲ್ಲಿ ತೀವ್ರ ಕುಡಿಯುವ ನೀರಿನ ಅಭಾವವಿರುವ 11 ಪ್ರದೇಶಗಳನ್ನು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಕೊಳವೆ ಬಾವಿ ಕೊರೆದು, ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡಲು ನಗರಸಭೆ ಮುಂದಾಗಿದೆ. ಆದರೆ ಈ ಕುಡಿಯುವ ನೀರು ಪೂರೈಸುವ ಪಂಪುಗಳಿಗೆ ವಿದ್ಯುತ್‌ ಸಂಪರ್ಕ ನೀಡಲು ವಿಳಂಬವಾಗುತ್ತಿದೆ. ಇದು ಇನ್ನಷ್ಟು ವಿಳಂಬವಾದರೆ ಬೇಸಗೆಯಲ್ಲಿ ಪರಿಸ್ಥಿತಿ ತೀರಾ ಹದಗೆಡಲಿದೆ. ಆದ್ದರಿಂದ ಮೆಸ್ಕಾಂ ಪಂಪುಗಳಿಗೆ ತತ್‌ಕ್ಷಣ ವಿದ್ಯುತ್‌ ಸಂಪರ್ಕ ನೀಡುವಂತೆ ಒತ್ತಾಯಿಸಿದರು. ಇದಲ್ಲದೇ, ನಗರದ 6 ಕಡೆಗಳಲ್ಲಿ ಹೈ ಮಾಸ್ಟ್‌ ದೀಪ ಅಳವಡಿಸಲಾಗಿದ್ದು, ಎರಡು ತಿಂಗಳುಗಳು ಕಳೆದಿವೆ. ಆದರೆ ಇದಕ್ಕೆ ವಿದ್ಯುತ್‌ ಸಂಪರ್ಕ ಇನ್ನೂ ನೀಡಿಲ್ಲ. ಜನರು ಜನಪ್ರತಿನಿಧಿಗಳನ್ನು ಪ್ರಶ್ನಿಸಲು ಶುರು ಮಾಡಿದ್ದಾರೆ. ಶೀಘ್ರ ಈ ಬಗ್ಗೆ ಮೆಸ್ಕಾಂ ಕ್ರಮ
ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಕ್ರಮ ಕೈಗೊಳ್ಳಲಾಗುವುದು
ಮೆಸ್ಕಾಂ ಕಾರ್ಯಪಾಲಕ ಅಭಿಯಂತರ ನಾರಾಯಣ ಪೂಜಾರಿ ಮಾತನಾಡಿ, ಪ್ರತಿಯೊಂದು ಕೊಳವೆ ಬಾವಿಯ ವಿದ್ಯುತ್‌ ಪಂಪ್‌ಗೆ ಪ್ರತ್ಯೇಕ ಟಿಸಿ ಅಳವಡಿಸಬೇಕೆಂದು ಇಲಾಖೆ ನಿಯಮ ವಿಧಿಸಿದೆ. ಆದ್ದರಿಂದ ಟಿಸಿ ಅಳವಡಿಸದೆ ವಿದ್ಯುತ್‌ ಸಂಪರ್ಕ ನೀಡುವುದು ಕಷ್ಟಕರ. ಕುಡಿಯುವ ನೀರಿನ ಯೋಜನೆಗೆ ವಿದ್ಯುತ್‌ ಸಂಪರ್ಕ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭ ನಗರಸಭಾ ಉಪಾಧ್ಯಕ್ಷ ವಿಶ್ವನಾಥ ಗೌಡ, ಸದಸ್ಯರಾದ ಎಚ್‌. ಮಹಮ್ಮದ್‌ ಆಲಿ, ಮುಖೇಶ್‌ ಕೆಮ್ಮಿಂಜೆ, ನಗರಸಭಾ ಕಾರ್ಯಪಾಲಕ ಅಭಿಯಂತರ ಪುರಂದರ ಎಂ.ಕೆ., ನಗರಸಭಾ ನೀರಿನ ವಿಭಾಗದ ವಸಂತ, ಗುತ್ತಿಗೆದಾರ ಸುಧಾಕರ್‌ ಉಪಸ್ಥಿತರಿದ್ದರು.

ಮೀಟರ್‌ ಸರಬರಾಜು ವಿಳಂಬ
ಹೈಮಾಸ್ಟ್‌ ದೀಪಕ್ಕೂ ಮೀಟರ್‌ ಅಳವಡಿಕೆ ಕಡ್ಡಾಯ. ಇದುವರೆಗೆ ಮೀಟರ್‌ ಸರಬರಾಜು ಆಗದೇ ಇರುವುದರಿಂದ ಸಂಪರ್ಕ ನೀಡಲು ವಿಳಂಬವಾಗಿದೆ. ಮೀಟರ್‌ ಬಂದ ಕೂಡಲೇ ಈ ದೀಪಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗುವುದು ಎಂದು ಮೆಸ್ಕಾಂ ಕಾರ್ಯಪಾಲಕ ಅಭಿಯಂತರ ನಾರಾಯಣ ಪೂಜಾರಿ ಅವರು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next